ಮಂಗಳೂರು, ಫೆ.02 : ಸಹಕಾರ ರಂಗದಲ್ಲಿ ಗಣನೀಯವಾಗಿ ಸೇವಾ ಕಾರ್ಯಗಳೊಂದಿಗೆ ಅದ್ವೀತಿಯ ಸಾಧನೆಗೈದಿರುವ ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಪ್ರತಿಷ್ಟಿತ ‘ ಮಿಲನ್ ಶ್ರೀ’ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.
ಹೊಂಬುಜ ಅತಿಶಯ ಕ್ಷೇತ್ರದಲ್ಲಿ ನಡೆದ ಭಾರತೀಯ ಜೈನ್ ಮಿಲನ ವಲಯ-8 ಸುವರ್ಣ ಸಂಭ್ರಮದ 17ನೇ ವಲಯ ಸಮ್ಮೇಳನದಲ್ಲಿ ಡಾ. ರಾಜೇಂದ್ರ ಕುಮಾರ್ ಅವರಿಗೆ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ನೀಡಿ ಗೌರವಿಸಿದರು.
ಸಹಕಾರ ರಂಗದಲ್ಲಿ ಕಳೆದ ಮೂರು ದಶಕಗಳಿಂದ ಅವಿರತ ಸೇವೆ ಗೈದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಡಾ. ರಾಜೇಂದ್ರ ಕುಮಾರ್ ಅವರ ವಿಶಿಷ್ಟ ಸಾಧನೆಯನ್ನು ಗುರುತಿಸಿ 2016ರ ‘ ಮಿಲನ್ ಶ್ರೀ’ ಪ್ರಶಸ್ತಿಯನ್ನು ನೀಡಲಾಗಿದೆ.
ಸಹಕಾರ ಕ್ಷೇತ್ರದ ಮೂಲತತ್ವದೊಂದಿಗೆ ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಖ್ಯವಾಗಿ ಸ್ವಸಹಾಯ ಸಂಘಗಳ ಸ್ಥಾಪನೆಗೂ ಕಾರಣಕರ್ತರಾಗಿದ್ದ ಅವರು, ಮಹಿಳಾ ಸಬಲೀಕರಣಕ್ಕೆ ಹೆಚ್ಚು ಮಹತ್ವವನ್ನು ನೀಡಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಹೊಂಬುಜ ಅತಿಶಯ ಕ್ಷೇತ್ರದ ಶ್ರೀ ದೇವೇಂದ್ರ ಕೀತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಷ್ಟ್ರೀಯ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಜಯಚಂದ್ರ ಜೈನ್, ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಪ್ರಮುಖರಾದ ಎಂ.ಎಸ್. ಮೃತ್ಯುಂಜಯಪ್ಪ, ಕೆ. ಪ್ರಸನ್ನ ಕುಮಾರ್, ಎನ್. ನಿರಂಜನ್, ಎಂ.ಎಸ್. ರವಿಕೀರ್ತಿ, ಡಾ. ಜೀವಂದರ್ ಜೈನ್, ಪುಷ್ಪರಾಜ್ ಜೈನ್, ಕೆ. ಯಶೋಧರ ಹೆಗ್ಗಡೆ ಉಪಸ್ಥಿತರಿದ್ದರು.