ಗಲ್ಫ್

ಮಳೆಗಾಗಿ ಕೃತಕ ಪರ್ವತವನ್ನೇ ನಿರ್ಮಿಸುತ್ತಿರುವ ಯುಎಇ ದೊರೆಗಳು!

Pinterest LinkedIn Tumblr

Artifical-Mountains

ಅಬುಧಾಬಿ: ಸಮುದ್ರದ ಮೇಲೆ ಕೃತಕ ದ್ವೀಪ ಹಾಗೂ ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಕಟ್ಟಡ ತಂತ್ರಜ್ಞಾನದಲ್ಲಿ ಇಡೀ ವಿಶ್ವದ ಗಮನ ಸೆಳೆದಿರುವ ಅರಬ್ಬರು ಇದೀಗ ಮತ್ತೊಂದು ಭಗೀರಥ ಪ್ರಯತ್ನಕ್ಕೆ ಕೈ ಹಾಕಿದ್ದು, ಮಳೆಗಾಗಿ ಕೃತಕ ಪರ್ವತವನ್ನೇ ನಿರ್ಮಾಣ ಮಾಡಲು ಹೊರಟಿದ್ದಾರೆ.

ವಿಶ್ವದ ಅತೀ ಎತ್ತರದ ಗಗನ ಚುಂಬಿ ಕಟ್ಟಡ ಬುರ್ಜ್ ಖಲೀಫಾ ಮತ್ತು ಪಾಲ್ಮ್ ಜುಮೆರಾಹ್ ನಂತಹ ಕೃತಕ ದ್ವೀಪಗಳನ್ನು ನಿರ್ಮಿಸಿರುವ ಅರಬ್ ಸಂಯುಕ್ತ ಸಂಸ್ಥಾನ(ಯುಎಇ) ಇದೀಗ ಅದಕ್ಕಿಂತಲೂ ಮತ್ತೊಂದು ಮಹತ್ತರ ಕಾರ್ಯಕ್ಕೆ ಕೈಹಾಕಿದ್ದು, ಮಳೆಯಿಲ್ಲದೇ ತತ್ತರಿಸುತ್ತಿರುವ ಅಲ್ಲಿನ ಜನತೆಯ ನೀರಿನ ದಾಹ ತಣಿಸಲು ಮಳೆಗಾಗಿ ಅಲ್ಲೊಂದು ಕೃತಕ ಬೃಹತ್‌ ಪರ್ವತವನ್ನೇ ನಿರ್ಮಿಸುತ್ತಿದ್ದಾರೆ.

ಹೇಳಿಕೇಳಿ ಯುಎಇ ಮರುಭೂಮಿ ರಾಷ್ಟ್ರ. ಪೆಟ್ರೋಲಿಯಂ ಉತ್ಪನ್ನಗಳೇ ಅವರ ಪ್ರಮುಖ ಆದಾಯದ ಮೂಲ. ಹೀಗಾಗಿ ಅಲ್ಲಿ ಇಂಧನದ ಭಾವಿಗಳನ್ನು ಹೊರತುಪಡಿಸಿದರೆ ಬೇರಾವುದೇ ಆದಾಯದ ಮೂಲಗಳಿಗಳಿಲ್ಲ. ಇನ್ನು ಇಲ್ಲಿನ ಭೂಮಿ ಸಮತಟ್ಟಾಗಿರುವ ಕಾರಣ ಇಲ್ಲಿ ಮಳೆ ಪ್ರಮಾಣ ತೀರ ಕಡಿಮೆ. ಹೀಗೆ ಬಿದ್ದ ಮಳೆಯಿಂದ ಅಲ್ಲಿ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ದೊರೆಗಳು ಈ ಹಿಂದೆ ಮಳೆ ಬಿತ್ತನೆಗೂ ಮುಂದಾಗಿದ್ದರಾದರೂ ಅದರಿಂದಲೂ ಅಂದುಕೊಂಡಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತಿಲ್ಲ.

ಹೀಗಾಗಿ ಈ ಬಾರಿ ಭಾರಿ ದೊಡ್ಡ ಮಾಸ್ಟರ್ ಪ್ಲಾನ್ ಆನ್ನೇ ಮಾಡಿರುವ ಅರಬ್ಬರು, ಮಳೆಗಾಗಿ ಬೃಹತ್ ಪರ್ವತವನ್ನೇ ನಿರ್ಮಿಸಲು ಹೊರಟಿದ್ದಾರೆ.

