
ಮಂಗಳೂರು : ಮಾ.8 : ಬಿಜೆಪಿ ಜಿ ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿಯವರ ನಿಶ್ವಾರ್ಥ ಹಾಗೂ ಪ್ರಾಮಾಣಿಕ ಸೇವೆಯಿಂದ ಕಳೆದ 15 ವರ್ಷದಿಂದ ಮನೆಯ ಕೋಣೆಯಲ್ಲಿ ಮಾನಸಿಕ ಅಸ್ವಸ್ಥಯಾಗಿ ‘ಗೃಹ ಬಂಧನ’ದಲ್ಲಿದ್ದ 24 ವರ್ಷದ ಯುವತಿಯೋರ್ವಳು ಬಂಧಮುಕ್ತಿಗೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ.
15 ವರ್ಷಗಳ ಹಿಂದೆ ನಡೆದ ಪಿಲಿಕುಳ ದೋಣಿ ದುರ್ಘಟನೆಯಲ್ಲಿ ತನ್ನ ಸಹೋದರಿ ಕಣ್ಣೆದುರೇ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದ ಸಂದರ್ಭ ಜೊತೆಯಲ್ಲೇ ಇದ್ದ ಬೀನಾ ಎಂಬ ಯುವತಿ ಮಾನಸಿಕ ಅಸ್ವಸ್ಥಗೊಂಡು, ‘ಗೃಹ-ಬಂಧನ’ದಲ್ಲಿದ್ದ ಬೀನಾ ಇದೀಗ 15 ವರ್ಷಗಳ ಬಳಿಕ ‘ಗೃಹ-ಬಂಧನ’ದಿಂದ ಬಂಧಮುಕ್ತಗೊಳಿಸಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ.
ಕೂಳೂರಿನ ಗೋಪಾಲ ಮತ್ತು ಸ್ವರ್ಣಲತಾ ದಂಪತಿಗೆ ಬೀನಾ ಮತ್ತು ಅನುಷಾ ಎಂಬಿಬ್ಬರು ಹೆಣ್ಣು ಮಕ್ಕಳು. ಸೋಮೇಶ್ವರದ ರೈಲ್ವೇ ಗೇಟ್ ಬಳಿಯ ಜಲಜಾಕ್ಷಿಯ ಪುತ್ರಿಯಾಗಿರುವ ಸ್ವರ್ಣಲತಾ ಪತಿಯಿಂದ ದೂರವಾಗಿ ತನ್ನಿಬ್ಬರು ಮಕ್ಕಳೊಂದಿಗೆ ಜಲಜಾಕ್ಷಿಯೊಂದಿಗೆ ವಾಸುತ್ತಿದ್ದರು. ಜಲಜಾಕ್ಷಿ ಮಗಳು ಮತ್ತು ಇಬ್ಬರು ಮೊಮ್ಮಕ್ಕಳ ಉತ್ತಮವಾಗಿದ್ದರು.

ಬೀನಾ ಮತ್ತು ಅನುಷಾ ಮಂಗಳೂರು ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿದ್ದರು. 2000ರ ಜನವರಿ 21ರಂದು ಶಾಲೆಯ 147 ವಿದ್ಯಾರ್ಥಿಗಳು ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಹೋಗಿದ್ದು, ಅಂದು ಅಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ 23 ಮಕ್ಕಳು ನೀರಿನಲ್ಲಿ ಮುಳುಗಿದ್ದರು. ಅವರಲ್ಲಿ 18 ಮಂದಿಯನ್ನು ರಕ್ಷಿಸಲಾಗಿದ್ದು, ಅನುಷಾ ಸಹಿತ ಇತರರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು.
ಅನುಷಾ ಸಾವಿನ ಬಳಿಕ ಬೀನಾ ತೀವ್ರ ಮಾನಸಿಕ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿದ್ದಳು. ನಂತರದ ದಿನಗಳಲ್ಲಿ ಕೆಲವು ಸಮಯ ಶಾಲೆಗೆ ಹೋಗಿದ್ದರೂ ಬಳಿಕ ಶಾಲೆ ಬಿಟ್ಟು ಮನೆಯಲ್ಲೇ ಇದ್ದಳು. ಮಾನಸಿಕ ಅಸ್ವಸ್ಥೆಯಾಗಿದ್ದ ಈಕೆ ಮನೆಯಲ್ಲಿ ಕೈಗೆ ಸಿಕ್ಕ ಸೊತ್ತುಗಳನ್ನು ಬಿಸಾಡುತ್ತಿದ್ದಳು. ಪ್ರತಿಯೊಂದು ವಿಷಯದಲ್ಲೂ ಹಲ್ಲೆಗೆ ಮುಂದಾಗುತ್ತಿದ್ದಳು. ಪರಿಣಾಮ, ಮನೆಯವರೆಲ್ಲರೂ ಹೆದರಿಕೊಂಡಿದ್ದರು. ಈಕೆಗೆ ಕಂಕನಾಡಿ ಆಸ್ಪತ್ರೆ, ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಕೆಲವು ಕಡೆ ಚಿಕಿತ್ಸೆ ನಡೆಸಿದರೂ ಈಕೆ ಗುಣಮುಖ ಹೊಂದಿಲ್ಲ. ವಿಪರೀತ ಹುಚ್ಚಾಟ ನಡೆಸುತ್ತಿದ್ದ ಈಕೆಯನ್ನು ಅಂದಿನಿಂದ ಇಂದಿನ ವರೆಗೂ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು.
ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಧನಲಕ್ಷ್ಮೀ ಗಟ್ಟಿ ಈಕೆಯನ್ನು ಕಂಡು, ಚುನಾವಣೆ ಬಳಿಕ ಈಕೆಯ ಬಂಧಮುಕ್ತಿಗೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇದೀಗ ಗೆದ್ದಿರುವ ಧನಲಕ್ಷ್ಮೀ ಗಟ್ಟಿ ನೀಡಿದ ಭರವಸೆಯಂತೆ ನಡೆದುಕೊಂಡಿದ್ದಾರೆ.
ಗೃಹ ಬಂಧನದಿಂದ ಮುಕ್ತಿ ಹೊಂದಿರುವ ಬೀನಾಳನ್ನು ಈಗ ನೆಹರೂನಗರ ಪಶ್ಚಿಮ್ ರಿಹಾಬ್ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ.