ಕನ್ನಡ ವಾರ್ತೆಗಳು

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಜೆಟ್ ಮಂಡನೆ

Pinterest LinkedIn Tumblr
Mcc_Meet_Fight_1
ಮಂಗಳೂರು, ಮಾ. 09: ಮಂಗಳೂರು ಮಹಾನಗರ ಪಾಲಿಕೆಯು ತ್ಯಾಜ್ಯ ತೆರಿಗೆಯಲ್ಲಿ ಇಳಿಕೆ ಹಾಗೂ ಒಳಚರಂಡಿ ವ್ಯವಸ್ಥೆಗೆ ತೆರಿಗೆ ಭಾಗ್ಯದೊಂದಿಗೆ 2016-17ನೆ ಸಾಲಿಗೆ ಒಟ್ಟು 163.78 ಲಕ್ಷ ರೂ.ಗಳ ಅಂದಾಜು ಮಿಗತೆ ಬಜೆಟನ್ನು ಮಂಡಿಸಿದೆ. ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಮನಪಾ ಸಾಮಾನ್ಯ ಬಜೆಟ್ ಸಭೆಯಲ್ಲಿ ತೆರಿಗೆ, ಹಣಕಾಸು, ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್ ಬಜೆಟ್ ಮಂಡಿಸಿದರು.
ಒಟ್ಟು 42, 912.34 ಲಕ್ಷ ರೂ.ಗಳ ಆದಾಯ ಹಾಗೂ 42,748.56 ಲಕ್ಷ ರೂ. ಖರ್ಚುಗಳನ್ನು ಅಂದಾಜಿಸಲಾಗಿದ್ದು, ಮನಪಾ ವ್ಯಾಪ್ತಿಯಲ್ಲಿ ನಾಗರಿಕರ ಮೇಲೆ ಹೇರಲಾಗಿರುವ ತ್ಯಾಜ್ಯ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ. ಇದರಂತೆ 500 ಚ. ಅಡಿಗಳಿಗಿಂತಲೂ ಕಡಿಮೆ ಇರುವ ವಸತಿಗೃಹಗಳಿಗೆ (ಈ ಹಿಂದೆ ನಿಗದಿಯಾದ ದರ-240 ರೂ ) 180 ರೂ. ಪರಿಷ್ಕೃತ ದರವನ್ನು ಪ್ರಕಟಿಸಲಾಗಿದೆ. ಜೊತೆಗೆ 500 ರಿಂದ 1000 ಚ. ಅಡಿಗಿಂತಲೂ ಕಡಿಮೆಯಿರುವ ವಸತಿಗೃಹಗಳಿಗೆ (ಈ ಹಿಂದಿನ ದರ 480 ರೂ.) 360 ರೂ., 1,000 ಚ. ಅಡಿಗಿಂತ 2,000 ಚ. ಅಡಿಯವರೆಗೆ (ಈ ಹಿಂದಿನ ದರ 720 ರೂ.) 600 ರೂ. ಮತ್ತು 2,000 ಚ. ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ವಸತಿಗೃಹಗಳಿಗೆ (ಈ ಹಿಂದಿನ ದರ 960 ರೂ.) 720 ರೂ. ಮಾಡಿ ಪರಿಷ್ಕರಿಸಲಾಗಿದೆ.
