ಕನ್ನಡ ವಾರ್ತೆಗಳು

ಅಮೃತ ಯೋಜನೆಗೆ ಮನಪಾ ಆಯ್ಕೆ: ಕಾಮಗಾರಿಗೆ 200 ಕೋ. ರೂ. ಅನುದಾನ ಮಂಜೂರು.

Pinterest LinkedIn Tumblr

mcc_news_photo_a

ಮಂಗಳೂರು, ಡಿ.19: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಅಮೃತ ಯೋಜನೆಗೆ ಮಂಗಳೂರು ಮಹಾನಗರ ಪಾಲಿಕೆ ಆಯ್ಕೆಯಾಗಿದ್ದು, ಈ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮುಂದಿನ ಐದು ವರ್ಷ ಗಳಲ್ಲಿ 200 ಕೋಟಿ ರೂ. ಅನುದಾನ ಸಿಗಲಿದೆ ಎಂದು ಮನಪಾ ವಿಪಕ್ಷ ನಾಯಕ ಸುಧೀರ್ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಯೋಜನೆಯ ಅನುದಾನದ ಪೈಕಿ ಶೇ.50ರಷ್ಟು (100 ಕೋ.ರೂ.) ಕೇಂದ್ರ ಸರಕಾರ ನೀಡಲಿದೆ. ಶೇ. 35ನ್ನು (70 ಕೋ.ರೂ.) ರಾಜ್ಯ ಸರಕಾರ ಹಾಗೂ ಶೇ.15 (30 ಕೋ.ರೂ.)ರಷ್ಟು ಮಹಾನಗರ ಪಾಲಿಕೆ ಭರಿಸಬೇಕಾಗಿದೆ ಎಂದು ವಿವರಿಸಿದರು.

ಪಾಲಿಕೆಗೆ ಬರುವ 200 ಕೋಟಿ ರೂ. ಅನುದಾನದಲ್ಲಿ ಶೇ.20ರಷ್ಟು (40 ಕೋಟಿ ರೂ.) ಅನುದಾನವನ್ನು ರಿಸರ್ವ್ ಇಡಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಪಾಲಿಕೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವಿಶ್ಲೇಷಿಸಿದ ಬಳಿಕ ಬಿಡುಗಡೆ ಮಾಡಲಿದೆ. ಮೊದಲ ಹಂತದಲ್ಲಿ ಒಟ್ಟು 148 ಕೋಟಿ ರೂ. ಒಳಚರಂಡಿ ಯೋಜನೆ, 10 ಕೋಟಿ ರೂ. ಮಳೆ ನೀರು ಹರಿಯುವ ಬೃಹತ್ ಚರಂಡಿ ಯೋಜನೆ, ಉದ್ಯಾನವನ ಕಾಮಗಾರಿಗಳಿಗೆ 2 ಕೋಟಿ ರೂ.ಸೇರಿದಂತೆ 160 ಕೋಟಿ ರೂ. ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಅಮೃತ ಯೋಜನೆಗೆ ಅನುದಾನ ಹಂಚಿಕೆಯ ಪ್ರಸ್ತಾವನೆಯನ್ನು ಮನಪಾವು ಕೇಂದ್ರ ಸರಕಾರಕ್ಕೆ ಕಳುಹಿಸುವ ಸಂದರ್ಭದಲ್ಲಿ ಸ್ಥಳೀಯ ಸಂಸದರು, ಮನಪಾ ಸದಸ್ಯರ ಗಮನಕ್ಕೆ ತರದೇ, ಪರಿಷತ್‌ನಲ್ಲೂ ಅನುಮೋದನೆ ಪಡೆಯದೇ ಅವೈಜ್ಞಾನಿಕ ರೀತಿಯಲ್ಲಿ ಕಳುಹಿಸಲಾಗಿದೆ ಎಂದು ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಈ ಸಂದರ್ಭ ಆಪಾದಿಸಿದರು. ಕೇವಲ ಶಾಸಕರು, ಮೇಯರ್ ಅವರೇ ಪ್ರಸ್ತಾವನೆ ಕಳುಹಿಸಿದ್ದಾರೆ. ಇದರಿಂದಾಗಿ ಮೊದಲ ಎರಡು ವರ್ಷಗಳಲ್ಲಿ ಯೋಜನೆಯ ಅನುದಾನ ಕಡಿಮೆ ಪ್ರಮಾಣದಲ್ಲಿ ಬಂದಿದೆ ಎಂದು ಅವರು ತಿಳಿಸಿದರು.

ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ರವಿಶಂಕರ್ ಮಿಜಾರ್, ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಿತಿನ್‌ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರಭಾ ಮಾಲಿನಿ ಉಪಸ್ಥಿತರಿದ್ದರು.

Write A Comment