ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ ಅಂತರಾಷ್ಟ್ರೀಯ ಮಾದರಿಯಲ್ಲಿ 5ನೇ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಕೂಟ

Pinterest LinkedIn Tumblr

ಕುಂದಾಪುರ: ರಾಜ್ಯದ ಟೆನ್ನಿಸ್‌ಬಾಲ್ ಕ್ರಿಕೆಟ್‌ನ ಹೆಸರಾಂತ ತಂಡವಾದ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ 5ನೇ ಬಾರಿಗೆ ರಾಷ್ಟ್ರೀಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟವು ಡಿ. 24ರಿಂದ 27ರವರೆಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

Kndpr_National Level_Cricket

ಹಿನ್ನಲೆ: 1974 ರಲ್ಲಿ ಪ್ರಾರಂಭವಾದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಹಂತ ಹಂತವಾಗಿ ಬೆಳೆದು 1987 ರಿಂದ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಕೂಟಗಳನ್ನು ಗೆಲ್ಲುತ್ತಾ ರಾಜ್ಯದ ಹೆಸರಾಂತ ತಂಡವಾಗಿ ಹೊರಹೊಮ್ಮಿತು. ಈ ವರೆಗೆ ಸುಮಾರು 27 ರಾಜ್ಯಮಟ್ಟದ ಪ್ರಶಸ್ತಿ ಹಾಗೂ 100ಕ್ಕೂ ಮಿಕ್ಕಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಚಕ್ರವರ್ತಿ ಕುಂದಾಪುರ ತಂಡ ಗೆದ್ದಿದೆ. ಟೆನ್ನಿಸ್‌ಬಾಲ್ ಕ್ರಿಕೆಟ್‌ಗಷ್ಟೇ ತಮ್ಮನ್ನುಸೀಮಿತಗೊಳಿಸದೆ 1998 ರಿಂದ ಲೆದರ್‌ಬಾಲ್ ಕ್ರಿಕೆಟ್ ತರಬೇತಿ ಶಿಬಿರ ನಡೆಸಿ ಯುವ ಪ್ರತಿಭೆಗಳನ್ನು ಶೋಧಿಸಿ ವಿಶ್ವವಿದ್ಯಾನಿಲಯ, ರಾಜ್ಯ ಗ್ರಾಮಾಂತರ, ರಾಜ್ಯ ರಣಜಿ ಮೀಸಲು ಹಾಗೂ ರಾಷ್ಟ್ರಮಟ್ಟದ ಜೂನಿಯರ್ ತಂಡದವರೆಗೂ ಕುಂದಾಪುರದ ಪ್ರತಿಭೆಗಳನ್ನು ಪರಿಚಯಿಸಿದ ಹೆಮ್ಮೆ ಚಕ್ರವರ್ತಿ ಕ್ರಿಕೆಟ್ ಕ್ಲಬ್‌ನದ್ದು. ಕ್ರೀಡೆಯಲ್ಲಷ್ಟೇ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಕೂಡ ಚಕ್ರವರ್ತಿಯ ಹಲವಾರು ಸದಸ್ಯರು ಸಕ್ರೀಯರಾಗಿದ್ದಾರೆ. ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಗಳಾದ ರೋಟರಿ ಹಾಗೂ ಲಯನ್ಸ್ ಕ್ಲಬ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಚಕ್ರವರ್ತಿಯ ಸದಸ್ಯರು ನಿರಂತರವಾಗಿ ಸಮಾಜ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ದಾಖಲೆಯ 83 ಬಾರಿ ರಕ್ತದಾನವನ್ನು ಮಾಡಿರುವ ಚಕ್ರವರ್ತಿಯ ಸದಸ್ಯ ವಿಜಯ್ ಎಸ್. ಪೂಜಾರಿ ಅವರ ನೇತೃತ್ವದಲ್ಲಿ ಚಕ್ರವರ್ತಿಯ ಬಹುತೇಕ ಸದಸ್ಯರು ರಕ್ತದಾನ ಮಾಡುತ್ತಿದ್ದಾರೆ.

