ಕನ್ನಡ ವಾರ್ತೆಗಳು

ಪುತ್ತೂರು ಜಾತ್ರೋತ್ಸವ ಆಮಂತ್ರಣ ಪತ್ರಿಕೆ ವಿವಾದ : ಜಿಲ್ಲಾಧಿಕಾರಿಗಳೇ ಕ್ಷಮೆ ಯಾಚಿಸಿ – ಇಲ್ಲವೇ..

Pinterest LinkedIn Tumblr

Putturu_Invitation_Prob_11

ಪುತ್ತೂರು, ಮಾ.30- ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಅಪಚಾರ ಮಾಡುವ ಮೂಲಕ ಅಕ್ಷಮ್ಯ ಅಪರಾಧವೆಸಗಿರುವ ಜಿಲ್ಲಾಧಿಕಾರಿ ಇಬ್ರಾಹಿಂ ಅವರು ದೇವಾಲಯದ ಜಾತ್ರೆಗೆ ಗೊನೆ ಕಡಿಯುವ ಮೊದಲು ತಪ್ಪು ಮಾಡಿರುವುದನ್ನು ಒಪ್ಪಿಕೊಂಡು ನಿಷ್ಕಳ್ಮಶವಾಗಿ ಕ್ಷಮೆಯಾಚಿಸಬೇಕು. ದೇವಾಲಯದ ಆಡಳಿತ ಬೇಕೆಂದಾದಲ್ಲಿ ದೇವಾಲಯದ ತಂತ್ರಿವರ್ಯರಿಂದ ಕಲಶ ಸ್ನಾನ ಮಾಡಿಸಿಕೊಂಡು ಘರ್‌ವಾಪಾಸಾತಿಗೆ ಸಿದ್ಧರಾಗಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ನ.ಸೀತಾರಾಮ ಅವರು ಸವಾಲು ಹಾಕಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಹೆಸರು ಮುದ್ರಿಸಿರುವುದನ್ನು ವಿರೋಧಿಸಿ ದೇವಾಲಯದ ಭಕ್ತ ವೃಂದದ ನೇತೃತ್ವದಲ್ಲಿ ನಿನ್ನೆ ದೇವಾಲಯದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆದ ಧರ್ಮ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಯಾಂಗದೊಳಗೆ ಕೆಲಸ ಮಾಡುವವರಿಗೆ ವಿವೇಕ ಇರಬೇಕು. ಜಿಲ್ಲಾಧಿಕಾರಿ ಸ್ಥಾನದ ಬಗ್ಗೆ ನಮಗೆ ಗೌರವವಿದೆ. ಆದರೆ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕುಳಿತ ಮಾತ್ರಕ್ಕೆ ಹತ್ತು ತಲೆ ಬರುವುದಿಲ್ಲ. ಆ ಸ್ಥಾನಲ್ಲಿರುವ ವ್ಯಕ್ತಿ ಹಲ್ಲು ಉದುರಿಸಿಕೊಳ್ಳುವ ಕೆಲಸ ಮಾಡಬಾರದು. ಜಿಲ್ಲಾಧಿಕಾರಿಯಾದರೂ ಜಿಲ್ಲೆಯ ಹಿಂದೂ ಸಮಾಜಕ್ಕಿಂತ ದೊಡ್ಡ ವ್ಯಕ್ತಿ ನೀವಲ್ಲ. ಈ ಜಿಲ್ಲೆಯೂ ನಿಮಗೆ ಶಾಶ್ವತವಲ್ಲ ಎಂದ ಅವರು ಹಿಂದೂಗಳ ಕ್ಷಮಾಗುಣವನ್ನು ಅರಿತುಕೊಳ್ಳಿ.ಹಿಂದೂಗಳ ಭಾವನೆಯ ಚೆಲ್ಲಾಟವಾಡಬೇಡಿ, ನಮ್ಮ ಸಹನೆ, ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದರು.

ನಿಮ್ಮ ಕೈಕೆಳಗಿನ ಅಧಿಕಾರಿಗಳು ತಪ್ಪು ಮಾಡಿದಾದ ಅದನ್ನು ಸರಿಪಡಿಸುವ ಕೆಲಸ ಮಾಡಬೇಕಿತ್ತು. ಆ ಕೆಲಸವನ್ನು ಮಾಡದೆ ಶಿಷ್ಟಚಾರದ ಹೆಸರಿನಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಹಿಂದೂ ಸಮಾಜದ ದಿಕ್ಕು ತಪ್ಪಿಸಲು ಹೋಗಿದ್ದೀರಿ ಎಂದು ದೂರಿದ ಅವರು ಹಿಂದೂ ಸಮಾಜವನ್ನು ರೊಚ್ಚಿಗೆಬ್ಬಿಸಬೇಡಿ ಎಂದು ಎಚ್ಚರಿಸಿದರು. ಆಡಳಿತ ನಿರ್ವಹಣೆ ದೃಷ್ಟಿಯಿಂದ ಅಯೋಗ್ಯರಾಗಿರುವ ನೀವು ವಕ್ಫ್‌ಬೋರ್ಡಿಗೆ ಹೋಗುವುದೇ ಸೂಕ್ತ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಒಳ್ಳೆಯ ಮುಸ್ಲಿಂ ಇದ್ದಿದ್ದರೆ ನೀವು ಮಾಡಿದ್ದು ಸರಿಯಲ್ಲ ಎಂದು ಜಿಲ್ಲಾಧಿಕಾರಿಯಲ್ಲಿ ಹೇಳುತ್ತಿರಲಿಲ್ಲವೇ, ಮುಸ್ಲಿಂ ಧರ್ಮ ಗುರುಗಳು ಜಿಲ್ಲಾಧಿಕಾರಿಗೆ ಈ ವಿಚಾರದಲ್ಲಿ ಬುದ್ಧಿವಾದ ಹೇಳುವ ಕೆಲಸ ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ನೀವು ಹೇಳಿ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ, ಬ್ರಹ್ಮಕಲಶೋತ್ಸವ ನಡೆದುದು ಅಲ್ಲ, ನೀವು ಬಂದು ನಿಂತು ಮಾಡಿಸಿದ್ದೂ ಅಲ್ಲ. ದೇವಾಲಯಗಳಲ್ಲಿನ ಜಾತ್ರೆ, ಧಾರ್ಮಿಕ ಆಚರಣೆಗಳನ್ನು ಹೇಗೆ ಮಾಡಬೇಕೆಂಬುವುದು ಹಿಂದೂಗಳಿಗೆ ಗೊತ್ತಿದೆ. ದೇವಾಲಯಕ್ಕೆ ಜೀಪು ಕೊಡಿಸಲು ನೀವ್ಯಾರು, ಯಾರ ಹಣ ಎಂದು ಪ್ರಶ್ನಿಸಿದ ಅವರು ಇಬ್ರಾಹಿಂ ಅವರ ಗಂಧಪ್ರಸಾದ ನಮಗೆ ಯಾವ ಕಾಲಕ್ಕೂ ಬೇಡ. ಭಗವಂತನ ಪ್ರಸಾದ ನಮಗೆ ಸಾಕು ಎಂದರು. ಶಿಷ್ಟಾಚಾರದ ಹೆಸರಿನಲ್ಲಿ ಹಿಂದೂ ಸಮಾಜದ ಮೇಲೆ ನಡೆಯುವ ದೌರ್ಜನ್ಯವನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು.

ಹಿಂದೂಗಳನ್ನು ಅಗ್ನಿಪರೀಕ್ಷೆಗೊಳಪಡಿಸಲು ಹೊರಟಿರುವ ಮುಖ್ಯ ಮಂತ್ರಿ ‘ನಿದ್ರೆ’ ರಾಮಯ್ಯ ಅವರಲ್ಲಿ ಗಂಡಸುತನ,ತಾಕತ್ತು ಇದ್ದರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಬಿಟ್ಟು ಎಲ್ಲರನ್ನೂ ಸೇರಿಸಿಕೊಂಡು ಧಾರ್ಮಿಕ ದತ್ತಿ ಇಲಾಖೆ ಮಾಡಲಿ. ಈ ಕಾನೂನನ್ನು ಜಾರಿಗೊಳಿಸಲಿ. ಮಸೀದಿ, ಚರ್ಚ್‌ಗಳಲ್ಲಿ ಆಡಳಿತ ನಡೆಸಲು ನಮಗೂ ತಾಕತ್ತು ಇದೆ ಎಂದು ಅವರು ಹಾಕಿದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಲಾಯಿಲಾ..ಇಲ್ಲಲ್ಲಾ..

ವಿಶ್ವಹಿಂದೂ ಪರಿಷತ್ ಮಂಗಳೂರು ಕಾರ್ಯಾಧ್ಯಕ್ಷ ಜಗದೀಶ್ ಶೇನವ ಅವರು ಮಾತನಾಡಿ ಹಿಂದೂ ದೇವಾಲಯಗಳಲ್ಲಿ ಜಾತ್ರೆ ನಡೆಸುವುದಕ್ಕೂ ಮುಸ್ಲಿಂ ಅಧಿಕಾರಿಗಳನ್ನು ಕೇಳಬೇಕಾದ ಪರಿಸ್ಥಿತಿ ಬಂದಿದ್ದು, ಮುಂದೆ ಲಾಯಿಲಾ..ಇಲ್ಲಲ್ಲಾ ಎಂದು ಹೇಳಿ ಕಾರ್ಯಕ್ರಮ ಆರಂಭಿಸಬೇಕಾದ ಸ್ಥಿತಿ ಬರಬಹುದು. ಬಹುಸಂಖ್ಯಾತ ಹಿಂದೂಗಳ ಶ್ರದ್ಧಾ ಕೇಂದ್ರವಾದ ದೇವಾಲಯಗಳಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡಿಯೂ ಸಹಿಷ್ಣುಗಳಾದ ನಮ್ಮನ್ನು ಅಹಿಷ್ಣುಗಳೆಂದು ಹೇಳುತ್ತಾರೆ ಎಂದಾದರೆ ನಾವು ಅಹಿಷ್ಣುಗಳಾಗಬೇಕಿದೆ, ಇಲ್ಲದಿದ್ದರೆ ಮುಂದೆ ಸತ್ಯನಾರಾಯಣ ಪೂಜೆಗೂ ಇಬ್ರಾಹಿಂ ಅವರನ್ನು ಕರೆಯಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಇಂತಹ ಕೆಲಸಕ್ಕೆ ಇನ್ನು ಮುಂದೆ ಕೈಹಾಕುವುದಕ್ಕೆ ನಮ್ಮ ಹೋರಾಟ ಎಚ್ಚರಿಕೆಯ ಗಂಟೆಯಾಗಬೇಕು. ಹಿಂದೂ ದೇವಾಲಯಗಳ ಕಾರ್ಯಕ್ರಮದಲ್ಲಿ ಅನ್ಯ ಧರ್ಮೀಯರ ಹೆಸರು ಹಾಕುವುದು ನಿಲ್ಲುವ ತನಕ ಹೋರಾಟ ನಡೆಯಬೇಕು ಎಂದು ಅವರು ಹೇಳಿದರು.

