ಕನ್ನಡ ವಾರ್ತೆಗಳು

ಧರ್ಮಸ್ಥಳದಲ್ಲಿ ಸಮಾನತೆ ಮೆರೆದ ಉಚಿತ ಸಾಮೂಹಿಕ ವಿವಾಹ

Pinterest LinkedIn Tumblr

Mass_marrgeg_Dharmasthala

ಧರ್ಮಸ್ಥಳ ,ಎ.30: ಶ್ರೀ ಕ್ಷೇತ್ರ ಧರ್ಮಸ್ಥಳದವತಿಯಿಂದ  ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ 45ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಜರಗಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಈ ವರ್ಷದ ಸಾಮೂಹಿಕ ವಿವಾಹ ಸಮಾನತೆಗೆ ಹೆಸರು ಪಡೆಯಿತು. ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಜಾತಿ, ಧರ್ಮಗಳ ಅನುಸಾರವಾಗಿ ಪ್ರತ್ಯೇಕವಾಗಿ ಕುಳ್ಳಿರಿಸಿ ಮದುವೆ ಮಾಡಲಾಗುತ್ತಿತ್ತು. ಈ ಬಾರಿ ಎಲ್ಲರನ್ನೂ ಒಟ್ಟಾಗಿ ಕುಳ್ಳಿರಿಸಿ ಸಾಮೂಹಿಕ, ಸಮಾನತೆ ಮೆರೆವ ಮದುವೆ ನಡೆದಿದೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂದರ್ಭ ಹೇಳಿದರು.
ಈ ಬಾರಿ 19 ಅಂತರ್ಜಾತಿ ವಿವಾಹ ಆಗಿದೆ. ಸಮಾಜದ ಪ್ರವಾಹದಲ್ಲಿ ಎಲ್ಲರೂ ಒಟ್ಟಾಗಿ ಹೋಗುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಪರಿವರ್ತನೆಯಾಗಿದೆ. ಎಲ್ಲರೂ ಸಮಾಜದಲ್ಲಿ ಒಟ್ಟಾಗಿ ಹೋಗಬೇಕಿದೆ. ಅಂತರ್ಜಾತಿ ವಿವಾಹಕ್ಕೂ ಪ್ರೋತ್ಸಾಹ ದೊರೆಯುತ್ತಿರುವುದು ಶ್ಲಾಘನೀಯ.ನವದಂಪತಿಗಳು ಅನ್ಯೋನ್ಯವಾಗಿ ಜೀವನ ಸವೆಸಬೇಕು ಎಂದು ಡಾ| ಹೆಗ್ಗಡೆ ತಿಳಿಸಿದರು. ಸಾಮೂಹಿಕ ವಿವಾಹದ ಮೂಲಕ ಸರಳ ಸುಖೀ ಜೀವನ ನಡೆಸಬೇಕು ಎಂದು ಹೆಗ್ಗಡೆಯವರು ವಧೂ ವರರಿಗೆ ಆಶೀರ್ವದಿಸಿದರು.
ಮುಜರಾಯಿ ಖಾತೆ ಸಚಿವ ಮನೋಹರ್‌ ತಹಶೀಲ್ದಾರ್‌ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಾಮೂಹಿಕ ವಿವಾಹಕ್ಕೆ ರಾಜ್ಯ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಪರಿಶಿಷ್ಟ ಜಾತಿ / ಪಂಗಡದವರು ಸಾಮೂಹಿಕವಾಗಿ ಸ್ವಜಾತಿ ಹಾಗೂ ಅಂತರ್ಜಾತಿ ವಿವಾಹವಾದರೆ ಸರಕಾರ ಅವರಿಗೆ ವಿಶೇಷ ಪ್ರೋತ್ಸಾಹಧನವನ್ನು ನೀಡಲಿದೆ.ಪರಿಶಿಷ್ಟ ಜಾತಿ/ಪಂಗಡದವರು ಸ್ವಜಾತಿಯಲ್ಲಿ ಮದುವೆಯಾದರೆ 50,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರವು ಪರಿಶಿಷ್ಟ ಜಾತಿಯ ಮಹಿಳೆ ಅಂತರ್ಜಾತಿ ವಿವಾಹವಾದರೆ 3 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿಯ ಪುರುಷ ಅಂತರ್ಜಾತಿ ವಿವಾಹವಾದರೆ 2 ಲಕ್ಷ ರೂ. ಪ್ರೋತ್ಸಾಹಧನವನ್ನು ಸರಕಾರದಿಂದ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.
ರಾಜ್ಯ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಬೃಜೇಶ್‌ ಪಟೇಲ್‌, ಸಹ ಕಾರ್ಯದರ್ಶಿ ಸಂತೋಷ್‌ ಮೆನನ್‌, ಕೋಲ್ಕತಾದ ಬಿರ್ಲಾ ಕಾರ್ಪೊರೇಶನ್‌ನ ಪ್ರಧಾನ ಆರ್ಥಿಕ ಅಧಿಕಾರಿ ಆದಿತ್ಯ ಸರೋಗಿ ಮುಖ್ಯ ಅತಿಥಿಗಳಾಗಿ ವಧೂವರರಿಗೆ ಶುಭ ಕೋರಿದರು.
ವೇದಿಕೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಹರ್ಷೇಂದ್ರ ಕುಮಾರ್‌ ಸಹಿತ ಅನೇಕ ದಾನಿಗಳು, ಗಣ್ಯರು ಉಪಸ್ಥಿತರಿದ್ದರು. ಉಚಿತ ಸಾಮೂಹಿಕ ವಿವಾಹ ಸಂಯೋಜಕ ಡಿ. ಧರ್ಣಪ್ಪ ಸ್ವಾಗತಿಸಿದರು. ಅಲಂಕಾರ ಸಮಿತಿ ಸಂಚಾಲಕ ಬಾಲಕೃಷ್ಣ ಪೂಜಾರಿ ವಂದಿಸಿದರು. ಉಜಿರೆ ಶ್ರೀ ಧ.ಮಂ. ವಸತಿ ಕಾಲೇಜಿನ ಉಪನ್ಯಾಸಕ ಸುನಿಲ್‌ ಪಂಡಿತ್‌ ಕಾರ್ಯಕ್ರಮ ನಿರ್ವಹಿಸಿದರು.

Write A Comment