ಪರ್ವತಕ್ಕೂ ಮಳೆಗೂ ಏನು ಸಂಬಂಧ?
ಇರುವ ಬೆಟ್ಟಗುಡ್ಡ, ಕಾಡು-ಮೇಡುಗಳನ್ನೆಲ್ಲಾ ಕಡಿದು ರಿಯಲ್ ಎಸ್ಟೇಟ್, ಗಣಿಗಾರಿಕೆ, ಅಧುನೀಕರಣ ಮತ್ತು ಅಭಿವೃದ್ಧಿ ಹೆಸರಲ್ಲಿ ಹಾಳು ಮಾಡುತ್ತಿರುವ ನಮದೆ ಬೃಹತ್ ಪರ್ವತಗಳ ಮಹತ್ವವೇ ಮರೆತುಹೋಗಿದೆ. ಹೀಗಾಗಿ ಇಂತಹ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಬೃಹತ್ ಪರ್ವತ ಮತ್ತು ಅರಣ್ಯ ಪ್ರದೇಶದ ಮಹತ್ವ ಅರಿತಿರುವ ಅರಬ್ಬರು, ತಮ್ಮ ನೆಲದಲ್ಲಿ ಕೃತಕವಾಗಿಯೇ ಇವುಗಳ ಸೃಷ್ಟಿಗೆ ಮುಂದಾಗಿದ್ದಾರೆ. ಇಷ್ಟಕ್ಕೂ ಅರಬ್ಬರ ಈ ಬೃಹತ್ ಯೊಜನೆಗೆ ಕಾರಣ ಮಳೆ.

ಅಚ್ಚರಿಯಾದರೂ ಇದು ನಿಜ. ಸಮತಟ್ಟಾದ ಮರುಭೂಮಿ ಪ್ರದೇಶ ಹೊಂದಿರುವ ಕಾರಣಕ್ಕೆ ಯುಎಇಯಲ್ಲಿ ತೀರಾ ಕಡಿಮೆ ಮಳೆ ಆಗುತ್ತದೆ. ಕೆಲವೊಮ್ಮೆ ಮಳೆಯೇ ಆಗುವುದಿಲ್ಲ. ಮರುಭೂಮಿಯಾದ್ದರಿಂದ ಉಷ್ಣಾಂಶ ಬೇರೆ ಹೆಚ್ಚಾಗುತ್ತಿರುತ್ತದೆ. ಹೀಗಾಗಿ ಮರುಭೂಮಿಯಲ್ಲಿ ಕೃತಕವಾಗಿ ಪರ್ವತ ನಿರ್ಮಿಸಿದರೆ, ಅದರಿಂದ ಗಾಳಿ ಮೇಲಕ್ಕೆ ಬರುತ್ತದೆ. ಅನಂತರ ಮೋಡಗಳು ಸೃಷ್ಟಿಯಾಗುತ್ತವೆ. ಈ ವೇಳೆ ಮೋಡ ಬಿತ್ತನೆ ತಂತ್ರಜ್ಞಾನದ ಮೂಲಕ ಮೋಡವನ್ನು ಮಳೆಯಾಗಿ ಭೂಮಿಗೆ ತರಬಹುದು ಎಂಬುದು ಯುಎಇ ಆಲೋಚನೆ.

ಈ ಹಿನ್ನೆಲೆಯಲ್ಲಿ ಭೂಮಿಗೆ ಮಳೆ ತರಲು ಪರ್ವತವನ್ನೇ ನಿರ್ಮಿಸುವ ಆಲೋಚನೆಯಲ್ಲಿ ಅರಬ್ಬರು ಮುಳುಗಿದ್ದಾರೆ. ತಜ್ಞರ ನೀಡಿರುವ ಸಲಹೆಯಂತೆ ಅರಬ್ಬರು ಮಳೆಗಾಗಿ ಬೃಹತ್ ಪರ್ವತ ನಿರ್ಮಾಣಕ್ಕೆ ಮುಂದಾಗಿದ್ದು, ಈ ಮಹತ್ತರ ಯೋಜನೆಗೆ ಎಷ್ಟು ಹಣ ವೆಚ್ಚವಾಗುತ್ತದೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ಹವಾಮಾನ ಹಾಗೂ ಭೂಕಂಪ ಕೇಂದ್ರ ಇನ್ನಷ್ಟೇ ಕಂಡುಹಿಡಿಯಬೇಕಾಗಿದೆ. ಒಂದು ವೇಳೆ, ಸಾಧ್ಯವಾಗುವ ಮಿತಿಯಲ್ಲೇ ಖರ್ಚು ಇರುತ್ತದೆ ಎಂದಾದಲ್ಲಿ ಪರ್ವತ ನಿರ್ಮಿಸಲು ಯುಎಇ ಎಂಜಿನಿಯರ್‌ಗಳು ಸಜ್ಜಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಒಟ್ಟಾರೆ ನಾವು ನೈಸರ್ಗಿಕವಾಗಿರುವ ಪರ್ವತ, ಅರಣ್ಯ ಪ್ರದೇಶದಂತಹ ಅಮೂಲ್ಯ ವರವನ್ನು ವಿವಿಧ ಕಾರಣಗಳಿಗಾಗಿ ಕಡಿದು ಅದನ್ನು ಶಾಪವಾಗಿ ಪರಿಣಮಿಸಿಕೊಳ್ಳುತ್ತಿದ್ದರೆ, ಅತ್ತ ಸೌದಿ ದೊರೆಗಳು ಮಾತ್ರ ತಮಗೆ ನೈಸರ್ಗಿಕವಾಗಿರುವ ಶಾಪವನ್ನೇ ಕೃತಕ ಪರ್ವತ ಮತ್ತು ಅರಣ್ಯ ಪ್ರದೇಶಗಳ ನಿರ್ಮಾಣದ ಮೂಲಕ ವರವನ್ನಾಗಿ ಪರಿವರ್ತಿಸುತ್ತಿದ್ದಾರೆ.

Write A Comment