ಕನ್ನಡ ವಾರ್ತೆಗಳು

ಬಾಳಿಗ ಮರ್ಡರ್ ಕೇಸ್ :ನರೇಶ್ ಶೆಣೈ ಜಾಮೀನು ಅರ್ಜಿ ವಿಚಾರಣೆ ಎಪ್ರಿಲ್ 29ಕ್ಕೆ – ಅನಿರೀಕ್ಷಿತ ತಿರುವು ಪಡೆದ ಪ್ರಕರಣ

Pinterest LinkedIn Tumblr

Baliga_murder_naresh

ಮಂಗಳೂರು, ಏ.27- ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಶಂಕಿತ ಆರೋಪಿ ಯುವ ಬ್ರಿಗೇಡ್ ನ ನರೇಶ್ ಶೆಣೈ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಎಪ್ರಿಲ್ 25ರಂದು ಮತ್ತೆ ಆರಂಭಗೊಂಡಿದ್ದು, ಇದೀಗ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮತ್ತೆ ಏ. 29ಕ್ಕೆ ಮುಂದೂಡಲಾಗಿದೆ. ಅಂತಿಮ ತೀರ್ಪು ಏ. 29ಕ್ಕೆ ಹೊರಬರುವ ನಿರೀಕ್ಷೆಯಿದೆ.

ಬಾಳಿಗ ಹತ್ಯೆ ಪ್ರಕರಣದಲ್ಲಿ ನರೇಶ್ ಶೆಣೈ ಅವರನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ನರೇಶ್ ಶೆಣೈ ತಲೆಮರೆಸಿಕೊಂಡಿರುವುದರಿಂದ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಈ ಮಧ್ಯೆ ಹೈಕೋರ್ಟ್ ವಕೀಲರ ಸೂಚನೆಯ ಮೇರೆಗೆ ನರೇಶ್ ಶೆಣೈ ಕೆಳ ಹಂತದ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಸೋಮವಾರ ನರೇಶ್ ಶೆಣೈ ಪರ ವಕೀಲರು ವಾದ ಮಂಡಿಸಿದ್ದು, ಮಂಗಳವಾರ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದಾರೆ. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ರವರ ಸಮ್ಮುಖದಲ್ಲಿ ಮಂಗಳವಾರ ನಡೆದ ಪ್ರಕರಣದ ವಿಚಾರಣೆಯ ವೇಳೆ ಸರ್ಕಾರಿ ಅಭಿಯೋಜಕರಾದ ಶೇಖರ ಶೆಟ್ಟಿಯವರು ನಿರೀಕ್ಷಣಾ ಜಾಮೀನು ಅರ್ಜಿಗೆ ತ್ರೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ನಡುವೆ ನಡೆದ ಅನಿರೀಕ್ಷಿತ ಬೆಳವಣೆಗೆಯೊಂದರಲ್ಲಿ ಮಂಗಳೂರಿನ ಇನ್ನೋರ್ವ ಯುವ ನ್ಯಾಯಾವಾದಿ ಸಚಿನ್ ದೇವೇಂದ್ರ ಕೊಲೆಗೀಡಾದ ವಿನಾಯಕ ಬಾಳಿಗಾರವರ ತಂದೆ ಹೆಸರಿನಲ್ಲಿ ಅಫಿದಾವಿತ್ ಒಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನರೇಶ್ ಶೆಣೈ ಜಾಮೀನು ಅರ್ಜಿ ವಿರೋಧಿಸಿ ಸರಕಾರಿ ಅಭಿಯೋಜಕರು ಮಂಡಿಸುವ ವಾದದಲ್ಲಿ ಸಹಕಾರ ನೀಡುವಲ್ಲಿ ಈ ಅಫಿದಾವಿರರನ್ನು ಪರಿಗಣಿಸಬೇಕೆಂದು ಅವರು ಕೋರೀದ್ದಾರೆ.ಸಿಆರ್‌ಪಿಸಿ ಸೆಕ್ಷನ್ 24/8ರ ಅನ್ವಯ ತಾನು ಈ ಅಫಿದಾವಿತ್ ಸಲ್ಲಿಸಿರುವುದಾಗಿ ಸಚಿನ್ ದೇವೇಂದ್ರ ತಿಳಿಸಿದ್ದಾರೆ.

ನರೇಶ್ ಶೆಣೈ ಪರ ವಕೀಲ ಶಂಭು ಶರ್ಮ 2013ರ ಕೆಪಿಸಿಆರ್ ತೀರ್ಪೊಂದರ ಅನ್ವಯ ಈ ಅಫಿದಾವಿತ್ ಸಲ್ಲಿಕೆಗೆ ತನ್ನ ಅಕ್ಷೇಪ ವ್ಯಕ್ತಪಡಿಸಿದರೂ ಅಂತಿಮವಾಗಿ ನ್ಯಾಯಾಧೀಶರು ಸಚಿನ್ ದೇವೇಂದ್ರ ಸಲ್ಲಿಸಿದ ಅಫಿದಾವಿತನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ.

ನರೇಶ್ ಶೆಣೈ ಪರ ವಾದ ಮಂಡಿಸಿದ ಶಂಭು ಶರ್ಮ, ಕಕ್ಷಿದಾರ ನರೇಶ್ ಶೆಣೈಗೂ ಕೊಲೆಗೀಡಾದ ವಿನಾಯಕ ಬಾಳಿಗಾರವರಿಗೂ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ . ಪ್ರದಾನಿ ನರೇಂದ್ರ ಮೋದಿ ಪರವಾಗಿರುವ ನಮೋ ಬ್ರೀಗೇಡ್ ಸಂಸ್ಥಾಪಕರಾಗಿರುವ ನರೇಶ್ ಶೆಣೈಯವರನ್ನು ರಾಜಕೀಯವಾಗಿ ಪಿತೂರಿ ನಡೆಸಿ ಈ ಕೊಲೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರ ಸಾಮಾಜಿಕ ಕಳಕಳಿ ಮತ್ತು ಏಳಿಗೆಯನ್ನು ಸಹಿಸದ ಶಕ್ತಿಗಳು ಒಂದಾಗಿ ರೂಪಿಸಿರುವ ಷಡ್ಯಂತ್ರಕ್ಕೆ ನರೇಶ್ ಶೆಣೈ ಬಲಿಪಶುವಾಗಿದ್ದಾರೆಂದು ವಾದ ಮಂಡಿಸಿದ್ದರು.

Write A Comment