ಕನ್ನಡ ವಾರ್ತೆಗಳು

ಒಳ್ಳೆ ಶಿಕ್ಷಣ ಸಿಗುವ ಆಸೆಯಿಂದ ಮಣಿಪುರದಿಂದ ಇಲ್ಲಿಗೆ ಬಂದೆ..ಆದರೇ ಎಂತಹ ಅವ್ಯವಸ್ಥೆ: ಮಣಿಪುರ ವಿದ್ಯಾರ್ಥಿಯ ನೋವಿನ ನುಡಿ

Pinterest LinkedIn Tumblr

(ವರದಿ,ಚಿತ್ರ- ಯೋಗೀಶ್ ಕುಂಭಾಸಿ)

ಕುಂದಾಪುರ: ‘ನಮ್ಮದು ಮಣಿಪುರ ರಾಜ್ಯ. ಕರ್ನಾಟಕಕ್ಕೆ ಬಂದು ಏಳು ವರ್ಷಗಳಾಯಿತು. ಭಾರತದಲ್ಲಿಯೇ ಉತ್ತಮ ವಿದ್ಯಾಭ್ಯಾಸ ಸಿಗುವುದು ದಕ್ಷಿಣದಲ್ಲಿ. ಅದರಲ್ಲಿಯೂ ಕರ್ನಾಟಕದಲ್ಲಿ ಉತ್ತಮ ವಿದ್ಯಾಸಂಸ್ಥೆಗಳಿದೆ ಎಂದು ಎಲ್ಲರೂ ಹೇಳ್ತಾರೆ. 7ನೇ ತರಗತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿದೆ. ಅಲ್ಲಿ ಉತ್ತಮ ಶಿಕ್ಷಣ ಸಿಕ್ಕಿತು. ಪಿಯುಸಿ ಮಾಡಿ ಸಿ.ಇ.ಟಿ.ಯಲ್ಲಿ ಒಳ್ಳೆ ರ್‍ಯಾಂಕ್ ಪಡೆದು ಇಂಜಿನಿಯರಿಂಗ್ ಮಾಡುವ ಬಯಕೆ ಹೊಂದಿದ್ದೆ. ಆದರೇ ಈ ಬಾರಿ ನನಗಾದ ಅನುಭವ ನಿಜಕ್ಕೂ ನೋವನ್ನು ತಂದಿದೆ, ನನಗೆ ಅಘಾತವಾಗುತ್ತಿದೆ. ಎನ್ನುತ್ತಾ ತನ್ನ ಮನಸ್ಸಿನ ನೋವನ್ನು ಹೇಳಿಕೊಂಡಿದ್ದು ಮೂಲತಃ ಮಣಿಪುರ ರಾಜ್ಯದ ಸದ್ಯ ಕುಂದಾಪುರದ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಘವ್.

Kundapura_PUC_Student (2)

ಉತ್ತಮ ವಿದ್ಯಾಭ್ಯಾಸದ ಆಸೆ ಹೊತ್ತ ಆತ ಹಾಗೂ ಕುಟುಂಬದವರು ಬಂದಿದ್ದು ಕರ್ನಾಟಕ ರಾಜ್ಯಕ್ಕೆ, ಅದರಲ್ಲಿಯೂ ನಮ್ಮ ಉಡುಪಿ ಜಿಲ್ಲೆಗೆ. ಆದರೇ ಈ ಬಾರಿ ರಾಜ್ಯದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಗೊದಲಗಳು ರಾಘವ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೋವನ್ನುಂಟು ಮಾಡಿದೆ. ಕುಂದಾಪುರದಲ್ಲಿ ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ರಾಘವ್ ಹಾಗೂ ಇತರೇ ವಿದ್ಯಾರ್ಥಿಗಳು ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ತಮಗೆ ಆಗುತ್ತಿರುವ ಸಂಕಷ್ಟವನ್ನು ಬಿಚ್ಚಿಟ್ಟರು.

Kundapura_PUC_Student (5)

ಪುನಃ ಎಕ್ಸಾಂ ಬರಿಯಲ್ಲ: ರಾಘವ್
ಹಲವು ಬಾರೀ ಇದೇ ರೀತಿಯ ಗೊಂದಲಗಳು ನಡೆಯುತ್ತಿದ್ದರೂ ಸರಕಾರ ಹಾಗೂ ಪಿಯು ಬೋರ್ಡ್ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ದುರದ್ರಷ್ಟಕರ. ಇವರ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು ಸಿ.ಇ.ಟಿ. ಪರೀಕ್ಷೆಗಳು ಬರುತ್ತಿದ್ದು ಈ ಎಕ್ಸಾಂ ಮುಂದುವರಿದರೇ ಸಿ.ಇ.ಟಿ. ಎಕ್ಸಾಂ ಮುಂದಕ್ಕೆ ಹೋಗುತ್ತದೆ. ಇದರಿಂದಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಇಂಜಿನಿಯರ್ ಓದುವ ಆಸೆಯನ್ನು ತೊರೆಯುವ ಸಾಧ್ಯತೆಗಳಿದೆ. ಇವರು ಮಾಡುವ ಬೇಜವಬ್ದಾರಿ ಕೆಲಸದಿಂದಾಗಿ ವಿದ್ಯಾರ್ಥಿಗಳ ಎರಡು ವರ್ಷ ಹಾಳಾಗುವ ಹಾಗಾಗಿದೆ. ಒಂದು ಬಾರಿ ಎಕ್ಸಾಂ ಬರೆದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದಲ್ಲಿ ಮಾತ್ರ ಮರು ಪರೀಕ್ಷೆ ಮಾಡಲಿ. ನಾವು ಎಕ್ಸಾಂ ಬರಿಯೋದಿಲ್ಲ.