2016-17ನೆ ಸಾಲಿನಲ್ಲಿ ಒಳಚರಂಡಿ ಸವಲತ್ತುಗಳನ್ನು ಹೊಂದಿರುವವರಿಗೆ ತಿಂಗಳಿಗೆ 15 ರೂ., ಗೃಹೇತರ ಕಟ್ಟಡಗಳಿಗೆ ತಿಂಗಳಿಗೆ 25 ರೂ., ವಾಣಿಜ್ಯ ಕಟ್ಟಡಗಳಿಗೆ ತಿಂಗಳಿಗೆ 50 ರೂ. ಹಾಗೂ ಕೈಗಾರಿಕಾ ಕಟ್ಟಡಗಳಿಗೆ ತಿಂಗಳಿಗೆ 100 ರೂ. ನಂತೆ ಒಳಚರಂಡಿ ತೆರಿಗೆಯನ್ನು ವಿಧಿಸಲು ತೀರ್ಮಾನಿಸಲಾಗಿದ್ದು, ಇದರಿಂದ ವಾರ್ಷಿಕ 100 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ. ವಾಸ್ತವ ಆದಾಯ 2016-17ನೆ ಸಾಲಿಗೆ 42,912.34 ಲಕ್ಷ ರೂ.ಗಳಾಗಿದ್ದು, ಇದು ಹಿಂದಿನ ವರ್ಷಕ್ಕಿಂತ 7,388.04 ಲಕ್ಷ ರೂ. ಹೆಚ್ಚಾಗಿರುತ್ತದೆ ಎಂದು ಬಜೆಟ್ ಮಂಡಿಸಿದ ಹರಿನಾಥ್ ತಿಳಿಸಿದರು. ಉದ್ದಿಮೆ ಪರವಾನಿಗೆಯನ್ನು ನೀಡುವಾಗ ಉದ್ದಿಮೆ ಶುಲ್ಕದ ಮೇಲೆ ತ್ಯಾಜ್ಯ ತೆರಿಗೆ ಸೆಸ್ ವಿಧಿಸುವುದರಿಂದ ಪಾಲಿಕೆಗೆ ವಾರ್ಷಿಕ 300 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
Mcc_Meet_Fight_2 Mcc_Meet_Fight_3 Mcc_Meet_Fight_4 Mcc_Meet_Fight_5
ಮನಪಾ ವ್ಯಾಪ್ತಿಯ ಉತ್ತಮ ರಸ್ತೆಗಳನ್ನು ಅಗೆದು ಹಲವಾರು ಕಂಪೆನಿಗಳು ಕೇಬಲ್‌ಗಳನ್ನು ಅಳವಡಿಸುತ್ತಿದ್ದು, ಕೇಬಲ್‌ಗಳ ಮೇಲೆ ಪ್ರತೀ ಕಿ.ಮೀ.ಗೆ 50 ಸಾವಿರ ರೂ. ಸೆಸ್ ಹಾಕುವುದರಿಂದ ಪಾಲಿಕೆಗೆ ಪ್ರಾರಂಭಿಕವಾಗಿ 200 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಮನಪಾ ವ್ಯಾಪ್ತಿಯಲ್ಲಿ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ಸುಮಾರು 500ಕ್ಕಿಂತಲೂ ಹೆಚ್ಚಿನ ಟವರ್‌ಗಳನ್ನು ಅಳವಡಿಸಿದ್ದು, ಇವುಗಳ ಮೇಲೆ ಕಟ್ಟಡ ಬಾಡಿಗೆಯ 1 ತಿಂಗಳ ಬಾಡಿಗೆಯನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡುವುದರಿಂದ ಪಾಲಿಕೆಗೆ ಸುಮಾರು 30 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ನಿರೀಕ್ಷಿತ ಆದಾಯ
 2015-16ನೆ ಸಾಲಿನಲ್ಲಿ ಆಸ್ತಿ ತೆರಿಗೆ ಬಾಬ್ತು 4,000 ಲಕ್ಷ ರೂ.ನಿರೀಕ್ಷಿಸಲಾಗಿದ್ದು, 2015ರ ಡಿಸೆಂಬರ್ ಅಂತ್ಯಕ್ಕೆ 2,025.31 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. 2016-17ನೆ ಸಾಲಿಗೆ 5,500 ಲಕ್ಷ ರೂ.ಗಳನ್ನು ಆಸ್ತಿ ತೆರಿಗೆಯಿಂದ ನಿರೀಕ್ಷಿಸಲಾಗಿದೆ.
2015-16ರಲ್ಲಿ ನೀರಿನ ತೆರಿಗೆಯಿಂದ 4,500 ಲಕ್ಷ ರೂ. ಗುರಿ ಹೊಂದಲಾಗಿದ್ದು, ಡಿಸೆಂಬರ್ ಅಂತ್ಯಕ್ಕೆ 2,500.03 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. 2016-17ನೆ ಸಾಲಿಗೆ ನೀರಿನ ದರದಲ್ಲಿ ಯಾವುದೇ ಹೆಚ್ಚಳ ಮಾಡದೆ 4,500 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಹಾಗೆಯೇ ಒಳಚರಂಡಿ ಅಭಿವೃದ್ದಿ ಶುಲ್ಕವಾಗಿ 2016-17ಕ್ಕೆ ರಿಯಾಯಿತಿ ನೀಡುವ ಮೂಲಕ 300 ಲಕ್ಷ ರೂ. ಗುರಿ ಹೊಂದಲಾಗಿದೆ.