ಕಟೀಲಿನ ಗೋಶಾಲೆಗೆ ಹೋಗಿ ಜಿಲ್ಲಾಧಿಕಾರಿ ಇಬ್ರಾಹಿಂ ಅವರು ‘ಇಷ್ಟೊಂದು ದನಗಳನ್ನು ಇಲ್ಲಿ ಸಾಕಿರುವುದು ನಾವು ತಿನ್ನುತ್ತೇವೆ ಅಂಥನಾ’ ಎಂದು ಅಸ್ತ್ರಣ್ಣ ಅವರಲ್ಲಿ ಪ್ರಶ್ನಿಸುತ್ತಾರೆ ಎಂದಾದರೆ, ನಂದಿಗುಡ್ಡೆಯ ಹಿಂದೂ ರುದ್ರಭೂಮಿಯ ಮಧ್ಯೆ ಇರುವ ೮೦ ಸೆಂಟ್ಸ್ ಜಾಗವನ್ನು ಮುಸ್ಲಿಂ ದಫನ ಭೂಮಿಗೆ ಕಾಯಿರಿಸಲು ಹೊರಟಿರುವುದು ನೋಡಿದರೆ, ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿ ಬಂದ ಬಳಿಕ ಖಾಲಿ ಜಾಗಗಳನ್ನು ಮುಸ್ಲಿಂ ಸಂಘ ಸಂಸ್ಥೆಗಳಿಗೆ ನಿರಂತರವಾಗಿ ನೀಡುತ್ತಾ ಬಂದಿರುವುದನ್ನು ಗಮನಿಸಿದರೆ ಅವರು ಜಿಲ್ಲಾಧಿಕಾರಿಯಾಗಿದ್ದರೂ ಜಾತಿ ಬುದ್ದಿ ಬಿಟ್ಟಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ.

ಪ್ರತಿಯೊಂದಕ್ಕೂ ಶಿಷ್ಟಾಚಾರದ ಹೆಸರು ಎತ್ತುವುದಾದರೆ ಉಳ್ಳಾಲದ ಉರೂಸ್‌ಗೆ ಸಂಸದ ನಳಿನ್‌ಕುಮಾರ್ ಕಟೀಲು ಅವರ ಹೆಸರು ಹಾಕಲಿ. ಮುಸ್ಲಿಂ ಸಮುದಾಯದವರು ಕಾರ್ಯಕ್ರಮಕ್ಕೆ ಬರುತ್ತಾರೆಯೇ ಎಂದು ನೋಡಲಿ ,ಅಹಿಷ್ಣುತೆಯ ವಾದ ಮಂಡಸುತ್ತಿರುವ ಜನಾರ್ಧನ ಪೂಜಾರಿಯವರು ಅವರ ದಸರಾ ಕಾರ್ಯಕ್ರಮದಲ್ಲಿ ಇಬ್ರಾಹಿಂ ಅವರ ಹೆಸರು ಹಾಕಲಿ ಎಂದು ಸವಾಲು ಹಾಕಿದರು. ಪುತ್ತೂರು ದೇವಾಲಯದ ಆಮಂತ್ರಣ ಪತ್ರಿಕೆಯಿಂದ ಇಬ್ರಾಹಿಂ ಅವರ ಹೆಸರು ತೆಗೆದರೆ ಸಚಿವ ರಮಾನಾಥ ರೈ ಮತ್ತು ಜನಾರ್ಧನ ಪೂಜಾರಿ ಅವರ ಗಂಟೇನು ಹೋಗುತ್ತದೆ ಎಂದು ಅವರು ಪ್ರಶ್ನಿಸಿದರು

