ಕನ್ನಡ ವಾರ್ತೆಗಳು

ಕ್ಷುಲ್ಲಕ ಕಾರಣಕ್ಕಾಗಿ ಕಲ್ಲಡ್ಕದಲ್ಲಿ ಗುಂಪು ಘರ್ಷಣೆ : ಕಲ್ಲಡ್ಕ ಪೇಟೆ ಸಂಪೂರ್ಣ ಬಂದ್

Pinterest LinkedIn Tumblr

ಮಂಗಳೂರು : ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಕಲ್ಲಡ್ಕದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗುಂಪು ಘರ್ಷಣೆಯಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡ ಘಟನೆ ಸೋಮವಾರ ನಡೆದಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾರಿ ಚಾರ್ಜ್ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದಾರೆ.

ಘಟನೆ ವಿವರ :

ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಲಾರಿಯೊಂದು ಸ್ಥಳೀಯ ಆಟೋರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದಿದ್ದು, ಅಪಘಾತ ನಡೆಸಿದ ಲಾರಿ ಚಾಲಕನಿಗೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಇದರಿಂದ ಆಕ್ರೋಶಿತಗೊಂಡ ಇನ್ನೊಂದು ಗುಂಪು ಕೂಡ ಸ್ಥಳಕ್ಕೆ ಜಮಾಯಿಸಿದ್ದು, ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಮರು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಪರಿತ ಟ್ರಾಫ್ಹಿಕ್ ಸಮಸೈ ಉಂಟಾಗಿರುವುದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ಸಂದರ್ಭ ಎರಡು ಕೋಮುಗಳ ನಡುವೆ ಉಂಟಾದ ಗುಂಪು ಘರ್ಷಣೆ ಸಂದರ್ಭ ತಂಡವೊಂದು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್‍ಗೆ ಕಲ್ಲು ತೂರಾಟ ನಡೆಸಿದ್ದು, ಬಸ್‍ಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮಾತ್ರವಲ್ಲದೇ ಇದೇ ಸಂದರ್ಭದಲ್ಲಿ ಸ್ಥಳೀಯ ಮನೆಗಳಿಗೂ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಇದೇ ಸಂದರ್ಭದಲ್ಲಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಪೊಲೀಸರು ಗುಂಪು ಚದುರಿಸಲು ಲಾರಿ ಪ್ರಹಾರ ನಡೆಸಿದ್ದಾರೆ. ಮಾತ್ರವಲ್ಲದೇ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕೆಲವು ಮನೆಗಳಿಗೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಕೆಲವು ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಈ ಘಟನೆಯಿಂದಾಗಿ ಭೀತಿಗೊಂಡ ಸ್ಥಳೀಯ ಅಂಗಡಿ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಇದರಿಂದ ಕಲ್ಲಡ್ಕ ಪೇಟೆ ಸಂಪೂರ್ಣವಾಗಿ ಬಂ ದ್‍ಗೊಂಡಿದೆ. ಇದೀಗ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment