ಕನ್ನಡ ವಾರ್ತೆಗಳು

ಸ್ಕೂಟರಿಗೆ ಬಸ್‌ ಢಿಕ್ಕಿ : ಸೈಂಟ್‌ ಆ್ಯಗ್ನೆಸ್‌ ಕಾಲೇಜಿನ ಉಪನ್ಯಾಸಕಿ ಸಾವು – ಸಾರ್ವಜನಿಕರಿಂದ ವ್ಯಾಪಕ ಪ್ರತಿಭಟನೆ (News Updated)

Pinterest LinkedIn Tumblr

Nantur_axident_fimal_1

ಮಂಗಳೂರು : ದ್ವಿಚಕ್ರ ವಾಹನದಿಂದ ಬಿದ್ದ ಉಪನ್ಯಾಸಕಿಯ ತಲೆ ಮೇಲೆ ಬಸ್ ಚಲಿಸಿದ ಪರಿಣಾಮ ಉಪನ್ಯಾಸಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಂತೂರಿನಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಸಂತ ಆಗ್ನೇಸ್ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಜಾಯ್ಲಿನ್ ಮೋನಿಸ್ (24) ಎಂದು ಗುರುತಿಸಲಾಗಿದೆ.

Nantur_axident_fimal_2 Nantur_axident_fimal_3 Nantur_axident_fimal_4 Nantur_axident_fimal_5 Nantur_axident_fimal_6 Nantur_axident_fimal_7

ಇಂದು ಬೆಳಿಗ್ಗೆ ತನ್ನ ಹೊಂಡಾ ಆಕ್ಟೀವಾ ವಾಹನದಲ್ಲಿ ಸಂಚರಿಸುತ್ತಿದ್ದ ಅವರು ಆಯ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದು,ಇದೇ ಸಂದರ್ಭ ಹಿಂದಿನಿಂದ ಬರುತ್ತಿದ್ದ ಬಸ್ಸೊಂದು ಅವರ ತಲೆಯ ಮೇಲೆ ಚಲಿಸಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ವೇಳೆ ಅವರೊಂದಿಗೆ ಇದ್ದ ಸಹಸವಾರೆ ಆಕೆಯ ಸಹೋದರಿ ಪಾರಾಗಿದ್ದಾರೆ. ಘಟನೆ ತಿಳಿದಂತೆ ಸಾರ್ವಜನಿಕರು ಸೇರಿ ಪ್ರತಿಭಟನೆ ನಡೆಸಿದ್ದು ಸಂಚರಿಸುತ್ತಿದ್ದ ವಾಹನಗಳನ್ನು ತಡೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಸ್ಕೂಟರಿಗೆ ಬಸ್‌ ಢಿಕ್ಕಿ -ಉಪನ್ಯಾಸಕಿ ಸಾವು (Updated News)

axident_Joylin_deth_2

ಮಂಗಳೂರು: ನಗರದ ನಂತೂರಿನಲ್ಲಿ ಬುಧವಾರ ಬೆಳಗ್ಗೆ ಸ್ಕೂಟರಿಗೆ ಖಾಸಗಿ ಸಿಟಿ ಬಸ್‌ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ ಸಹ ಸವಾರೆ ಸೈಂಟ್‌ ಆ್ಯಗ್ನೆಸ್‌ ಕಾಲೇಜಿನ ಉಪನ್ಯಾಸಕಿ ಜಾಯ್ಲಿನ್‌ ಮೋನಿಸ್‌ (23) ಸಾವನ್ನಪ್ಪಿದ್ದಾರೆ. ಸ್ಕೂಟರ್‌ ಸವಾರೆ ಆಕೆಯ ಸೋದರಿ ಕಾಲೇಜು ವಿದ್ಯಾರ್ಥಿನಿ ಜಾಕಲಿನ್‌ ಮೋನಿಸ್‌ ಅಪಾಯದಿಂದ ಪಾರಾಗಿದ್ದಾರೆ.

ಜಾಯ್ಲಿನ್‌ ಮೋನಿಸ್‌ ಅವರು ಕುಲಶೇಖರದ ತನ್ನ ಮನೆಯಿಂದ ಎಂದಿನಂತೆ ಬುಧವಾರ ಬೆಳಗ್ಗೆ 8.30 ಕ್ಕೆ ಕಾಲೇಜಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

