ಕನ್ನಡ ವಾರ್ತೆಗಳು

ಕದ್ರಿ ಉದ್ಯಾನವನ : ಎರಡು ದಿನಗಳ ‘ಜೇನು ಝೇಂಕಾರ’ ಮೇಳಕ್ಕೆ ಸಚಿವ ಟಿ.ಬಿ.ಜಯಚಂದ್ರರಿಂದ ಚಾಲನೆ

Pinterest LinkedIn Tumblr

kadri_park_honeybee_1

ಮಂಗಳೂರು,ಮಾ.12: ಜೇನು ಸಾಕಾಣಿಕೆ ಮತ್ತು ಜೇನು ಆಧಾರಿತ ಚಟುವಟಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ತೋಟಗಾರಿಕಾ ಇಲಾಖೆ ಹಾಗೂ ಖಾದಿ ಗ್ರಾಮೋದ್ಯೋಗ ಇಲಾಖೆ ವತಿಯಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಎರಡು ದಿನಗಳ ‘ಜೇನು ಝೇಂಕಾರ’ ಮೇಳವನ್ನು ಆಯೋಜಿಸಲಾಗಿದ್ದು, ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಶನಿವಾರ ಈ ‘ಜೇನು ಝೇಂಕಾರ’ ಮೇಳಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಜೇನಿನ ಉಪಯೋಗ ಮತ್ತು ಔಷಧೀಯ ಗುಣಗಳ ಬಗ್ಗೆ ಅಯುಷ್ ಇಲಾಖೆ ಹೊರತಂದಿರುವ ಮಾಹಿತಿ ಕರಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು.

ಮೇಳದಲ್ಲಿ ಸಾವಯವ ಕೃಷಿಕ ಗ್ರಾಹಕರ ವತಿಯಿಂದ ಸಾವಯವ ಉತ್ಪನ್ನಗಳ ಪ್ರದರ್ಶನ ಮಾರಾಟ, ವಿವಿಧ ಸಂಘ ಸಂಸ್ಥೆಗಳಿಂದ ಸಾವಯವ ಉತ್ಪನ್ನ ಮತ್ತು ಮೌಲ್ಯವರ್ಧಿತ ಉತ್ಪನ್ನ ಪ್ರದರ್ಶನ ಹಾಗೂ ಮಾರಾಟ, ಸಾವಯವ ಕೃಷಿಗೆ ಬಳಸುವ ಕೃಷಿ ಪರಿಕರಗಳ ಪ್ರದರ್ಶನ, ವಿವಿಧ ತರಕಾರಿ ಬೀಜಗಳ ಮಾರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಶಾಸಕ ಜೆ.ಆರ್.ಲೋಬೋ ಅವರು ಈ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯತ್ ಸಿಇಒ ಪಿ.ಐ ಶ್ರೀವಿದ್ಯಾ, ಜಿಲ್ಲಾ ವಾರ್ತಾಧಿಕಾರಿ ಖಾದ ಷಾ. ಅಯುಷ್ ಇಲಾಖೆಯ ಜಿಲ್ಲಾ ಮುಖ್ಯಸ್ಥ ಡಾ.ದೇವ‌ದಾಸ್, ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

kadri_park_honeybee_2 kadri_park_honeybee_3 kadri_park_honeybee_4 kadri_park_honeybee_5 kadri_park_honeybee_6 kadri_park_honeybee_7 kadri_park_honeybee_8 kadri_park_honeybee_9 kadri_park_honeybee_10

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೇಶ್ ಎಚ್.ಆರ್ ಸ್ವಾಗತಿಸಿ, ಪ್ರಸ್ತಾವನೆಗೈದರು.

ಈ ‘ಜೇನು ಝೇಂಕಾರ’ ಮೇಳದಲ್ಲಿ ಜೇನಿನ ಬಳಕೆ ಹೆಚ್ಚಿಸುವ ದೃಷ್ಟಿಯಿಂದ ಜೇನಿನ ಔಷಧೀಯ ಗುಣಗಳ ಬಗ್ಗೆ ಜೇನು ಕೃಷಿಕರು ಮಾಹಿತಿ ನೀಡಲಿದ್ದಾರೆ. ಜೇನು ಸಾಕಣೆಗೆ ಸಂಬಂಧಿಸಿದ ಪರಿಕರಗಳ ಪ್ರದರ್ಶನ, ಜೇನಿನ ವಿವಿಧ ಪ್ರಭೇದ ಪ್ರದರ್ಶನ, ಜೀವಂತ ಜೇನು ಕುಟುಂಬ ಪ್ರದರ್ಶನ, ಪುತ್ತೂರಿನ ಜೇನು ಬೆಳೆಗಾರರ ಸಂಘದವರಿಂದ ಜೇನು ಪ್ರದರ್ಶನ ಮತ್ತು ಮಾರಾಟ, ಆಯುಷ್ ಇಲಾಖೆಯಿಂದ ಜೇನಿನ ಉಪಯೋಗ ಮತ್ತು ಔಷಧೀಯ ಗುಣಗಳ ಬಗ್ಗೆ ಮಾಹಿತಿ, ಜೇನಿನ ವಿವಿಧ ಪೇಯಗಳ ತಯಾರಿಕೆ ಬಗ್ಗೆ ಎಸ್ ಡಿಎಂ ನ್ಯಾಚುರೋಪತಿ ವಿದ್ಯಾರ್ಥಿಗಳಿಂದ ಮಾಹಿತಿ, ವಿವಿಧ ಆಯುರ್ವೇದ ಸಂಘಗಳಿಂದ ಜೇನು ಬಳಕೆ ಮಾಡಿ ತಯಾರಿದ ಔಷಧ ಪ್ರದರ್ಶನ ಮತ್ತು ಮಾರಾಟ ಇರುತ್ತದೆ.

ನಾಳೆ ಜೇನು ಸಾಕಾಣಿಕೆ ನಡೆಸುವ ಬಗ್ಗೆ ತರಬೇತಿ :

ಜೇನಿನ ಪ್ರಗತಿಪರ ಸಾಕಣೆದಾರರಿಂದ ಮಾ.13 ರಂದು ಬೆಳಗ್ಗೆ 10 ರಿಂದ ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ನಡೆಸುವ ಬಗ್ಗೆ ತರಬೇತಿ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಾವಯವ ಕೃಷಿ ಕುರಿತ ತರಬೇತಿ ಕಾರ್ಯಕ್ರಮವು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಸಮಾರಂಭ ಉದ್ಘಾಟಿಸಲಿದ್ದಾರೆ.

Write A Comment