ಕ್ರೀಡಾರಂಗ ಹಾಗೂ ಇನ್ನಿತರ ರಂಗಗಳಲ್ಲಿ ನಿರಂತರ ಪ್ರೋತ್ಸಾಹ ನೀಡುತ್ತಿರುವ ಈ ಸಂಸ್ಥೆ ಇನ್ನೇನು 43ನೇ ವರ್ಷಾಚರಣೆಯಲ್ಲಿದ್ದು ೫ನೇ ರಾಷ್ಟ್ರೀಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟ ನಡೆಸಲು ಸಜ್ಜಾಗಿ ನಿಂತಿದೆ. ಈ ಪಂದ್ಯಕೂಟದಲ್ಲಿ ಯಶಸ್ವಿಯಾಗಿ ನಡೆಸಲು ಚಕ್ರವರ್ತಿಯ ಗೌರವಾಧ್ಯಕ್ಷರಾಗಿ ಮಡಾಮಕ್ಕಿ ಶಶಿಧರ ಶೆಟ್ಟಿ, ಅಧ್ಯಕ್ಷರಾಗಿ ಶ್ರೀಪಾದ ಉಪಾಧ್ಯ, ಸಂಚಾಲಕರಾಗಿ ಅಭಿನಂದನ್ ಶೆಟ್ಟಿಯವರು ಚುಕ್ಕಾಣಿ ಹಿಡಿದ್ದಿದಾರೆ. ದೇಶಾದ್ಯಂತ ಸುಮಾರು 43 ತಂಡಗಳು ಈ ಪಂದ್ಯಕೂಟದಲ್ಲಿ ಭಾಗವಹಿಸಲಿವೆ. ನಾಗ್ಪುರ, ಚೆನ್ನೈ, ಕ್ಯಾಲಿಕಟ್, ಈರೋಡ್, ಚಾಮರಾಜನಗರ, ಕೊಡಗು, ತುಮಕೂರು, ಸಾಗರ, ದಾವಣಗೆರೆ, ಬೆಳಗಾವಿ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಕುಂದಾಪುರ ಹಾಗೂ ಬೆಂಗಳೂರಿನ 10 ತಂಡಗಳು ಪ್ರತಿಷ್ಠಿತ ಚಕ್ರವರ್ತಿ ಟ್ರೋಫಿ 2015 ಕ್ಕಾಗಿ ಸೆಣಸಾಡಲಿವೆ. ಭಾಗವಹಿಸುವ ಎಲ್ಲಾ ತಂಡಗಳಿಗೆ ಆಯೋಜಕರ ಪರವಾಗಿ ಸಮವಸ್ತ್ರದ ರಂಗುರಂಗಿನ ಉಡುಗೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಪಂದ್ಯಕೂಟದ ನೇರಪ್ರಸಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಅಂತರಾಷ್ಟ್ರೀಯ ಮಾದರಿಯಲ್ಲಿ ಪಂದ್ಯಾಕೂಟ : ಅಂತರಾಷ್ಟ್ರೀಯ ಪಂದ್ಯಕೂಟದ ಮಾದರಿಯಲ್ಲಿ ತೃತೀಯ ಅಂಪೈರ್, ಮೈದಾನದಲ್ಲಿ ನೇರಪ್ರಸಾರ ವೀಕ್ಷಿಸಲು ಎರಡು ಬೃಹತ್ ಎಲ್‌ಇಡಿ ಡಿಜಿಟಲ್ ವಾಲ್, ಪಂದ್ಯಾಟದಲ್ಲಿ ತೊಡಗಿರುವ ಎರಡು ತಂಡಗಳಿಗೆ ಡಗೌಟ್ಸ್, ಐಪಿ‌ಎಲ್ ಮಾದರಿಯಲ್ಲಿ ಡಿಜೆ ಸಂಗೀತ, ಹೆಲಿಕ್ಯಾಮ್ ಮೂಲಕ ಮೈದಾನದ ಪಕ್ಷಿನೋಟದ ಚಿತ್ರಿಕರಣ, ಬೌಂಡರಿ ಗೆರೆಗಳಿಗೆ ರಂಗುರಂಗಿನ ಕವಚ ಮುಂತಾದ ಹಲವಾರು ವಿನೂತನ ವ್ಯವಸ್ಥೆಯನ್ನು ಈ ಬಾರಿಯ ಟೂರ್ನಿಯಲ್ಲಿ ಮಾಡಲಾಗಿದೆ. ಈ ಪಂದ್ಯಕೂಟದ ಇನ್ನೊಂದು