ಕನ್ನಡ ವಾರ್ತೆಗಳು

ಬೈಕ್ ಬಸ್‍ಗೆ ಡಿಕ್ಕಿ: ಸವಾರ ಸಾವು – ಸಹಸವಾರ ಗಂಭೀರ ಗಾಯ

Pinterest LinkedIn Tumblr

accident

ಕಾರ್ಕಳ, ಡಿ.17: ತಾಲೂಕಿನ ಮಿಯ್ಯಾರು ಸಮೀಪದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಿನ್ನೆ ಬೆಳಗ್ಗೆ ಓವರ್ ಟೇಕ್ ಭರಾಟೆಯಲ್ಲಿದ್ದ ಬೈಕೊಂದು ಖಾಸಗಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮಿಯ್ಯಾರು ಗ್ರಾಮದ ಸೂರಾಲು ಗುಂಡಾಜೆ ನಿವಾಸಿ ಬಾಬು ಪೂಜಾರಿಯವರ ಪುತ್ರ ಅಶ್ವತ್ಥ (21) ಮೃತ ಯುವಕ. ನೆರೆಮನೆಯ ಮಂಜುನಾಥ ಪೂಜಾರಿ (21) ಗಾಯಾಳು ಯುವಕನಾಗಿದ್ದಾನೆ.

ಅಶ್ವತ್ಥ್ ಕಳೆದೆರಡು ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ನಾಲ್ಕು ದಿನಗಳ ಹಿಂದಷ್ಟೇ ಸಂಬಂಧಿಗಳ ಮದುವೆಗೆಂದು ಊರಿಗೆ ಮರಳಿದ್ದ. ಮಂಜುನಾಥ ಮುಂಬೈನಲ್ಲಿ ದುಡಿಯುತ್ತಿದ್ದು, ಆತನೂ ಮದುವೆಗೆಂದು ಬಂದಿದ್ದ.

ನಿನ್ನೆ ಬೆಳಗ್ಗೆ ಇವರಿಬ್ಬರೂ ಕಾರ್ಯನಿಮಿತ್ತ ಬೈಕಿನಲ್ಲಿ ಮಿಯ್ಯಾರು ಪಂಜಾಯತ್‍ಗೆ ತೆರಳಿ ಅಲ್ಲಿಂದ ಮರಳುತ್ತಿರುವಾಗ 11 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಅಶ್ವತ್ಥ್ ಮಿಯ್ಯಾರು ಗ್ರಾಮದ ಕಾಜರಬೈಲು ಎಂಬಲ್ಲಿ ತಿರುವು ರಸ್ತೆಯಲ್ಲಿ ಎದುರಿನಿಂದ ಹೋಗುತ್ತಿದ್ದ ಬಸ್ಸೊಂದನ್ನು ಓವರ್ ಟೇಕ್ ಮಾಡಿದ್ದ. ಅದೇ ವೇಳೆ ಎದುರಿನಿಂದ ಇನ್ನೊಂದು ಖಾಸಗಿ ಬಸ್ ಬರುತ್ತಿತ್ತು. ವೇಗ ನಿಯಂತ್ರಿಸಲು ಸಾಧ್ಯವಾಗದೇ ಬೈಕ್ ಆ ಬಸ್ಸಿಗೆ ಅಪ್ಪಳಿಸಿದ್ದು ತೀವ್ರವಾಗಿ ಗಾಯಗೊಂಡಿದ್ದ ಅಶ್ವತ್ಥ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಮಂಜುನಾಥನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment