ಮಂಗಳೂರು : ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷಗಳು ಕೀಳುಮಟ್ಟದ ರಾಜಕೀಯ ಮಾಡುತ್ತಿವೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ.
ಕೇರಳದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಹಿತ್ ಬರೆದ ಆತ್ಮಹತ್ಯಾ ಪತ್ರದಲ್ಲಿ ಯಾರ ಮೇಲೂ ಆಪಾದನೆ ಮಾಡಿಲ್ಲ. ಯಾರ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ. ವಿನಾಕಾರಣ ಕೇಂದ್ರ ಸಚಿವರಾದ ದತ್ತಾತ್ತೇಯ ಬಂಡಾರು, ಸ್ಮತಿ ಇರಾನಿಯವರ ಮೇಲೆ ಆಪಾದನೆ ಮಾಡುತ್ತಿದ್ದು, ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಇದೊಂದು ಕೀಳು ರಾಜಕೀಯವಲ್ಲದೆ ಮತ್ತೇನಲ್ಲ. ಇಂತಹ ಗಿಮಿಕ್ ಮೂಲಕ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ದೇಶದ ಗಮನವನ್ನು ಅಭಿವೃದ್ಧಿಯಿಂದ ಮತ್ತೆಲ್ಲೊ ಸೆಳೆಯುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.
ಸತ್ಯ ಗೊತ್ತಿಲ್ಲದೆ ವಿಪಕ್ಷಗಳು ಟೀಕೆ ಮಾಡುತ್ತಿವೆ. ಯಾಕುಬ್ ಮೆಮನ್ ಗಲ್ಲಿಗೇರಿಸಿದನ್ನು ವಿರೋಧಿಸಿ ಹೈದರಾಬಾದ್ ವಿವಿ ಕ್ಯಾಂಪಸ್‌ನೊಳಗೆ ಪ್ರತಿಭಟನೆ ನಡೆದಿತ್ತು. ಇದರಲ್ಲಿ ರೋಹಿತ್ ಪಾಲ್ಗೊಂಡಿದ್ದ್ದ. ಈ ವೇಳೆ ಅಲ್ಲಿ ನಡೆದ ಘರ್ಷಣೆಯ ವೇಳೆ ಎಬಿವಿಪಿ ಮುಖಂಡರ ಮೇಲೂ ಹಲ್ಲೆ ನಡೆದಿತ್ತು. ಈ ವಿವಾದಕ್ಕೆ ಸಂಬಂಧಿಸಿದಂತೆ ವಿವಿ ಕ್ರಮ ಕೈಗೊಂಡಿದೆ ಎಂದವರು ಹೇಳಿದರು.
ಹೈದರಾಬಾದ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಹಲವಾರು ಘಟನೆಗಳು ನಡೆದಿವೆ. ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿದ್ದರೆ ಅದರಲ್ಲಿ ತಪ್ಪೇನಿದೆ? ಎಂದ ಅವರು, ಈ ಬಗ್ಗೆ ಸಚಿವೆ ಸ್ಮೃತಿ ಇರಾನಿ ಯಾವುದೇ ಕ್ರಮಕೈಗೊಂಡಿಲ್ಲ. ಬದಲಾಗಿ ಈ ಪತ್ರವನ್ನು ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿದ್ದಾರೆ. ಸುಶಿಲ್ ಎಂಬ ವಿದ್ಯಾರ್ಥಿಯ ಮೇಲೆ ರೋಹಿತ್ ವೇಮುಲ ಹಾಗೂ ಆತನ ಕಡೆಯವರು ಹಲ್ಲೆ ನಡೆಸಿದಾಗ ಆತನ ಮನೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಆದೇಶದಂತೆ ವಿಶ್ವವಿದ್ಯಾನಿಲಯ ಅವರ ಮೇಲೆ ಕ್ರಮ ತೆಗೆದುಕೊಂಡಿದೆ. ಒಂಭತ್ತು ವರ್ಷಗಳಲ್ಲಿ ಒಂಭತ್ತು ಮಂದಿ ವಿದ್ಯಾರ್ಥಿಗಳು ಇದೇ ವಿಶ್ವವಿದ್ಯಾನಿಲಯದಲ್ಲಿ ಆತ್ಮಹತ್ಯೆ ಮಾಡಿದ್ದಾರೆ. ಆಗೆಲ್ಲಾ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಇದನ್ನು ದೊಡ್ಡ ಪ್ರಕರಣವನ್ನಾಗಿ ಪರಿಗಣಿಸದ ಪ್ರತಿಪಕ್ಷಗಳು ಈಗೇಕೆ ಇಷ್ಟು ದೊಡ್ಡ ಹಗರಣವಾಗಿ ಬಿಂಬಿಸುತ್ತದೆ ಎಂದು ಪ್ರಶ್ನಿಸಿದರು.
ಇದೇ ವಿವಿಯಲ್ಲಿ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ 9 ದಲಿತ ವಿದ್ಯಾರ್ಥಿ ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭಗಳಲ್ಲಿ ರಾಹುಲ್ ಗಾಂಧಿಯಾಗಲಿ, ಇತರ ಕಾಂಗ್ರೆಸ್ ನಾಯಕರಾಗಲಿ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಆದರೆ ಇದೀಗ ದೇಶದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು, ದಲಿತರು ಸುರಕ್ಷಿತವಾಗಿಲ್ಲ ಎಂಬ ಪ್ರಚಾರ ಮಾಡುವ ಮೂಲಕ ವಿಪಕ್ಷಗಳು ಓಟಿನ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ರುಕ್ಮಯ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.