ಆದಾಯ ಗಳಿಕೆ/ಖರ್ಚು: ಶೇಕಡಾವಾರು ಲೆಕ್ಕಾಚಾರ:
ಆಸ್ತಿ ತೆರಿಗೆಯಿಂದ ಶೇ. 12.82 ನೀರಿನ ತೆರಿಗೆಯಿಂದ ಶೇ. 10.75, ಅಭಿವೃದ್ಧಿ ಶುಲ್ಕದಿಂದ ಶೇ. 5.05, ಇತರ ಶುಲ್ಕವಾಗಿ ಶೇ. 6.22, ಆಸ್ತಿಗಳಿಂದ ಆದಾಯ, ಬಾಡಿಗೆ ಶೇ. 1.35, ಉಪಕರಣಗಳಿಂದ ಶೇ. 5.27, ವೇತನಾನುದಾನದಿಂದ ಶೇ. 9.46, ಸರಕಾರದಿಂದ ಬರುವ ಅನುದಾನಗಳಿಂದ ಶೇ. 49.08, ಶೇಕಡಾವಾರು ಆದಾಯ ಮೂಲವನ್ನು ನಿರೀಕ್ಷಿಸಲಾಗಿದೆ. ಅಭಿವೃದ್ಧಿ ವೆಚ್ಚಗಳಿಗೆ ಶೇ. 45.81, ಹಣಕಾಸು ಮತ್ತು ಬಡ್ಡಿ ವೆಚ್ಚಗಳು ಶೇ. 6.63, ಇತರ ಚಟುವಟಿಕೆಗಳು ಶೇ. 4.04, ಕಲ್ಯಾಣ ವೆಚ್ಚಗಳು ಶೇ. 3.13, ಆರೋಗ್ಯ ವೆಚ್ಚ ಶೇ. 8.39, ವೇತನ, ವಿದ್ಯುತ್ ಇತರೆ ಶೇ. 20.31, ನಿರ್ಗಮನ ವೆಚ್ಚಗಳು ಶೇ. 11.69 ಎಂದು ಅಂದಾಜಿಸಲಾಗಿದೆ ಎಂದು ಹರಿನಾಥ್ ವಿವರಿಸಿದರು.
ಆಸ್ತಿ ತೆರಿಗೆ ವಸೂಲಾತಿ ಹೊರಗುತ್ತಿಗೆಗೆ:
ಈ ಸಾಲಿನಲ್ಲಿ ಪಾಲಿಕೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಲಯ ಕಚೇರಿಗಳಾಗಿ ವಿಂಗಡಿಸುವು ದರಿಂದ (ಮಂಗಳೂರು ಕೇಂದ್ರ ವಲಯ, ಕದ್ರಿ ದಕ್ಷಿಣ ವಲಯ, ಸುರತ್ಕಲ್ ಉತ್ತರ ವಲಯ) ವಲಯವಾರು ಆಸ್ತಿ ತೆರಿಗೆ ಮತ್ತು ನೀರಿಗೆ ತೆರಿಗೆ ವಸೂಲಾತಿಗೆ ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ್ ಮೂಲಕ ತೆರಿಗೆ ವಸೂಲಿಯನ್ನು ನೀಡಬಹುದಾಗಿದ್ದು, ಇದರಿಂದ ತೆರಿಗೆಯ ಬೇಡಿಕೆ ಶೇ. 100ರಷ್ಟು ವಸೂಲಾತಿಯನ್ನು ಸಾಧಿಸಲು ಪಾಲಿಕೆ ಮುಂದಾಗಿದೆ ಎಂದು ಹರಿನಾಥ್ ತಿಳಿಸಿದರು. ಮನಪಾ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಆಯುಕ್ತ ಡಾ. ಎಚ್.ಎನ್.ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಕೇಂದ್ರ ಮತ್ತು ರಾಜ್ಯದಿಂದ ಅನುದಾನದ ನಿರೀಕ್ಷೆ:
ಕೇಂದ್ರ ಮತ್ತು ಸರಕಾರದ ಸಹಯೋಗದೊಂದಿಗೆ ಸ್ಮಾರ್ಟ್‌ಸಿಟಿ ಅನುದಾನವಾಗಿ 1 ಸಾವಿರ ಲಕ್ಷ ರೂ., ಅಮೃತ್ ಯೋಜನೆಯಡಿಯಲ್ಲಿ 450 ಲಕ್ಷ ರೂ. ನಿರೀಕ್ಷಿಸಲಾಗಿದೆ. ಕೇಂದ್ರ ಸರಕಾರದ ಅನುದಾನವಾದ 14ನೆ ಹಣಕಾಸು ಯೋಜನೆಯಡಿಯಲ್ಲಿ 1,481.86 ಲಕ್ಷ ರೂ. ಮತ್ತು ಸಂಸತ್ ಸದಸ್ಯರ ಅನುದಾನದಡಿಯಲ್ಲಿ 50 ಲಕ್ಷ ರೂ., ಶಾಸಕರ ನಿಧಿಯಡಿಯಲ್ಲಿ 50 ಲಕ್ಷ ರೂ. ನಿರೀಕ್ಷಿಸಲಾಗಿದೆ. ಒಟ್ಟು ರಾಜ್ಯ ಮತ್ತು ಕೇಂದ್ರ ಸರಕಾರದಿಂದ 2016-17ರ ಸಾಲಿಗೆ 25,925.19 ಲಕ್ಷ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ.
