ಮಂಗಳೂರು,ಮಾ.21: ಮಾ.20- 2014 ರ ಎಪ್ರಿಲ್ನಿಂದ 2016 ರ ಫೆಬ್ರವರಿ ವರೆಗೆ ನೀಡಿದಂಥ ಉಚಿತ ಪರ್ಮಿಟ್ನಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಕಂಡುಬಂದಿದ್ದು, ಹಾಗಾಗಿ ಅದನ್ನು ಕೂಡಲೇ ನಿಲ್ಲಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಹೋರಾಟ ಸಮಿತಿಯವರು ಜಿಲ್ಲಾಧಿಕಾರಿ ಹಾಗೂ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಆರ್ಟಿಒ ಅಧಿಕಾರಿಗಳು ರೋಜ್ಗಾರ್ ಸಂಸ್ಥೆಗಳಿಗೆ ಹಸ್ತಾಂತರಿಸಿ ಇಂದು ವಿದೇಶದಲ್ಲಿ ಉದ್ಯೋಗದಲ್ಲಿರುವಂಥ ವ್ಯಕ್ತಿಗಳಿಗೆ ಹಾಗೂ ಹಿಂದೆ ಆಟೋ ರಿಕ್ಷಾ ಹೊಂದಿರುವಂಥ ಚಾಲಕರ ಪರ್ಮಿಟ್ ಮಾರಿ, ಇನ್ನೊಂದು ಆಟೋ ರಿಕ್ಷಾಗೆ ಅರ್ಜಿ ಸಲ್ಲಿಸಿ ಉಚಿತ ಪರ್ಮಿಟ್ ಪಡೆದುಕೊಂಡಂಥ ಉದಾರಹಣೆಗಳಿವೆ. ಆರ್ಟಿಒ ಮಧ್ಯವರ್ತಿಗಳ ಸಹಾಯದಿಂದ ಅಧಿಕಾರಿಗಳು ಮತ್ತು ಅವರ ನಡುವೆ ೨೦ ಸಾವಿರ ಡೀಲ್ ಮಾಡಿದಂಥ ವಿಚಾರ ಬೆಳಕಿಗೆ ಬಂದಿದೆ.
ಆಗಿನ ಆರ್ಟಿಒ ಅಧಿಕಾರಿಯೊಬ್ಬರು ಉಳ್ಳಾಲದ ವ್ಯಕ್ತಿಯೊಬ್ಬರಿಗೆ ನಗರದಲ್ಲಿ ದುಡಿಯಲು ಉಚಿತ ಪರ್ಮಿಟ್ಗೆ ಅರ್ಜಿ ಹಾಕಿದ್ದನ್ನು ತಿರಸ್ಕರಿಸಿದ್ದರು. ನಗರದಲ್ಲಿರುವವರಿಗೆ ನಗರ ಪರ್ಮಿಟ್ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಗ್ರಾಮಾಂತರ ಪರ್ಮಿಟ್ ಎಂದು ಹೇಳಿಕೆ ನೀಡಿದ್ದೀರಿ. ಆದರೆ ಕೋಟೆಕಾರು, ಉಳ್ಳಾಲ ಹಾಗೂ ತಲಪಾಡಿಯಂಥ ಪ್ರದೇಶದ ವ್ಯಕ್ತಿಗಳಿಗೆ ಉಚಿತ ಪರ್ಮಿಟ್ ಅಧಿಕಾರಿಯವರು ಕೊಟ್ಟಿದ್ದಾರೆ.
ಹಾಗಾಗಿ ಕೊಟ್ಟಂತಹ ಉಚಿತ ಪರ್ಮಿಟ್ ಬಗ್ಗೆ ಮರುನ್ಯಾಯಾಂಗ ತನಿಖೆ ನಡೆಸಬೇಕು. ಮಂಗಳೂರಿನಲ್ಲಿ ಸರಿಯಾದ ರಿಕ್ಷಾ ಪಾರ್ಕ್ಗಳ ವ್ಯವಸ್ಥೆ ಇಲ್ಲದಿರುವುದರಿಂದ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆಯಿಂದ ಉಂಟಾಗುವ ತೊಂದರೆಗಳಿಂದ, ಕೊಡುವಂಥ ಉಚಿತ ಪರ್ಮಿಟ್ ತಕ್ಷಣ ನಿಲ್ಲಿಸಬೇಕೆಂದು ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
