ಕುಂದಾಪುರ: ಸ್ಫೂರ್ತಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ (ರಿ.) ಕೋಟೇಶ್ವರ ಇದರ 23ನೇ ವಾರ್ಷಿಕ ದಿನಾಚರಣೆ ಅಂಗವಾಗಿ ತೆಕ್ಕಟ್ಟೆ ಸಮೀಪದ ಕೆದೂರಿನ ಸ್ಫೂರ್ತಿಧಾಮದಲ್ಲಿ ಸ್ಫೂರ್ತಿಹಬ್ಬ ಹಾಗೂ ಸ್ಫೂರ್ತಿ ರತ್ನ ಬಿರುದು ಪ್ರಧಾನ ಸಮಾರಂಭ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.
ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ರಾಜಶೇಖರ್ ವಿ. ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಬಿರುದು ನೀಡಿದ ಬಳಿಕ ಮಾತನಾಡಿ, ಸಮಾಜದಲ್ಲಿ ನಾವುಗಳು ಬದುಕುವಾಗ ನಮ್ಮಿಂದಾಗುವ ಉಪಕಾರವನ್ನು ಇತರರಿಗೆ ಮಾಡಬೇಕೆ ಹೊರತು ಅಪಕಾರವನ್ನು ಎಂದಿಗೂ ಮಾಡಬಾರದು. ಆರ್ಥಿಕ ಭದ್ರತೆ, ಸಮಾಜಿಕ ಭದ್ರತೆ, ಕೌಟುಂಬಿಕ ಭದ್ರತೆಯ ಸವಾಲುಗಳ ನಡುವೆ ಮಕ್ಕಳನ್ನು ಉತ್ತಮವಾಗಿ ಬೆಳೆಸುವುದು ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಕೇಶವ ಕೋಟೇಶ್ವರ ಅವರು ಇಂತಹ ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರವೆಂದರು. ತಂದೆ ತಾಯಿಗಳ ಭದ್ರತೆ, ಸಂರಕ್ಷಣೆಯಿಲ್ಲದ ಮಕ್ಕಳು ಹಾಗೂ ಅನಾಥ ಮಕ್ಕಳು ಹೆಚ್ಚಾಗಿ ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಫೋಷಕರಿಲ್ಲದ ಮಕ್ಕಳನ್ನು ಇಂತಹಾ ಸಂಸ್ಥೆಯ ಮೂಲಕ ಕಾನೂನು ರೀತಿಯಲ್ಲಿ ಮಕ್ಕಳಿಲ್ಲದವರಿಗೆ ದತ್ತು ನೀಡುವ ಮೂಲಕ ಆ ಮಗು ಸಮಾಜದಲ್ಲಿ ಉತ್ತಮ ಜೀವನವನ್ನು ಕಂಡುಕೊಳ್ಳಲು ಸಾಧ್ಯವಿದೆ, ಆ ಮಗುವಿನ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಮಾತನಾಡಿ, ಸಾಮಾನ್ಯ ಜನರೆಲ್ಲರೂ ಒಗ್ಗೂಡಿ, ಶ್ರಮ ವಹಿಸಿ ಕೆಲಸ ಮಾಡಿದಾಗ ಮಾತ್ರವೇ ಉತ್ತಮ ಸಮಾಜ ಕಟ್ಟಲು ಸಾಧ್ಯವಿದೆ. ಪೋಷಕರಿಂದ ದೂರವಾಗಿ ಯಾವುದೋ ಉತ್ತಮ ಸಂಸ್ಥೆಗಳಲ್ಲಿ ಬೆಳೆದ ಹಲವರು ರಾಜ್ಯ ಹಾಗೂ ರಾಷ್ಟ್ರದಲ್ಲಿ ಹಲವು ಮಂದಿ ಇದ್ದು ಅವರೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಮಹತ್ಸಾಧನೆಯನ್ನು ಮಾಡಿದ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಹಾಗೆಯೇ ಸ್ಫೂರ್ತಿ ಸಂಸ್ಥೆಯಲ್ಲಿ ಬೆಳೆಯುತ್ತಿರುವ ಮಕ್ಕಳು