ತಂಗಿ ಜಾಕಲಿನ್‌ ನಗರದ ಇನ್ನೊಂದು ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದು, ಆಕೆ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಜಾಯ್ಲಿನ್‌ ಅವರು ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದರು. ಸ್ಕೂಟರ್‌ ನಂತೂರು ದಾಟಿ ಇಳಿಜಾರು ರಸ್ತೆಯಲ್ಲಿ ಕದ್ರಿ ಕಡೆಗೆ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ (ಮಂಗಳಾದೇವಿ- ಸುರತ್ಕಲ್‌ ಬಸ್ಸು) ಬರುತ್ತಿದ್ದ ಖಾಸಗಿ ಸಿಟಿ ಬಸ್ಸು ಸ್ಕೂಟರಿಗೆ ಒರೆಸಿ ಹೋಗಿದೆ. ಆಗ ಜಾಕಲಿನ್‌ ಚಲಾಯಿಸುತ್ತಿದ್ದ ಸ್ಕೂಟರ್‌ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿ ಮಗುಚಿದೆ. ಸಹ ಸವಾರೆ ಜಾಯ್ಲಿನ್‌ ಅವರು ಬಲ ಬದಿಗೆ ರಸ್ತೆಯ ಮೇಲೆ ಬಿದ್ದಾಗ ಬಸ್ಸಿನ ಟೈರ್‌ ಆಕೆಯ ತಲೆಯ ಮೇಲೆ ಚಲಿಸಿದೆ. ಜಾಕಲಿನ್‌ ಅವರು ಎಡ ಬದಿಗೆ ಬಿದ್ದ ಕಾರಣ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಬಸ್ಸಿನ ಟೈರ್‌ ಹೆಲ್ಮೆಟ್‌ ಸಮೇತ ಜಾಯ್ಲಿನ್‌ ತಲೆ ಮೇಲೆ ಚಲಿಸಿ ಹೆಲ್ಮೆಟ್‌ ಪುಡಿಯಾಗಿ ತಲೆ ಜಜ್ಜಿ ಹೋಗಿತ್ತು.

ಜಾಕಲಿನ್‌ ಅವರು ಬೇರೊಂದು ಕಾಲೇಜಿಗೆ ಹೋಗುತ್ತಿರುದರಿಂದ ಜಾಯ್ಲಿನ್‌ ಅವರು ಸಾಮಾನ್ಯವಾಗಿ ಹಿಂಬದಿ ಕುಳಿತು ಪ್ರಯಾಣಿಸುವುದು ರೂಢಿ. ಅಕ್ಕನನ್ನು ಸೈಂಟ್‌ ಆ್ಯಗ್ನೆಸ್‌ ಕಾಲೇಜು ಬಳಿ ಡ್ರಾಪ್‌ ಮಾಡಿ ತಂಗಿ ಜಾಕಲಿನ್‌ ತನ್ನ ಕಾಲೇಜಿಗೆ ಮುಂದುವರಿಯುತ್ತಿದ್ದರು.

ಜಾಯ್ಲಿನ್‌ ಮೋನಿಸ್‌ ಅವರು ಕುಲಶೇಖರದ ಜಾನ್‌ ಮೋನಿಸ್‌ ಅವರ ಇಬ್ಬರು ಮಕ್ಕಳಲ್ಲಿ (ಇಬ್ಬರೂ ಪುತ್ರಿಯರು) ಹಿರಿಯವಳಾಗಿದ್ದಾಳೆ. ಜಾನ್‌ ಮೋನಿಸ್‌ ಅವರು ದಿರ್ವೆಂಕೊಂಕಣಿ ಪತ್ರಿಕೆಯ ಸಂಪಾದಕರಾಗಿರುತ್ತಾರೆ. ಬಿಕರ್ನಕಟ್ಟೆಯಲ್ಲಿ ಇದರ ಕಚೇರಿ ಇದೆ.

ಘಟನೆ ಸಂಭವಿಸಿದಾಕ್ಷಣ ತಂಗಿ ಜಾಕಲಿನ್‌ ಕಿರುಚಾಡಿ ಕೂಡಲೇ ಮನೆಯವರಿಗೆ ಕರೆ ಮಾಡಿ ವಿವರಿಸಿದ್ದಾರೆ. ಮೃತರ ತಂದೆ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ಬಳಿಕ ಮೃತದೇಹವನ್ನು ನಗರದ ವೆನ್‌ಲಾಕ್‌ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಅಪಘಾತ ನಡೆದ ಬಗ್ಗೆ ಪೊಲೀಸರಿಗೆ ಹಾಗೂ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡಿದ್ದರೂ ಸುಮಾರು 45 ನಿಮಿಷಗಳ ಬಳಿಕ ಪೊಲೀಸರು ಹಾಗೂ ಆ್ಯಂಬುಲೆನ್ಸ್‌ ಎಂಟ್ರಿ ಕೊಟ್ಟಿದೆ ಎಂದು ಮೃತರ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಮೃತರ ತಂದೆ 3 ನಿಮಿಷದಲ್ಲಿ ಸ್ಥಳಕ್ಕೆ ಬಂದಿದ್ದರಾದರೂ, ಪೊಲೀಸರು ಹಾಗೂ ಆಂಬುಲೆನ್ಸ್‌ ಮಾತ್ರ ತಡವಾಗಿ ಬಂದಿದ್ದಾರೆ ಎನ್ನಲಾಗಿದೆ.

