ಮಂಗಳೂರು.ಜ.26 : ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆಯುತ್ತಿದ್ದ ವೇಳೆ ಬಸ್ಸು ತಂಗುದಾಣವೇ ಕುಸಿದು ಬಿದ್ದ ಘಟನೆ ನಡೆದಿದ್ದು, ಒಂದು ವರ್ಷದ ಹಿಂದೆಯಷ್ಟೇ ನಿರ್ಮಾಣಗೊಂಡಿದ್ದ ಬಸ್ಸು ತಂಗುದಾಣ ಇದೀಗ ನೆಲಸಮಗೊಂಡಿದೆ.
ಬಸ್ಸು ತಂಗುದಾಣದ ಹಿಂಬದಿಯಲ್ಲಿ ತಡೆಗೋಡೆ ಮತ್ತು ಕೆಳಗಿನ ಫ್ಲಾಟ್ ಮತ್ತು ಮನೆಯವರಿಗೆ ಅನುಕೂಲವಾಗುವಂತೆ ಮೆಟ್ಟಿಲುಗಳ ನಿರ್ಮಾಣ ಕಾರ್ಯದ ಸಲುವಾಗಿ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ತಡೆಗೋಡೆ ನಿರ್ಮಾಣ ಕಾಮಗಾರಿಗಾಗಿ ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆಯುತ್ತಿದ್ದ ವೇಳೆ ಬಸ್ಸು ತಂಗುದಾಣ ಕುಸಿದು ಬಿದ್ದಿದೆ. ಇಲ್ಲಿ ಈ ಹಿಂದೆ ರಸ್ತೆ ಅಗಲೀಕರಣ ಮಾಡುವಾಗ ಮಣ್ಣು ಹಾಕಿರುವುದರಿಂದ ಮಣ್ಣು ಬಹುತೇಕ ಮೆದುವಾಗಿದ್ದು ಅದು ಜೆಸಿಬಿ ಯಂತ್ರದ ರಭಸಕ್ಕೆ ಜರಿದು ಪಕ್ಕದಲ್ಲಿದ್ದ ಬಸ್ಸು ತಂಗುದಾಣಕ್ಕೆ ಹಾನಿಯಾಗಿರ ಬೇಕೆಂದು ಅಂದಾಜಿಸಲಾಗಿದೆ.
ಕದ್ರಿ ಮಾರ್ಕೆಟ್ ನ ಮುಂಬಾಗದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ವರ್ಷದ ಹಿಂದೆಯಷ್ಟೇ ರಸ್ತೆ ಸುರಕ್ಷತಾ ಸಲಹಾ ಸಮಿತಿಯ ಸಲಹೆಯ ಮೇರೆಗೆ ಈ ಬಸ್ಸು ತಂಗುದಾಣವನ್ನು ನಿರ್ಮಿಸಲಾಗಿತ್ತು.