ಮುಂದಿನ ದಿನಗಳಲ್ಲಿ ಅಂತಹಾ ಅದ್ಭುತ ಸಾಧನೆಯನ್ನು ಮಾಡಲಿ ಎಂದು ಆಶಿಸಿದರು. ಕೇಶವ ಕೋಟೇಶ್ವರ ಮತ್ತು ತಂಡದವರು ಈ ಸಂಸ್ಥೆಯಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದು ಇದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಸ್ಫೂರ್ತಿಧಾಮದ ಮುಖ್ಯಕಾರ್ಯನಿರ್ವಾಹಕ ಡಾ|| ಕೇಶವ ಕೋಟೇಶ್ವರ ಅವರು ಮಾತನಾಡಿ, ಸಂಸ್ಥೆ ಬೆಳೆದು ಬಂದ ಹಾದಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದರೂ ಕೂಡ ಒಂದು ಉತ್ತಮ ಉದ್ದೇಶದೊಂದಿಗೆ ಮುಂದೆ ಸಾಗುತ್ತಿದೆ. ಸಮಾಜದಲ್ಲಿ ಪಾಲಕಪೋಷಕರನ್ನು ಕಳೆದುಕೊಂಡು ಬದುಕುತ್ತಿರುವ ಮಕ್ಕಳನ್ನು ಸಂಸ್ಥೆಗೆ ಕರೆತಂದು ಅವರಿಗೊಂದು ಭವಿಷ್ಯ ನೀಡುವ ಕಾರ್ಯ ನಡೆಯುತ್ತಿದೆ, ಇದರಿಂದ ಮಾನಸಿಕ ನೆಮ್ಮದಿ ತುಂಬಾ ಸಿಗುತ್ತಿದೆ ಎಂದರು.
8 ಮಂದಿ ಸಮಾಜಸೇವಕರಿಗೆ ‘ಸ್ಫೂರ್ತಿರತ್ನ’
2014-15ನೇ ಸಾಲಿನ ಸ್ಫೂರ್ತಿ ರತ್ನ ಬಿರುದನ್ನು ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಮುಕುಂದ ಎಂ, ಖ್ಯಾತ ನ್ಯಾಯವಾದಿ ತಲ್ಲೂರು ಬಾಲಚಂದ್ರ ಶೆಟ್ಟಿ, ಗುತ್ತಿಗೆದಾರರಾದ ಕೆದೂರು ಬಡಾಡಿಮನೆ ಸತೀಶ್ ಕುಮಾರ್ ಶೆಟ್ಟಿ, ತೆಕ್ಕಟ್ಟೆ ಪಂಚಾಮ್ರತ ಬೇಕರಿ ಮಾಲಿಕ ಸತೀಶ್ ಶೆಟ್ಟಿ ಅವರಿಗೆ ನೀಡಲಾಯಿತು. ಹಾಗೂ 2015-16 ನೇ ಸಾಲಿನ ಸ್ಫೂರ್ತಿ ರತ್ನ ಬಿರುದನ್ನು ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರ್ಪಿತಾ, ಹೌಸಿಂಗ್ ಬೋರ್ಡ್ ಗುತ್ತಿಗೆದಾರ ಎಂ.ಸಿ. ಚಂದ್ರಶೇಖರ್, ಉದ್ಯಮಿ ಕರಮತ್ತುಲ್ಲಾ ಅಬ್ದುಲ್ ಸತ್ತಾರ್ ಕನ್ನುಕೆರೆ, ಸಮಾಜ ಸೇವಕ ಡೇವಿಡ್ ಸಿಕ್ವೇರಾ ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ, ಕೋಟೇಶ್ವರ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಚಂದ್ರಶೇಖರ್, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಎಲ್. ಗೋನ್ಸಾಲ್ವಿಸ್ ಉಪಸ್ಥಿತರಿದ್ದರು.
ಬಳಿಕ ಸ್ಫೂರ್ತಿಧಾಮದ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ಹಾಗೂ ಮೂರುಮುತ್ತು ಕಲಾವಿದರಿಂದ ನಾಟಕ ಪ್ರದರ್ಶನಗೊಂಡಿತು.
ಚಿತ್ರ,ವರದಿ- ಯೋಗೀಶ್ ಕುಂಭಾಸಿ