ಬಜೆಟ್ ಅಸಮರ್ಪಕ: ವಿಪಕ್ಷ ವಿರೋಧ:
ಬಜೆಟ್ ಅಸಮರ್ಪವಾಗಿದ್ದು, ಹಲವಾರು ಲೋಪ ದೋಷಗಳಿಂದ ಕೂಡಿದೆ ಎಂದು ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಆಪಾದಿಸಿದರು. ವಿಪಕ್ಷ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ತಿಲಕ್ ರಾಜ್, ವಿಜಯ ಕುಮಾರ್ ಶೆಟ್ಟಿ ಕೂಡಾ ಬಜೆಟನ್ನು ವಿರೋಧಿಸುತ್ತಾ, ಕಳೆದ ಅವಧಿಯಲ್ಲೇ ನೀರಿನ ಶುಲ್ಕ ಸಂಗ್ರಹ, ಜಾಹೀರಾತು ಕರ ಸೇರಿದಂತೆ ತೆರಿಗೆ ವಸೂಲಾತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಡೆದಿಲ್ಲ. ಸುಲಭ ಶೌಚಾಲಯ ನಿರ್ವಹಣೆ ಸಮರ್ಪಕವಾಗಿಲ್ಲ.
ಸ್ವಚ್ಛ ಭಾರತ್‌ಗೆ ಮನಪಾ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಆಪಾದಿಸಿದರು. ಬಜೆಟ್ ಸಭೆ ಆರಂಭವಾಗುತ್ತಿದ್ದಂತೆಯೇ ತಿಂಗಳ ಸಾಮಾನ್ಯ ಸಭೆ ನಡೆಸುವಲ್ಲಿಯೂ ಮನಪಾ ಆಡಳಿತ ವಿಫಲವಾಗಿದ್ದು, ಇತ್ತೀಚೆಗೆ ನಡೆದ ವಿಶೇಷ ಸಭೆಯಲ್ಲಿ ವಿಪಕ್ಷದ ಆಕ್ಷೇಪದ ಹೊರತಾಗಿಯೂ ಕೋಟಿಗಟ್ಟಲೆ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮೂಲಕ ನಗರದ ಜನರಿಗೆ ಮೋಸ ಮಾಡಲಾಗಿದೆ ಎಂದು ಆಪಾದಿಸಿ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ತರಾಟೆಗೆತ್ತಿಕೊಂಡರು. ಕೆಲಹೊತ್ತು ಈ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಬಳಿಕ ಬಜೆಟ್ ಸಭೆ ಆರಂಭಗೊಂಡಿತು.
ಮನಪಾ ಬಜೆಟ್: ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ:
ಮಂಗಳೂರು, ಮಾ.8: ಮಹಾನಗರ ಪಾಲಿಕೆಯ 2016-17ನೆ ಸಾಲಿನ ಆಯವ್ಯಯ ಮುಂಗಡ ಪತ್ರ (ಬಜೆಟ್)ದಲ್ಲಿ ಅಭಿವೃದ್ಧಿ ಕಾಮಗಾರಿಗಳಾದ ಕಟ್ಟಡ ನಿರ್ವಹಣೆ ಮತ್ತು ನಿರ್ಮಾಣ, ಉದ್ಯಾನವನ, ಈಜುಕೊಳ, ಕ್ರೀಡೆ, ರಸ್ತೆ ನಿರ್ಮಾಣ ಮತ್ತು ನಿರ್ವಹಣೆ, ಬೃಹತ್ ಚರಂಡಿ, ರಸ್ತೆಬದಿ ಚರಂಡಿ ಮತ್ತು ಒಳಚರಂಡಿ, ನೀರು ಸರಬರಾಜುಗಳಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮನಪಾದ ಬಜೆಟ್ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್, ಕಟ್ಟಡ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ 30 ಲಕ್ಷ ರೂ. ರೂ, ಉದ್ಯಾನವನ, ಈಜುಕೊಳ ಮತ್ತು ಕ್ರೀಡೆಗೆ 250 ಲಕ್ಷ ರೂ., ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗೆ 5,807 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದರು.
