ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆ : ಕಾಂಗ್ರೆಸ್ ಸರಕಾರದ ಕ್ರಮಕ್ಕೆ ದ.ಕ.ಜಿಲ್ಲಾ ಬಿಜೆಪಿ ಆಕ್ರೋಶ

Pinterest LinkedIn Tumblr

BJP

ಮಂಗಳೂರು: ಕರಾವಳಿ ಜನತೆಯ ಪ್ರಬಲ ವಿರೋಧದ ನಡುವೆಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಜಿಲ್ಲೆಯ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಮರ್ಶೆ ಮಾಡಿ ಸೂಕ್ತ ನಿರ್ಣಯ ಕೈಗೊಳ್ಳಬೇಕಾದ ಸರಕಾರ ಈ ನಿಟ್ಟಿನಲ್ಲಿ ಎಡವಿದೆ. ಬಿಜೆಪಿಯ ಮೇಲೆ ಸುಳ್ಳು ಆರೋಪ ಮಾಡುತ್ತ ತನ್ನ ಕಾರ್ಯ ಸಾಧಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತರಾತುರಿಯಲ್ಲಿ ಶಿಲಾನ್ಯಾಸ ನೆರವೇರಿಸುವ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನತೆಗೆ ನೀರು ಒದಗಿಸುವ ಭರವಸೆ ನೀಡಿದ್ದಾರೆ. ಎತ್ತಿನಹೊಳೆ ಯೋಜನೆ ಯಶಸ್ಸು ಕಾಣುವುದಿಲ್ಲ ಎಂದು ಸರಕಾರಕ್ಕೂ ಗೊತ್ತು. ಆದರೆ ಆ ಭಾಗದ ಜನತೆಗೆ ಚುನಾವಣೆ ಸಂದರ್ಭ ನೀಡಿದ ಭರವಸೆ ಈಡೇರಿಸಲು ಯೋಜನೆ ಆರಂಭಿಸುವ ಮೂಲಕ ಕೋಟ್ಯಂತರ ಹಣವನ್ನು ವ್ಯಯಿಸಲಾಗುತ್ತಿದೆ. ಬಿಜೆಪಿ ಮೇಲೆ ಅಪವಾದ ಹೊರಿಸುವ ಸರಕಾರಕ್ಕೆ ಶಿಲಾನ್ಯಾಸ ನೆರವೇರಿಸುವ ಮುನ್ನವೇ ಕೊರತೆಯನ್ನು ಸರಿಪಡಿಸಬಹುದಿತ್ತು. ಆದರೆ ಅದನ್ನು ಮಾಡದೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.

ಕುಡಿಯುವ ನೀರಿನ ಯೋಜನೆಗೆ ಬಿಜೆಪಿಯ ವಿರೋಧವಿಲ್ಲ. ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಕರಾವಳಿ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ವಿಮರ್ಶೆ ಮಾಡಿ ಮುಂದುವರಿದಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಕಾಂಗ್ರೆಸ್ ಹಠ ಸಾಧಿಸುವ ಕೆಲಸ ಮಾಡುತ್ತಿದೆ. ೨೦೦೬ರಲ್ಲಿ ಪರಮಶಿವಯ್ಯ ವರದಿಯನ್ನು ವಿರೋಧಿಸಿದ್ದ ಕಾಂಗ್ರೆಸ್ ಈಗ ಅದೇ ವರದಿ ಆಧಾರದಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲು ಹೊರಟಿರುವುದನ್ನು ನೋಡಿದಾಗ ಕಾಂಗ್ರೆಸ್‌ನ ಸಮಯಸಾಧಕತನ ಅರ್ಥವಾಗುತ್ತದೆ.

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಬಿಜೆಪಿ ಸ್ಪಷ್ಟ ನಿಲುವು ತಾಳಿದೆ. ಆದರೆ ಕಾಂಗ್ರೆಸ್‌ನಲ್ಲಿಯೇ ದ್ವಂದ್ವವಿದೆ. ಶಾಸಕ ಜೆ.ಆರ್.ಲೋಬೋ, ಬಿ.ಜನಾರ್ದನ ಪೂಜಾರಿ ವಸಂತ ಬಂಗೇರ ಮುಂತಾದವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಜಿಲ್ಲೆಯ ಜನತೆಯ ಪರ ನಿಲ್ಲಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿರುವುದರ ಮರ್ಮವೇನು? ಕಾಂಗ್ರೆಸ್ ಸಭೆಗಳಲ್ಲಿ ದೊಡ್ಡ ಸ್ವರದಲ್ಲಿ ಬಿಜೆಪಿಯನ್ನು ದೂರುವ ಉಸ್ತುವಾರಿ ಸಚಿವರು ವಿಧಾನ ಸಭೆ, ಮಂತ್ರಿ ಮಂಡಲದ ಸಭೆಗಳಲ್ಲಿ ನಿದ್ರೆ ಮಾಡುವುದನ್ನು ಬಿಟ್ಟು ಯೋಜನೆಯ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ.

Write A Comment