ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆ: “ಮೇ.19ರ ಜಿಲ್ಲಾ ಬಂದ್‌ಗೆ ಬೆಂಬಲವಿಲ್ಲ”

Pinterest LinkedIn Tumblr

ಪುತ್ತೂರು, ಮೇ. 10: ಎತ್ತಿನಹೊಳೆ ಯೋಜನೆ ವಿರೋಧಿಸಿ ದ.ಕ. ಜಿಲ್ಲಾ ಬಂದ್‌ಗೆ ಕರೆ ನೀಡಿರುವುದು ಅನಗತ್ಯ. ಆದ್ದರಿಂದ ಮೇ 19 ರಂದು ನಡೆಯುವ ಜಿಲ್ಲಾ ಬಂದ್‌ಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಬಲ ನೀಡುವುದಿಲ್ಲ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಎಂ.ಭಟ್ ಹೇಳಿದ್ದಾರೆ.

ಎತ್ತಿನಹೊಳೆ ಯೋಜನೆಗೂ ದ.ಕ. ಜಿಲ್ಲಾ ನೀರಿನ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್, ಬಿಜೆಪಿ ಪಕ್ಷ ಸೇರಿಸಿಕೊಂಡು ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುತ್ತಾ, ಕೋಲಾರದಲ್ಲಿ ಬೆಂಬಲ ನೀಡುತ್ತಿವೆ. ಜಿಲ್ಲೆಗೆ ನಿಜವಾಗಿಯೂ ಸಮಸ್ಯೆ ಎಂದು ಭಾವಿಸುವ ಈ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಜನಪ್ರತಿನಿಧಿಗಳು ಲೋಕಸಭೆ ಯಲ್ಲಾಗಲಿ, ವಿಧಾನಸಭೆಯಲ್ಲಾಗಲಿ ತುಟಿ ಬಿಚ್ಚುವುದಿಲ್ಲ. ಹೀಗಿದ್ದು ದ.ಕ. ಜಿಲ್ಲಾ ಬಂದ್‌ಗೆ ಬೆಂಬಲ ಘೋಷಿಸಿದರೆ ದೊಡ್ಡ ಹಾಸ್ಯಾಸ್ಪದವಾದೀತು ಎಂದು ಅವರು ತಿಳಿಸಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಜಿಲ್ಲೆಯಲ್ಲಿ ನೀರಿನ ಫಸಲು ಕಡಿಮೆಯಾಗುತ್ತಾ ಬಂದಿದೆ. ಈ ದಿಶೆಯಲ್ಲಿ ಸಿಪಿಐ(ಎಂ) ಹೋರಾಡುತ್ತಾ ಬಂದಿದೆ. ಆದರೆ ಆಗ ಎತ್ತಿನಹೊಳೆ ವಿರೋಧಿಸುವವರು ಬೆಂಬಲ ನೀಡಿಲ್ಲ. ಇಂಗು ಗುಂಡಿ, ಕಿಂಡಿ ಅಣೆಕಟ್ಟಿನ ಬಗ್ಗೆ ಚಿಂತಿಸದ ಜನ, ನೀರಿನ ಸಮಸ್ಯೆಗೆ ಎತ್ತಿನಹೊಳೆ ಕಾರಣ ಎನ್ನುತ್ತಾರೆ. ಎತ್ತಿನಹೊಳೆ ಕಾರಣಕ್ಕೆ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ, ನೈಜ ಸಮಸ್ಯೆಗಳಿಂದ ದೂರ ಸರಿಯಲು, ಎಂಆರ್‌ಪಿಎಲ್ ಕಂಪನಿ ನೀರು ಕಬಳಿಸುವುದನ್ನು ಜನ ವಿರೋಧಿಸದಂತೆ ಈ ನಾಟಕ ಆಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Write A Comment