ವಿಶೇಷ ಆಕರ್ಷಣೆಯಾಗಿ ವಿಶಿಷ್ಟ ಮಾದರಿಯ ಪಾನೀಯ ವಾಹನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕ್ರೀಡಾಪ್ರೇಮಿಗಳ ಮೆಚ್ಚುಗೆ ಪಾತ್ರವಾಗಲಿದೆ. ಪಂದ್ಯಕೂಟದ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವ ಸಾಧ್ಯತೆ ಇದ್ದು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಆಕರ್ಷಕ ಬಹುಮಾನ : ಈ ಪಂದ್ಯಕೂಟದ ವಿಜೇತ ತಂಡಕ್ಕೆ ನಗದು ರೂ. 3,03,333/- ಹಾಗೂ ವಿಶ್ವಕಪ್ ಮಾದರಿಯ ಚಕ್ರವರ್ತಿ ಟ್ರೋಫಿ 2015 ಹಾಗೂ ರನ್ನರ್ ಅಪ್ ತಂಡಕ್ಕೆ ನಗದು ರೂ.2,02,222/- ಹಾಗೂ ಚಕ್ರವರ್ತಿ ಟ್ರೋಫಿ -2015 ನೀಡಲಾಗುವುದು. ಉಪಾಂತ್ಯ ಪಂದ್ಯದಲ್ಲಿ ಪರಾಜಿತ ಎರಡು ತಂಡಗಳಿಗೆ ರೊ.25,000/- ನಗದು ಬಹುಮಾನ ಹಾಗೂ ಕ್ವಾಟರ್ ಫೈನಲ್ ಪರಾಜಿತ ನಾಲ್ಕು ತಂಡಗಳಿಗೆ ರೊ.15,000/- ನಗದು ಬಹುಮಾನ ನೀಡಲಾಗುವುದು ಎಂದು ಚಕ್ರವರ್ತಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶ್ರೀಪಾದ್ ಉಪಾಧ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಘಾಟನೆ : ಈ ಟೂರ್ನಿಯ ಉದ್ಘಾಟನೆಯನ್ನು ಡಿಸೆಂಬರ್ 24 ರಂದು ಸಂಜೆ 6.30 ಕ್ಕೆ ಕುಂದಾಪುರ ಡಿವೈ‌ಎಸ್‌ಪಿ ಮಂಜುನಾಥ ಶೆಟ್ಟಿ ನೆರವೇರಿಸಲಿದ್ದಾರೆ. ಕುಂದಾಪುರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಮಾನ ವಿತರಣಾ ಸಮಾರಂಭ ಡಿಸೆಂಬರ್ 27ರ ರಾತ್ರಿ ನಡೆಯಲಿದ್ದು ಕ್ರಿಕೆಟ್ ಹಾಗೂ ಸಿನಿಮಾ ತಾರೆಯರು ಭಾಗವಹಿಸಿ ಸಮಾರಂಭಕ್ಕೆ ಹೆಚ್ಚಿನ ರಂಗು ನೀಡಲಿದ್ದಾರೆ. ಒಟ್ಟಾರೆ ಕುಂದಾಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಇದೆ. ಸುಮಾರು 43 ವರ್ಷಗಳ ಇತಿಹಾಸವನ್ನು ಹೊಂದಿರುವ ಚಕ್ರವರ್ತಿಗಳ ಕಿರೀಟಕ್ಕೆ ಇನ್ನೂಂದು ಚಿನ್ನದ ಗರಿ ಸೇರಿಕೊಳ್ಳಲಿದೆ.

Write A Comment