ಕದ್ರಿ ನಂತೂರು ರಸ್ತೆಯಲ್ಲಿ ಕಾಂಕ್ರೀಟು ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ಕದ್ರಿಯಿಂದ ನಂತೂರು ಕಡೆಗೆ ಏಕಮುಖ ವಾಹನ ಸಂಚಾರವಿದೆ. ನಂತೂರಿನಿಂದ ಕದ್ರಿ ಕಡೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದರೂ ಬೆಳಗ್ಗಿನ ಪೀಕ್‌ ಆವರ್‌ನಲ್ಲಿ ನಿಯಮಗಳನ್ನು ಸ್ವಲ್ಪ ಸಡಿಲು ಬಿಡುತ್ತಿರುವುದರಿಂದ ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಅದರಂತೆ ಜಾಕಲಿನ್‌ ಅವರೂ ಈ ಮಾರ್ಗದಲ್ಲಿ ಸ್ಕೂಟರ್‌ ಚಲಾಯಿಸಿದ್ದರು.

ಪ್ರತಿಭಟನೆ:

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಸೇರಿ ಕೆಲಹೊತ್ತು ರಸ್ತೆಯ ಅವ್ಯವಸ್ಥೆ ಮತ್ತು ಬಸ್ಸುಗಳ ನಾಗಾಲೋಟದ ಓಡಾಟದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರು ಬಂದು ಚದುರಿಸಿದರು.

ಕಾಂಕ್ರೀಟು ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಪೊಲೀಸರು ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗಿದೆ. ಕಂಟ್ರಾಕ್ಟರ್‌ಗಳ ಕರ್ತವ್ಯದ ಜತೆಗೆ ಪೊಲೀಸರು ಕೂಡಾ ಈ ಕುರಿತು ಕರ್ತವ್ಯ ನಿರ್ವಹಿಸಬೇಕು. ನಗರದಲ್ಲಿ ಬಸ್‌ಗಳು ಮಿತಿ ಮೀರಿದ ವೇಗದಲ್ಲಿ ಸಾಗುವ ಬಗ್ಗೆ ಈಗಾಗಲೇ ಹಲವು ಬಾರಿ ದೂರುಗಳು ಕೇಳಿ ಬಂದಿವೆ.

ಯಾವುದೇ ಘಟನೆಗಳು ನಡೆದಾಗ ಚಿಕ್ಕ ಪ್ರಕರಣ ದಾಖಲಿಸಿ, ಬಸ್‌ ಸಮೇತ ಅವರನ್ನು ಬಿಡಲಾಗುತ್ತದೆ. ಆದರೆ, ಗಂಭೀರ ಪ್ರಕರಣ ಕಂಡು ಬಂದಾಗ ವಶಕ್ಕೆ ಪಡೆದ ಬಸ್‌ಗಳನ್ನು ವಾಪಾಸ್‌ ಹಿಂತಿರುಗಿಸಬಾರದು. ಅತೀ ವೇಗದ ಚಾಲನೆಯಿಂದ ಜಾಯ್ಲಿನ್‌ ಮೋನಿಸ್‌ ಅವರ ಸಾವಿಗೆ ಕಾರಣವಾದ ಬಸ್‌ ಚಾಲಕನನ್ನೂ ಕೂಡಲೇ ಬಂಧಿಸಬೇಕು ಎಂದು ಕಾರ್ಪೋರೇಟರ್‌ ನವೀನ್‌ ಡಿಸೋಜಾ ಅವರು ಒತ್ತಾಯಿಸಿದ್ದಾರೆ.

ಜಮಾಯಿಸಿದ್ದ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು: ಈ ಅಪಘಾತದ ಕುರಿತು ಮಾಹಿತಿ ಪಡೆದ ಮೃತರ ಸಹದ್ಯೋಗಿಯೊಬ್ಬರು ಕಾಲೇಜಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ನಗರದ ವೆನ್‌ಲಾಕ್‌ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದ ಮೃತದೇಹವನ್ನು ನೋಡಲು ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು, ಕುಟುಂಬಸ್ಥರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು.

ಸಹೋದ್ಯೋಗಿಗಳು, ಕುಟುಂಬಸ್ಥರು ಮಾತ್ರವಲ್ಲದೆ, ವಿದ್ಯಾರ್ಥಿಗಳು ಕೂಡಾ ಶವವನ್ನು ಕಂಡು ಭಿಕ್ಕಿ- ಭಿಕ್ಕಿ ಅಳುವುದು ಕಂಡು ಬಂದಿತ್ತು. ಮೃತ ಜಾಯ್ಲಿನ್‌ ಮೋನಿಸ್‌ ಅವರು ಉತ್ತಮ ಉಪನ್ಯಾಸಕಿ,ಕಠಿಣ ಪರಿಶ್ರಮಿ, ಬದ್ಧತೆಯಿಂದ ಕೂಡಿದ ಪ್ರತಿಭಾಶಾಲಿಯಾಗಿದ್ದರು ಎಂದು ಹಿರಿಯ ಸಹೋದ್ಯೋಗಿಯೊಬ್ಬರು ತಿಳಿಸಿದರು.

Write A Comment