ಕನ್ನಡ ವಾರ್ತೆಗಳು

ಕೋಮು ಸೌಹಾರ್ದ ಕಾಪಾಡಲು ಗ್ರಾಮದಲ್ಲಿ ಶಾಂತಿ ಸಮಿತಿ ರಚನೆಗೆ ಹೊಸ ಪ್ರಯೋಗ : ಡಾ. ಶರಣಪ್ಪ ಎಸ್.ಡಿ.

Pinterest LinkedIn Tumblr

SP_Sharannappa_Dk

ಮಂಗಳೂರು, ಡಿ.30:  ದ.ಕ. ಜಿಲ್ಲೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕೋಮು ಸೌಹಾರ್ದದ ಗುರಿ ಇರಿಸಿಕೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ನೇತೃತ್ವದ ಜಿಲ್ಲಾ ಪೊಲೀಸ್ ಇಲಾಖೆ ಗ್ರಾಮಗಳಲ್ಲಿ ಶಾಂತಿ ಸಮಿತಿಗಳ ರಚನೆಗೆ ಮುಂದಾಗಿದೆ. ಅಹಿತಕರ ಘಟನೆಗಳು ನಡೆದ ಬಳಿಕ ಬಹುತೇಕವಾಗಿ ಶಾಂತಿ ಸಭೆಗಳನ್ನು ನಡೆಸಲಾಗುತ್ತದೆ. ಅಲ್ಲದೆ ಶಾಂತಿ ಸಭೆಗಳು ಆಯಾ ಪೊಲೀಸ್ ಠಾಣೆಗೆ ಸೀಮಿತವಾಗಿ ನಡೆಸಲಾಗುತ್ತದೆ.

ಅಹಿತಕರ ಘಟನೆಗಳ ಸಂದರ್ಭ ಜಿಲ್ಲಾ ಮಟ್ಟದ ಶಾಂತಿ ಸಭೆಯೂ ನಡೆಯುತ್ತದೆ. ಆದರೆ ಕೋಮು ಸೌಹಾರ್ದಕ್ಕೆ ತಳಮಟ್ಟದ ಸಹಕಾರವನ್ನು ಮನಗಂಡಿರುವ ದ.ಕ. ಪೊಲೀಸ್ ಇಲಾಖೆ, ಪ್ರತಿ ಗ್ರಾಮಗಳಲ್ಲಿ ಶಾಂತಿ ಸಮಿತಿಗಳನ್ನು ರಚಿಸಿದೆ.

ಪೊಲೀಸ್ ಇಲಾಖೆಯಿಂದ ರಚಿಸಲಾಗುವ ಈ ಶಾಂತಿ ಸಭೆಯಲ್ಲಿ ಗ್ರಾಮದ ಎಲ್ಲ ಸಮುದಾಯಗಳ ಮುಖಂಡರನ್ನು ಸೇರಿಸಲಾಗುತ್ತದೆ. ಗ್ರಾಪಂ ಪ್ರತಿನಿಧಿಗಳು, ಪಂಚಾಯತ್ ಆಭಿವೃದ್ಧಿ ಅಧಿಕಾರಿ ಹಾಗೂ ಆಯಾ ಠಾಣೆಗಳ ಅಧಿಕಾರಿಗಳನ್ನು ಈ ಸಮಿತಿ ಒಳಗೊಂಡಿರುತ್ತದೆ. ಪ್ರತಿ ತಿಂಗಳು ಒಂದು ದಿನ ಸಭೆ ಸೇರುವ ಮೂಲಕ ಪೊಲೀಸರು ಹಾಗೂ ನಾಗರಿಕರ ನಡುವೆ ಪರಸ್ಪರ ಉತ್ತಮ ಬಾಂಧವ್ಯವನ್ನು ಬೆಳೆಸುವ ಉದ್ದೇಶ ಕೂಡಾ ಈ ಶಾಂತಿ ಸಮಿತಿಯದ್ದಾಗಿದೆ. ಈ ರೀತಿ ಪೊಲೀಸರು ಹಾಗೂ ನಾಗರಿಕರ ನಡುವೆ ಬಾಂಧವ್ಯದಿಂದಾಗಿ ಗ್ರಾಮಗಳಲ್ಲಿ ಅಹಿತಕರ ಘಟನೆಗಳಿಗೆ ನಿಯಂತ್ರಣ ಹೇರಲು ಸಾಧ್ಯ. ಮಾತ್ರವಲ್ಲದೆ ಅಹಿತಕರ ಘಟನೆಗಳ ಸಂದರ್ಭ ಆರೋಪಿಗಳ ಮಾಹಿತಿಯನ್ನು ಕಲೆಹಾಕುವುದು ಸುಲಭ. ತಪ್ಪು ಮಾಡಿ ದವರ ಬಗ್ಗೆ ಪೊಲೀಸರಿಗೆ ಸೂಕ್ತ ಮಾಹಿತಿಯನ್ನು ಒದಗಿಸು ವುದು ಅಲ್ಲಿನ ಮುಖಂಡರ ಜವಾಬ್ದಾರಿಯೂ ಆಗಿರು ವುದರಿಂದ ಕೋಮು ಸಾಮರಸ್ಯಕ್ಕೆ ಈ ಶಾಂತಿ ಸಮಿತಿಗಳು ಸಹಕಾರಿಯಾಗಲಿವೆ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠರ ಅಭಿಪ್ರಾಯ.

ಜನವರಿಯಿಂದ ಕಾರ್ಯಾರಂಭ: ರಾಜ್ಯದಲ್ಲಿ ಪ್ರಥಮ ಪ್ರಯೋಗವಾಗಿ ಆರಂಭಿಸಲಾಗಿರುವ ಈ ಶಾಂತಿ ಸಮಿತಿಗಳು ಜನವರಿಯಿಂದ ಕಾರ್ಯಾರಂಭಿಸಲಿವೆ. ಗ್ರಾಮದ ಜನರಿಗೆ ತಿಳುವಳಿಕೆ ನೀಡಬಲ್ಲ ಸಮಾಜದ ಮುಖಂಡರನ್ನು ಒಳಗೊಂಡ ಸಮಿತಿ ಇದಾಗಿದ್ದು, ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಸಮಿತಿಗಳು ಕಾರ್ಯ ನಿರ್ವಹಿಸಲಿವೆ. ಶಾಶ್ವತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಲಾಗುತ್ತಿದೆ.

Write A Comment