ಮನಪಾಕ್ಕೆ ಕಟ್ಟಡಕ್ಕೆ ಸೌರ ಬೆಳಕು:
ಮನಪಾ ವ್ಯಾಪ್ತಿಯ ಬೀದಿ ದೀಪಗಳನ್ನು ಎಲ್‌ಇಡಿ ಬಲ್ಬ್ ಗಳಿಗೆ ಪರಿವರ್ತಿಸಲು ಯೋಚಿಸಲಾಗಿದೆ ಹಾಗೂ ಮನಪಾ ಕಟ್ಟಡಕ್ಕೆ ಪೂರ್ಣವಾಗಿ ಸೋಲಾರ್ ಶಕ್ತಿಯನ್ನು ಅಳವಡಿಸಲು ಚಿಂತಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿ, ಪಾದಾಚಾರಿ ರಸ್ತೆ ಅಭಿವೃದ್ಧಿ, ುಟ್‌ಪಾತ್ ನಿರ್ಮಾಣದಂತಹ ಕಾಮಗಾರಿಗಳಿಗೆ ಪ್ರೀಮಿಯಂ ಎ್ಎಆರ್ ನಿಧಿಯಿಂದ ಹೆಚ್ಚುವರಿಯಾಗಿ 1,500 ಲಕ್ಷ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಮನಪಾ ವ್ಯಾಪ್ತಿಯ ಎಲ್ಲ ಪ್ರಮುಖ ರಸ್ತೆಗಳಿಗೆ ನಾಮಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
 ಸ್ಮಾರ್ಟ್‌ಸಿಟಿ ಯೋಜನೆಗಾಗಿ ಮಂಗಳೂರು ಬ್ಯಾಂಕ್ ಖಾತೆಯನ್ನು ತೆರೆಯಲಾಗಿದ್ದು, 100 ಲಕ್ಷ ರೂ. ಬ್ಯಾಂಕ್ ಖಾತೆಗೆ ಹೊಂದಾಣಿಕೆಯಾಗಿದೆ. ಈ ಸಾಲಿನಲ್ಲಿ ಈ ಯೋಜನೆಗೆ ತುರ್ತು ಮತ್ತು ಮೂಲ ವೆಚ್ಚಕ್ಕಾಗಿ 200 ಲಕ್ಷ ರೂ. ಕಾಯ್ದಿರಿಸಲಾಗಿದೆ. ಅಮೃತ್ ಯೋಜನೆಯಡಿ 2015-16 ಮತ್ತು 16-17 ನೇ ಸಾಲಿಗೆ ಒಟ್ಟು 450 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸರಕಾರದ ಯೋಜನೆಯಂತೆ ಬೃಹತ್ ಚರಂಡಿ ನಿರ್ಮಾಣಕ್ಕೆ 300 ಲಕ್ಷ ರೂ., ಒಳಚರಂಡಿ ಸ್ಥಾವರ ಮತ್ತು ಯಂತ್ರೋಪಕರಣಗಳಿಗೆ 50 ಲಕ್ಷ ರೂ., ಪಾರ್ಕ್ ಅಭಿವೃದ್ಧಿ ಮತ್ತು ಹಸಿರೀಕರಣಕ್ಕೆ 100 ಲಕ್ಷ ರೂ. ಕಾಯ್ದಿರಿಸಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ನಗರೋತ್ಥಾನ ಅನುದಾನದ 2ನೆ ಹಂತದಲ್ಲಿ 5 ಸಾವಿರ ಲಕ್ಷ ರೂ. ಹಾಗೂ 3ನೆ ಹಂತದಲ್ಲಿ 7 ಸಾವಿರ ಲಕ್ಷ ರೂ. ಬಿಡುಗಡೆಗೆ ಬಾಕಿಯಿದ್ದು, ಈ ಹಣವನ್ನು ಪೂರ್ಣವಾಗಿ ಸರಕಾರದಿಂದ ಪಡೆಯಲು ಹಾಗೂ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹರಿನಾಥ್ ವಿವರ ನೀಡಿದರು.
ವರದಿ ಕೃಪೆ : ವಾಭಾ

 

Write A Comment