ಕನ್ನಡ ವಾರ್ತೆಗಳು

ಕರಾವಳಿ ಜನತೆಯ ವಿರುದ್ಧ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಿದ ವಾಟಾಳ್ ನಾಗಾರಜ್

Pinterest LinkedIn Tumblr

vatala_nagaraj_photo_1

ಮಂಗಳೂರು : ಕಳಸಾ ಬಂಡೂರಿ (ಮಹದಾಯಿ) ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬಂದ್‌ಗೆ ಬೆಂಬಲ ನೀಡದ ಬಗ್ಗೆ ಜಿಲ್ಲೆಯ ಜನರು ಮಾನವೀಯತೆ ಇಲ್ಲದವರು ಎಂದು ಹೇಳಿಕೆ ನೀಡಿದ್ದ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗಾರಜ್ ಅವರು ಇದೀಗ ತಮ್ಮ ಹೇಳಿಕೆ ಬಗ್ಗೆ ನಗರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ಮೋತಿಮಹಲ್ ಹೊಟೇಲ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಜಿಲ್ಲೆಯ ಜನರ ಬಗ್ಗೆ ದ್ವೇಷದಿಂದ ಹಾಗೆ ಮಾತನಾಡಿಲ್ಲ. ನಿಮಗೆ ಬೇಸರವಾಗಿದ್ದರೆ ಅದನ್ನು ಹಿಂತೆಗೆದುಕೊಳ್ಳಿ. ನಾನೂ ಮಾತನ್ನು ಹಿಂತೆಗೆದುಕೊಳ್ಳುತ್ತೇನೆ. ಅದನ್ನು ಇಲ್ಲಿಗೆ ಮುಗಿಸೋಣ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕ್ಷಮೆಯಾಚಿಸಿದರು.

ಈ ವೇಳೆ ಪತ್ರಕರ್ತರು ವಾಟಾಳ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಎತ್ತಿನಹೊಳೆ ಯೋಜನೆಯಲ್ಲಿ ಸರ್ಕಾರ ಸೇರಿದಂತೆ ಉಳಿದೆಲ್ಲರೂ ಕರಾವಳಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದರೂ ಕಳಸಾ ಬಂಡೂರಿ ಯೋಜನೆಗಾಗಿ ಕರಾವಳಿಗರು ಹೋರಾಟ ಮಾಡಬೇಕೆಂದು ಯಾಕೆ ನಿರೀಕ್ಷಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಕೋಲಾರದಲ್ಲಿದ್ದ ಸಾವಿರಾರು ಕೆರೆಗಳನ್ನು ಒತ್ತುವರಿ ಮಾಡುವಾಗ ಅಲ್ಲಿನ ಜನರ ಕುಡಿಯುವ ನೀರಿಗಾಗಿ ಯೋಚಿಸದೆ ಇದೀಗ ಮತ್ತೊಂದು ಜಿಲ್ಲೆಯನ್ನು ಬರಿದುಮಾಡಬೇಕೆಂದು ಹೊರಟಿರುವುದು ಅನ್ಯಾಯ ಎಂದಾಗ, ಎತ್ತಿನಹೊಳೆ ಯೋಜನೆ ಬಗ್ಗೆ ಆಳವಾಗಿ ಅಧ್ಯಯನ ನಡೆಸಿಲ್ಲ. ತನ್ನ ಮಾತಿನಿಂದ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ವಾಟಳ್ ಹೇಳಿದರು.

ಎತ್ತಿನಹೊಳೆ ಯೋಜನೆಯಲ್ಲಿ ಪ್ರಾದೇಶಿಕ ಭಾವನೆಗಳಿಗೆ ಅನ್ಯಾಯವಾಗದಂತೆ ಕುಡಿಯುವ ನೀರಿಗಾಗಿ ಸೂಕ್ತ ಸೂತ್ರವನ್ನು ಅಳವಡಿಸುವ ದಿಸೆಯಲ್ಲಿ ಒಂದು ವಾರದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಮಾತುಕತೆ ನಡೆಸುವುದಾಗಿ ಹೇಳಿದರು. ಯೋಜನೆ ವಿಚಾರದಲ್ಲಿ ದ್ವೇಷ ಬೆಳೆಯುವ ಮುನ್ನ ಸಭೆ ಕರೆಸಿ ಜನರಿಗೆ ವಿಷಯ ಮನದಟ್ಟು ಮಾಡಿಕೊಡುವುದು ಸಿಎಂ ಕರ್ತವ್ಯವಾಗಿತ್ತು. ಅದನ್ನು ಅವರು ಮಾಡಬೇಕಿತ್ತು. ಇನ್ನೂ ಕಾಲ ಮೀರಿಲ್ಲ. ಕರಾವಳಿಯ ಜನರನ್ನು ಕರೆಸಿ ತಜ್ಞರ ಮೂಲಕ ಪಶ್ಚಿಮ ಘಟ್ಟ, ಅರಣ್ಯ ರಕ್ಷಣೆ ಸಹಿತ ಇಡೀ ಯೋಜನೆಯ ಮಾಹಿತಿ ನೀಡಿ, ಸೌಹಾರ್ದವಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕಿದೆ. ಯೋಜನೆ ಕುರಿತು ಎರಡೂ ಪ್ರದೇಶದ ಜನರನ್ನು ಕರೆಸಿ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಅವರು ಹೇಳಿದರು.

Write A Comment