ಕನ್ನಡ ವಾರ್ತೆಗಳು

ಗ್ರಾಹಕರ ಅಹವಾಲು ಸ್ವೀಕಾರ ಸಭೆಯಲ್ಲಿ ವಿದ್ಯುತ್ ದರ ಏರಿಕೆ ಪ್ರಸ್ತಾವ : ಗ್ರಾಹಕರಿಂದ ವಿರೋಧ

Pinterest LinkedIn Tumblr

mescom_price_hike

ಮಂಗಳೂರು, ಮಾ.01: ಮೆಸ್ಕಾಂಗಳ ಮನವಿಯೊಂದರಂತೆ ವಿದ್ಯುತ್ ದರ ಏರಿಕೆ ವಿಷಯದಲ್ಲಿ ಮಾರ್ಚ್ 15 ರೊಳಗೆ ತೀರ್ಮಾನವೊಂದಕ್ಕೆ ಬರಲಾಗುವುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರ ಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್ ಖರೀದಿ ವೆಚ್ಚ, ನಿರ್ವಹಣಾ ವೆಚ್ಚ ಸಹಿತ 2016-17 ನೇ ಸಾಲಿನಲ್ಲಿ 483 ಕೋಟಿ ರೂ. ಕಂದಾಯ ಕೊರತೆ ಉಂಟಾಗುವುದರಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 1.02 ರೂ. ಹೆಚ್ಚಿಸಲು ಮೆಸ್ಕಾಂ ಪ್ರಸ್ತಾವಿಸಿದ್ದು, ಇದಕ್ಕೆ ಉದ್ಯಮ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ, ಗ್ರಾಹಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

“ವಿದ್ಯುತ್ ತಾರೀಫ್ ಪರಿಷ್ಕರಣೆಯಿಂದ ಗ್ರಾಹಕರು ಅಥವಾ ಎಸ್ಕಾಂಗಳ ಮೇಲೆ ಪರಿಣಾಮ ಬೀರದು. ಗ್ರಾಹಕರು ಮತ್ತು ಎಸ್ಕಾಂ ಆಲಿಕೆಯ ಬಳಿಕ ನಾವು ಒಂದೆಡೆ ಕಲೆತು ವಿದ್ಯುತ್ ದರ ಏರಿಕೆ ನಿರ್ಧರಿಸಲಿದ್ದೇವೆ” ಎಂದವರು ಡಿ.ಸಿ ಕಚೇರಿಯಲ್ಲಿ ನಡೆದ ಗ್ರಾಹಕರ ಅಹವಾಲು ಸ್ವೀಕಾರ ಸಭೆಯಲ್ಲಿ ತಿಳಿಸಿದ್ದಾರೆ.

ಆಯೋಗವು ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಇನ್ನಷ್ಟೇ ಇಂತಹ ಸಭೆ ನಡೆಯಬೇಕಿದೆ. ವಿದ್ಯುತ್ತಿನ ಮೇಲಿನ ವಾಣಿಜ್ಯ ತೆರಿಗೆಯಿಂದ ವಿನಾಯಿತಿಗಾಗಿ ಮಂಗಳೂರು-ಪಿಲಿಕುಲ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ವರದಿಯೊಂದು ಸಲ್ಲಿಸುವಂತೆ ಆಯೋಗಾಧ್ಯಕ್ಷ ಗೌಡ ಸೂಚಿಸಿದ್ದಾರೆ.

ಪ್ರತಿಬಾರಿ ಆಯೋಗವು ಮೆಸ್ಕಾಂನ ಬೇಡಿಕೆಯಂತೆ ವಿದ್ಯುತ್ ದರ ಏರಿಕೆ ಮಾಡುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದ ಕೆಸಿಸಿಐ ಪ್ರತಿನಿಧಿ ನಝೀರ್, ಬೈಕಂಪಾಡಿಯಲ್ಲಿ ಸುಸಜ್ಜಿತ ಸರ್ವಿಸ್ ಸ್ಟೇಷನ್ ಸ್ಥಾಪಿಸಲು ಆಗ್ರಹಿಸಿದ್ದಾರೆ.

ಕೃಷಿಕರ ಪಂಪ್ ಸೆಟ್‌ಗಳಿಗೆ ಮಳೆಗಾಲದಲ್ಲೂ ವಿದ್ಯುತ್ ಪೂರೈಕೆ ಮಾಡಲಾದ ಬಗ್ಗೆ ವರದಿ ನೀಡುತ್ತಿರುವ ಮೆಸ್ಕಾಂ ಸರ್ಕಾರದಿಂದ ಹಣ ಪಡೆಯುತ್ತಿದೆ ಎಂದು ಆರೋಪಿಸಿದ ಉಡುಪಿ ಕೃಷಿಕ ಸಂಘದ ರಾಮಕೃಷ್ಣ ಶರ್ಮ, ಈ ಅವ್ಯವಹಾರಕ್ಕೆ ಕಡಿವಾಣ ಹಾಕಿದರೆ ಇಲ್ಲಿ ಗ್ರಾಹಕರ ವಿದ್ಯುತ್ ದರ ಏರಿಸುವ ಅಗತ್ಯವಿಲ್ಲ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಬೀದಿಬದಿಗಳಲ್ಲಿ ರಾತ್ರಿ ಹಗಲು ವಿದ್ಯುತ್ ಉರಿಯುತ್ತಿದ್ದು, ಸಾಕಷ್ಟು ವಿದ್ಯುತ್ ಪೋಲಾಗುತ್ತಿದೆ. ಅಲ್ಲದೆ ಬಹುತೇಕ ಎಲ್ಲ ಗ್ರಾ.ಪಂಗಳು ಲಕ್ಷಾಂತರ ರೂ. ಬಿಲ್ ಬಾಕಿ ಇರಿಸಿದೆ. ಈ ಮೊತ್ತ ವಸೂಲಿಗೆ ಮೆಸ್ಕಾಂ ಮುಂದಾಗಬೆಕು ಎಂದು ಮತ್ತೊಬ್ಬರು ಒತ್ತಾಯಿಸಿದ್ದಾರೆ.

ಬೈಕಂಪಾಡಿಯಲ್ಲಿ ಸರ್ವಿಸ್ ಸ್ಟೇಷನ್ ಹಾಗೂ ಎಲ್ಲ ತಾಲೂಕುಗಳಲ್ಲಿ ಸರ್ವಿಸ್ ಸ್ಟೇಷನ್ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗುವುದು. ವಿದ್ಯುತ್ ಲಭ್ಯತೆ ಆಧರಿಸಿ, ರಾತ್ರಿಯಲ್ಲಿ ಹೆಚ್ಚು ಹೊತ್ತು ವಿದ್ಯುತ್ ಕಡಿತ ಮಾಡಲು ಪ್ರಯತ್ನಿಸಲಾಗುವುದು ಎಂದು ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕನಂಜಪ್ಪ ತಿಳಿಸಿದ್ದಾರೆ.

Write A Comment