ಸಂಘಟಿತ ಹೋರಾಟಕ್ಕೆ ಕರೆ

ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅವರು ಮಾತನಾಡಿ ಹಿಂದೂಗಳ ಭಾವನೆಗೆ ಘಾಸಿಯಾದರೆ, ಹಿಂದೂ ಧರ್ಮಕ್ಕೆ ತೊಂದರೆಯಾದರೆ ಸುಮ್ಮನೆ ಕುಳಿತುಕೊಳ್ಳುವುದು ಬೇಡ. ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸಮಸ್ಯೆಯಾದಾಗ ನಾವೆಲ್ಲರೂ ಸಂಘಟಿತರಾಗಬೇಕು. ಮಹಿಳೆಯರು ಹಾಗೂ ಯುವ ಜನತೆ ಎದ್ದು ನಿಲ್ಲಬೇಕು. ಸಾತ್ವಿಕ ಹೋರಾಟಕ್ಕೆ ಜಯ ಸಿಗದ್ದಿದ್ದರೆ ತೀವ್ರ ಹೋರಾಟಕ್ಕೆ ನಾವು ಸಿದ್ಧರಾಗಬೇಕು ಎಂದರು. ಭಾರತೀಯ ಸಂಸ್ಕೃತಿಗೆ ಪೂರಕವಾಗಿ ಸಂವಿಧಾನದಲ್ಲಿ ಕೆಲವೊಂದು ಬದಲಾವಣೆಗಳಾಗಬೇಕಿದೆ . ಹಾಗಾದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ವಿರೋಧಿಸುವವರು ಯೋಚಿಸಿ ನೋಡಿ

ಕನ್ಯಾನದ ಕಣಿಯಾರು ಚಾಮುಂಡೇಶ್ವರಿ ಕ್ಷೇತ್ರದ ಮಹಾಬಲ ಸ್ವಾಮೀಜಿ ಅವರು ಮಾತನಾಡಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಕಾನೂನಿನ ದಾಳಿಯಾಗಿ, ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯಾದ ಸಂದರ್ಭ ಬಂದಿರುವುದರಿಂದ ಹೋರಾಟ ಮಾಡಬೇಕಾಗಿ ಬಂದಿದೆ ಎಂದರು. ಇಲ್ಲಿ ಹಿಂದೂಗಳ ಭಾವನೆಗೆ ಅಪಮಾನ ಆಗಿರುವುದಂತೂ ಖಂಡಿತ. ಆದರೆ ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಯಾವ ಜನಪ್ರತಿನಿಧಿಗಳಿಂದಲೂ, ಅಧಿಕಾರಿಗಳಿಂದಲೂ ಆಗಿಲ್ಲ ಎಂದ ಅವರು ಹಿಂದೂ ಭಾವನೆಯನ್ನು ವಿರೋಧಿಸುವ ಕಾನೂನನ್ನು ಒಪ್ಪಿಕೊಳ್ಳುತ್ತಿರುವ ಹಿಂದೂಗಳೊಮ್ಮೆ ಯೋಚಿಸಿ ನೋಡಬೇಕು ಎಂದರು.

ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಗೌರವಾಧ್ಯಕ್ಷ ಯು.ಪೂವಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡೀಕಯ್ಯ ಪೆರ‍್ವೋಡಿ ಅವರು ವಂದಿಸಿದರು. ನಗರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲು, ಬಜರಂಗದಳ ದಕ್ಷಿಣ ಪ್ರಾಂತ್ಯ ಸಂಯೋಜಕ ಶರಣ್ ಪಂಪ್‌ವೆಲ್, ಪುತ್ತೂರು ಪ್ರಖಂಡದ ಅಧ್ಯಕ್ಷ ಕೃಷ್ಣಪ್ರಸಾದ್ ಬೆಟ್ಟ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಬಿಜೆಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಕ್ಷೇತ್ರ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ , ನಗರಸಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ವಿಶ್ವಹಿಂದೂ ಪರಿಷತ್ ಮಂಗಳೂರು ಕಾರ್ಯಾಧ್ಯಕ್ಷ ಜಿತೇಂದ್ರ, ಉದ್ಯಮಿ ಅಶೋಕ್ ರೈ ಕೋಡಿಂಬಾಡಿ, ಕೃಷ್ಣಪ್ರಸಾದ್ ಮಡ್ತಿಲ ಮತ್ತಿತರರು ಇದ್ದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಭಜನಾ, ತತ್ಸಂಗ ಕಾರ್ಯಕ್ರಮ ನಡೆಯಿತು.

ವರದಿ ಕೃಪೆ : ಸಂಜೆವಾಣಿ

Write A Comment