ಕುಂದಾಪುರ: ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಖತರ್ನಾಕ್ ಕಳ್ಳರು ಅಂಗಡಿಯಲ್ಲಿದ್ದ ಮಾಲಕಿಯ ಗಮನ ಬೇರೆಡೆಗೆ ಸೆಳೆದು ಗಲ್ಲಾ ಪೆಟ್ಟಿಗೆಯಲ್ಲಿದ್ದ 75 ಸಾವಿರ ನಗದನ್ನು ದೋಚಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸಮೀಪದ ಬೊಬ್ಬರ್ಯನಕಟ್ಟೆ ಎದುರಿನ ಶ್ರೀ ನಗರೇಶ್ವರೀ ಟ್ರೆಡರ್‍ಸ್ ಎಂಬ ಹಾರ್ಡ್‌ವೇರ್ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ.
ನಡೆದಿದ್ದಾದರೂ ಏನು?:
ಕುಂದಾಪುರ ಖಾರ್ವಿಕೇರಿ ನಿವಾಸಿಯಾದ ಯೋಗೀಶ್ ಅವರ ಮಾಲೀಕತ್ವದ ಶ್ರೀ ನಗರೇಶ್ವರೀ ಟ್ರೆಡರ್‍ಸ್ ಎನ್ನುವ ಹಾರ್ಡ್‌ವೇರ್ ಅಂಗಡಿ ನಾಲ್ಕು ವರ್ಷಗಳಿಂದ ಕುಂದಾಪುರ ಬೊಬ್ಬರ್ಯನಕಟ್ಟೆ ಎದುರಿನಲ್ಲಿ ಕಾರ್ಯಾಚರಿಸುತ್ತಿತ್ತು. ಇಂದು ಸಂಜೆ ಸುಮಾರಿಗೆ ಮೂವರು ಈ ಅಂಗಡಿಗೆ ಬಂದಿದ್ದು ಅಂಗಡಿ ಮಾಲೀಕರ ಪತ್ನಿ ಗ್ರಾಹಕರ ಬಳಿ ಏನು ಸರಕುಗಳು ಬೇಕೆಂದು ಕೇಳಿದ್ದಾರೆ, ಈ ವೇಳೆ ತಮಗೆ ತಗಡಿನ ಶೀಟುಗಳು ಬೇಕೆಂದು ಅದನ್ನು ನೋಡಬೇಕೆಂದು ಹೇಳಿದ ಓರ್ವ ಮಾಲೀಕರ ಪತ್ನಿ ಗಮನ ಸೆಳೆದಿದ್ದು ಇವರ ಪೈಕಿ ಇನ್ನಿಬ್ಬರು ಗಲ್ಲಾಪೆಟ್ಟಿಗೆಯಲ್ಲಿದ್ದ 75 ಸಾವಿರ ಹಣವನ್ನು ಲಪಾಟಾಯಿಸಿದ್ದಾರೆ. ಇದೇ ಹೊತ್ತಿನಲ್ಲಿ ಮಾತಿಗಿಳಿದಿದ್ದ ಇನ್ನೋರ್ವ ತಗಡಿನ ಶೀಟು ಕೊಂಡೊಯ್ಯಲು ವಾಹನ ತರುವುದಾಗಿ ತಿಳಿಸಿದ್ದು ಜೊತೆಯಾಗಿಯೇ ಮೂವರು ತೆರಳಲು ಮುಂದಾಗಿದ್ದಾರೆ, ಇವರ ಚಲನವಲನ ಕಂಡು ಅನುಮಾನಗೊಂಡ ಮಾಲಕಿ ಅಂಗಡಿಯೊಳಕ್ಕಿದ್ದ ಗಲ್ಲಾಪೆಟ್ಟಿಗೆ ನೋಡಿದಾಗ ಅದರೊಳಗಿದ್ದ ನಗದು ಇರಲಿಲ್ಲ, ಘಟನೆ ಬಗ್ಗೆ ಅರಿತ ಆಕೆ ಕೂಗಿಕೊಳುವಷ್ಟರಲ್ಲಿ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆನ್ನಲಾಗಿದೆ. ಇಷ್ಟೆಲ್ಲಾ ಘಟನೆಗಳು ನಡೆಯುವಾಗ ಮಾಲೀಕರಾದ ಯೋಗೀಶ್ ಅಂಗಡಿಯಲ್ಲಿರಲಿಲ್ಲ.
ಅಪರಿಚಿತ ಕಳ್ಳರು:
ಮೊದಲು ಓರ್ವ ಆಗಮಿಸಿದ್ದು ಆತ ಗ್ರಾಹಕನ ಸೋಗಿನಲ್ಲಿದ್ದ ಬಳಿಕ ಬಂದಿಬ್ಬರು ಆತನ ಸ್ನೇಹಿತರೆಂಬಂತೆಯೂ ಹಾಗ್‌ಊ ಅವರಿಗೆ ಸರಕುಗಳನ್ನು ನೀಡುವವರೆಗೂ ಕಾಯುವುದಾಗಿಯೂ ತಿಳಿಸಿದ್ದಾರೆ ಎನ್ನಲಾಗಿದೆ, ಅಲ್ಲದೇ ಮೂವರು ಕುಂದಾಪುರ ಕನ್ನಡ ಮಿಶ್ರಿತ ಕನ್ನಡ ಭಾಷೆಯಲ್ಲಿಯೇ ಮಾತನಾಡುತ್ತಿದ್ದರೆನ್ನಲಾಗಿದ್ದು ಓರ್ವನ ಕಣ್ಣು ಬೆಕ್ಕಿನ ಕಣ್ಣಿನಂತಿದೆ ಎಂದು ಅಂಗಡಿ ಮಾಲೀಕರ ಪತ್ನಿ ತಿಳಿಸಿದ್ದಾರೆ. ಕಷ್ಟದಲ್ಲಿರುವ ಯೋಗೀಶ್ ದಂಪತಿಗಳು ಜೀವನ ನಿರ್ವಹಣೆಗಾಗಿ ಈ ಅಂಗಡಿಯನ್ನು ನಡೆಸುತ್ತಿದ್ದು, ಈ ಹಿಂದೆ ವ್ಯಾಪಾರವಾದ ಸರುಕುಗಳ ಮೊತ್ತದಲ್ಲಿ ಬಾಕಿಯಿದ್ದ ಒಂದಷ್ಟು ಹಣ ಇವತ್ತು ಬಂದ ಕಾರಣ ಅಂಗಡಿಯಲ್ಲಿ ನಗದನ್ನು ಇಟ್ಟಿದ್ದರು ಎನ್ನಲಾಗಿದೆ.
ಪೊಲೀಸರು ಅಲರ್ಟ್:
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದು ಕುಂದಾಪುರ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಹಾಗೂ ಎಸ್.ಐ. ನಾಸೀರ್ ಹುಸೇನ್ ಹಾಗೂ ದೇವರಾಜ್ ಸ್ಥಳ ಪರಿಶೀಲನೆ ನಡೆಸಿ ಸಮೀಪದ ಸಿ.ಸಿ. ಕ್ಯಾಮೆರಾಗಳ ಪೂಟೇಜ್‌ಗಳನ್ನು ವೀಕ್ಷಿಸಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗಾಗಿ ಸಂಚಾರಿ ಪೊಲೀಸರು ವಿವಿದೆಡೆ ನಾಕಾಬಂದಿಯನ್ನು ನಡೆಸಿದ್ದಾರೆ ಎನ್ನಲಾಗಿದೆ.