Kundapura_PUC_Student (1)

ಪಿಯು ಬೋರ್ಡ್ ನೇರ ಹೊಣೆ: ಸಂದೇಶ್
ಇದ್ದ ಮೂವರಲ್ಲಿ ಕದ್ದವರ್‍ಯಾರು? ಎಂಬ ಬಗ್ಗೆ ಎಲ್ಲರಿಗೂ ತಿಳಿದಿದೆ. ಪಿಯು ಬೋರ್ಡ್ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳಿದೆ. ಅವರ ಸಹಾಯವಿಲ್ಲದೇ ಸೋರಿಕೆ ಅಸಾಧ್ಯ. ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮುಂದಿನ ದಿನಗಳಲ್ಲಿ ಇಂತಹಾ ಘಟನೆಗಳು ನಡೆಯದಂತೆ ಸಂಬಂದಪಟ್ಟ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೋ ಅಲ್ಲಿ ಮಾತ್ರ ಪರೀಕ್ಷೆ ನಡೆಸಲಿ. ಹಗಲು ರತ್ರಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆಯುವವರ ಎದುರು ಹಣಕೊಟ್ಟು ಕದ್ದು ಬರೆಯುವ ಇಂತಹ ಚಾಳಿಯನ್ನು ನಿಲ್ಲಿಸಲು ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ವಿದ್ಯಾರ್ಥಿ ಸಂದೇಶ್.

Kundapura_PUC_Student (6)

ಎಂತಾ ವರ್ಷಯಿಡೀ ಎಕ್ಸಾಂ ಬರೀತಾ ಇರುದಾ ಮರಾಯರೇ: ಗಣೇಶ್
ಒಂದ್ ಸಲ ಕೆಮಿಸ್ಟ್ರಿ ಎಕ್ಸಾಂ ಬರೆದಾಯ್ತ್. ಆಮೇಲ್ ವಾಪಾಸ್ಸು ಎಕ್ಸಾಂ ಮಾಡ್ತೆವೆ ಅಂದ್ರ್. ಆದ್ರ್ ಇವತ್ತು ಕಥಿ ಹೀಂಗಾಯ್ತ್. ಇನ್ನು ಮುಂದುಡ್ರೂ ಆವಾಗ್ಲೂ ಕ್ವಶ್ಚನ್ ಪೇಪರ್ ಲೀಕ್ ಅದ್ರ್ ಎಂತಾ ಮಾಡುದು…..ವರ್ಷ ಇಡೀ ಓದ್ತಾ ಇರುದಾ? ವರ್ಷ ಇಡೀ ಎಕ್ಸಾಂ ಬರಿತಾ ಇರುದಾ.. ಪ್ರಶ್ನೆ ಪತ್ರಿಕೆ ಎಲ್ಲ್ ಲೀಕ್ ಆಯ್ತೋ ಅಲ್ಲೇ ಎಕ್ಸಾಂ ಮಾಡ್ಲಿ..ನಾವಂತೂ ಬರಿತಿಲ್ಲೆ..ಎಂದು ಕುಂದಗನ್ನಡದಲ್ಲಿ ತನ್ನ ಅಸಮಾಧನವನ್ನು ಹೊರಗೆಡವಿದ್ದು ವಿದ್ಯಾರ್ಥಿ ಗಣೇಶ್.

Kundapura_PUC_Student (4)

ಯಾವ ಎಕ್ಸಾಂಗೆ ತಯಾರಗುವುದು?: ವೆಂಕಟೇಶ್
ಎರಡನೆ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇಂದಿನ ಎಕ್ಸಾಂ ಕೂಡ ಮುಂದೂಡಿದರೇ ಕಥೆ ಏನು? ಮುಂದಿನ ವಾರದಲ್ಲಿ ಜೆ.ಇ. ಎಕ್ಸಾಂಗಳಿದೆ. ನಾವು ಯಾವುದಕ್ಕೆ ತಯಾರಾಗುವುದು? ಮರು ಪರೀಕ್ಷೆ ಬೇಡ…ಅಕಸ್ಮಾತ್ ಮಾಡುವುದೇ ಅದರೇ ಜೆ.ಇ. ಎಕ್ಸಾಂ ಎಲ್ಲಾ ಮುಗಿದ ಮೇಲೆಯೇ ದಿನಾಂಕವನ್ನು ನಿಗದಿಗೊಳಿಸಲಿ ಎನ್ನುತ್ತಾರೆ ವಿದ್ಯಾರ್ಥಿ ವೆಂಕಟೇಶ್.

Write A Comment