ಮಂಗಳೂರು,ಡಿ.30 : ಭೂಗತ ಪಾತಕಿ ಉಡುಪಿ ಮೂಲದ ಬನ್ನಂಜೆ ರಾಜಾನನ್ನು ಇಂದು ಬಿಗು ಪೊಲೀಸ್ ಭದ್ರತೆಯಲ್ಲಿ ನಗರದ ಎರಡನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
2011ರಲ್ಲಿ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಶೂಟೌಟ್ ಪ್ರಕರಣವೊಂದಕ್ಕೆ ಸಂಬಂಧಿಸಿ ಬನ್ನಂಜೆ ರಾಜಾನನ್ನು ಕದ್ರಿ ಠಾಣಾ ಪೊಲೀಸರು ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕೆಂದು ಕೇಳಿಕೊಂಡರು. ವಿಚಾರಣೆ ನಡೆಸಿದ ಮಂಗಳೂರಿನ ನ್ಯಾಯಾಲಯವು ರಾಜಾನಿಗೆ ಐದು ದಿನಗಳ ಕಾಲ ಕದ್ರಿ ಪೊಲೀಸರಿಗೆ ಹಸ್ತಾಂತರಿಸಿ ಆದೇಶ ನೀಡಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಬಂದರ್, ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ವಿಚಾರಣೆ ಮುಂದೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಗತ ಪಾತಕಿಯಾಗಿರುವ ಬನ್ನಂಜೆ ರಾಜಾನ ವಿರುದ್ಧ ಕೊಲೆ, ಕೊಲೆಯತ್ನ, ಶೂಟೌಟ್, ಅಕ್ರಮ ಶಸ್ತ್ರಾಸ್ತ್ರ, ಬೆದರಿಕೆ ಕರೆ ಸಹಿತ ರಾಜ್ಯದ ವಿವಿದೆಢೆ 44 ಪ್ರಕರಣಗಳು ದಾಖಲಾಗಿವೆ. ಈತ 1994ರಲ್ಲಿ ದೇಶದಿಂದ ಪಲಾಯಗೊಂಡು ವಿದೇಶದಲ್ಲಿ ತಲೆಮರೆಸಿಕೊಂಡು ಕರಾವಳಿ ಸಹಿತ ರಾಜ್ಯದ ವಿವಿಧೆಡೆ ತನ್ನ ಸಮಾಜಘಾತಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ. ಈತನ ಬೆದರಿಕೆ ಕರೆಗಳು ಹೆಚ್ಚಾದಾಗ ರಾಜ್ಯ ಪೊಲೀಸರು ರೆಡ್‌ಕಾರ್ನರ್ ನೊಟೀಸ್ ಜಾರಿ ಮಾಡಿದ್ದರು. ಬಳಿಕ ಫೆಬ್ರವರಿ 11ರಂದು ಮೊರಕ್ಕೊ ಪೊಲೀಸರಿಂದ ಬಂಧಿತನಾಗಿದ್ದ. ರಾಜ್ಯ ಪೊಲೀಸರು ಮೊರಕ್ಕೊ ಸರಕಾರರೊಂದಿಗೆ ವಿಶೇಷ ಮುತುವರ್ಜಿ ವಹಿಸಿ ಆತನನ್ನು ಆಗಸ್ಟ್ 14ರಂದು ಭಾರತಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು.
ಬನ್ನಂಜೆ ರಾಜಾನ ವಿರುದ್ಧ ದಾಖಲಾಗಿರುವ 44 ಪ್ರಕರಣಗಳ ಪೈಕಿ 16 ವಿಶೇಷ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಈ 16 ಪ್ರಕರಣಗಳ ಪೈಕಿ ಹೆಚ್ಚಿನವು ಹಫ್ತಾ ಬೆದರಿಕೆ, ಶೂಟೌಟ್ ಮೊದಲಾದ ಪ್ರಕರಣಗಳಾಗಿವೆ.
ಭಾರತಕ್ಕೆ ಕರೆ ತರುವ ವೇಳೆ ತನಿಖಾಧಿಕಾರಿಯಾಗಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಈತನನ್ನು ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ಕಾಯ್ದೆಯಡಿ (ಕೋಕಾ) ಬೆಳಗಾವಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾರಾವಾರದ ಬಿಜೆಪಿ ನಾಯಕ ಆರ್.ಎನ್.ನಾಯಕ್ ಕೊಲೆ ಪ್ರಕರಣ ಕುರಿತು ತನಿಖೆ ನಡೆಸಿದ್ದರು.