ಮಂಗಳೂರು,ಜ.15 : ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯವಾಗಿದ್ದು, ಕ್ರೀಡಾಭಾರತಿ ಹಿಂದಿನಿಂದಲೂ ಕ್ರೀಡಾಸಕ್ತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕ್ರೀಡಾಭಾರತಿ ಮಂಗಳೂರು ಘಟಕ ಹಾಗೂ ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಹಕಾರದೊಂದಿಗೆ ದ.ಕ.ಜಿಲ್ಲಾ ಮಟ್ಟದ ಕಿರಿಯರ ಒಲಿಂಪಿಕ್ಸ್ ಕ್ರೀಡಾಕೂಟ-2016ಕ್ಕೆ ಶುಕ್ರವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. ದ.ಕ.ಜಿಲ್ಲೆಯ ಜನರು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಇಂಥಹ ಕ್ರೀಡಾಸಕ್ತರಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಮೂಲಕ ಕ್ರೀಡಾಭಾರತಿ ಅವಕಾಶ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಜೆ.ಆರ್.ಲೋಬೊ, ವಿಧಾನಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಿರಿಯರ ಒಲಂಪಿಕ್ಸ್ ಸಮಿತಿಯ ಚೇರ್ ಮ್ಯಾನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ನಾಗರಾಜ್ ಶೆಟ್ಟಿ , ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ವಿಪಕ್ಷ ನಾಯಕ ಸುಧೀರ್ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು
ಈ ಒಲಂಪಿಕ್ಸ್ ಕ್ರೀಡಾಕೂಟವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದ್ದು, 10, 12, 14, 17 ವಯೋಮಾನದ ಪ್ರೌಢ ಶಾಲೆಗಿಂತ ಕೆಳಗಿನ ಎಲ್ಲಾ ಹುಡುಗ ಹುಡುಗಿಯರಿಗೆ ಪಾಲ್ಗೊಂಡಿದ್ದರು ಕ್ರೀಡಾಕೂಟದ ಆರಂಭಕ್ಕೆ ಮೊದಲು ಕ್ರೀಡಾಪಟುಗಳ ಆಕರ್ಷಕ ಪಥಸಂಚಲನ ನಡೆಯಿತು.