ಉಡುಪಿ: ಕೋಟ ಬ್ಲಾಕ್ ಕಾಂಗ್ರೆಸ್ನ ನೂತನ ಕಛೇರಿ ಇಂದಿರಾ ಭವನದಲ್ಲಿ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿಯಾಗಿ ಕೋಟ ಬ್ಲಾಕ್ ವ್ಯಾಪ್ತಿಯ ಪಂಚಾಯಿತಿ ಸದಸ್ಯರ ಮತ್ತು ಕಾರ್ಯಕರ್ತರ ಸಭೆ ಸೋಮವಾರದಂದು ನಡೆಯಿತು. ಹಿರಿಯ ಕಾಂಗ್ರೆಸ್ ನಾಯಕರುಗಳ ಸಭೆಯಲ್ಲಿರುವಾಗಲೇ ಕಾರ್ಯಕರ್ತರು, ಪಕ್ಷ ಆರಿಸಿದ ಅಭ್ಯರ್ಥಿಯ ವಿಚಾರವಾಗಿ ಅಸಮಧಾನ ಹೊರಗೆಡಹಿ ವಾಗ್ವಾದ ನಡೆಸಿದರು.
ಕೆಪಿಸಿಸಿ ಸದಸ್ಯ ಎಂ.ಎ, ಗಫೂರ್ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲಗಳಿವೆ. ಆ ಗೊಂದಲಗಳನ್ನು ನಿವಾರಣೆ ಮಾಡಿ ಪಕ್ಷ ಯಾಕೆ ಪ್ರತಾಪಚಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ ಎನ್ನುವ ವಿಚಾರ ಕಾರ್ಯಕರ್ತರು ಅರಿತುಗೊಳ್ಳಬೇಕಾದ ಅಗತ್ಯತೆ ಇದೆ. ಈ ಹಿಂದೆ ಪ್ರತಾಪಚಂದ್ರ ಶೆಟ್ಟಿ ಅವರ ಸಮ್ಮುಖದಲ್ಲಿಯೇ ಪಕ್ಷದ ಹಿರಿಯರಿಗೆ ಅವಕಾಶ ಸಿಕ್ಕಾಗ ಅವರು ಎಂದು ಆಕ್ರೋಶ ವ್ಯಕ್ತಪಡಿಸಿ ಪಕ್ಷ ವಿರೋಧಿಯಾಗಿ ವರ್ತಿಸಿಲ್ಲ. ಪಕ್ಷದ ಹಿರಿಯ ಆಯ್ಕೆಯನ್ನು ಅರಿತು ಪಕ್ಷದಲ್ಲಿ ಸಕ್ರೀಯರಾಗಿ ತೊಡಗಿಕೊಂಡಿದ್ದಾರೆ. ಅವಕಾಶ ವಂಚಿತರಾದಗ ಲಾಬಿ ಮಾಡದೆ, ಅವಕಾಶ ಸಿಕ್ಕಾಗ ಸುಮನೆ ಕೂಡದೆ ಜನರ ಸಮಸ್ಯೆಗೆ ಸ್ಪಂದಿಸಿದ ನಾಯಕ ಅವರು. ವಿಧಾನ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಗಮನಿಸಿ ಸದನದಲ್ಲಿ ಸಮಸ್ಯೆಗಳಿಗೆ ಧ್ವನಿಯಾದವರು, ಯಾವುದೇ ಪ್ರಚಾರವನ್ನು ಬಯಸದೆ, ಯಾವುದೇ ಪ್ರಚಾರಕ್ಕೆ ಸಿಕ್ಕದೆ ಇವರು ಉತ್ತಮ ನಾಯಕ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಆಯ್ಕೆಯನ್ನು ಪ್ರಶ್ನಿಸದೆ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಬೇಕಾದ ಅಗತ್ಯತೆ ಇದೆ ಎಂದರು.

ಗಫೂರ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪ್ರತಿಪಕ್ಷದ ನಾಯಕ ಶ್ರೀನಿವಾಸ ಅಮೀನ್ ಅವರು ಚುನಾವಣೆಯ ಪೂರ್ವದಲ್ಲಿ ಮಾತ್ರ ನಮ್ಮ ನಾಯಕರಿಗೆ ಪಕ್ಷ ಸಂಘಟನೆಯ ಬಗ್ಗೆ ನೆನಪಾಗುತ್ತದೆ. ಚುನಾವಣೆಯ ಬಳಿಕ ನಮ್ಮ ನೆನಪು ಆಗುವುದೇ ಇಲ್ಲ. ಮತ್ತೆ ಹಿರಿಯ ಸದಸ್ಯರಿಗೆ ಮಾತ್ರ ಪಕ್ಷ ಮಣೆ ಹಾಕುವುದು ಸರಿಯಲ್ಲ, ಪಕ್ಷದಲ್ಲಿ ಸಾರ್ವಜನಿಕವಾಗಿ ಸಕ್ರೀಯವಾಗಿರುವವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು, ಹಿರಿತನಕ್ಕೆ ಬೆಲೆ ನೀಡುವ ನೀವು ನಮ್ಮನ್ನು ಕಡೆಗಣಿಸಿದರೆ ಅದು ಸರಿಯಲ್ಲ, ನಂತರ ಹುಟ್ಟಿದ್ದು ನಮ್ಮ ತಪ್ಪಲ್ಲ. ನಮ್ಮ ಎದುರಿನ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಎಷ್ಟು ಗ್ರಾಮ ಪಂಚಾಯಿತಿ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಪಟ್ಟಿ ನೀಡುತ್ತಾರೆ, ನಿಮಗೆ ಸಾಧ್ಯವಾದರೆ ನಿಮ್ಮ ಭಾಷಣದಲ್ಲಿ ತಿಳಿಸಿದಂತೆ ನಮ್ಮ ಪಕ್ಷ ಆರಿಸಿದ ಅಭ್ಯರ್ಥಿ ಯಾವ ಯಾವ ಗ್ರಾಮ ಪಂಚಾಯಿತಿ ಭೇಟಿ ನೀಡಿದ್ದಾರೆ ತಿಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೋರ್ವ ಕಾರ್ಯಕರ್ತರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಅರ್ಹ ನಾಯಕರಿದ್ದಾರೆ ಪ್ರತಿ ಸಾರಿ ಕೂಡ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಅವಕಾಶ ನೀಡುತ್ತಿರುವುದರ ಅರ್ಥವೇನು ಎಂದರು. ಅಲ್ಲದೇ ಯಾವುದೇ ಸಮಸ್ಯೆ ಎದುರಾದಗ ನಮ್ಮ ಉಡುಪಿ ಜಿಲ್ಲಾ ನಗರಾಭಿವೃದ್ಧಿ ಸಚಿವರ ಉಪಸ್ಥಿತಿಗಾಗಿ ಕರೆ ಮಾಡಿದಾರೆ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲ ಎಂದು ಸ್ಥಳೀಯ ಮುಖಂಡರಿಗೆ ಮುಖಭಂಗ ಮಾಡುತ್ತಿದ್ದಾರೆ, ಉಡುಪಿ ಜಿಲ್ಲಾ ವ್ಯಾಪ್ತಿಯ ಸಮಸ್ಯೆಗೆ ಸ್ಪಂದಿಸದ ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಮುಂದೆ ಕಾಪು ಉಸ್ತುವಾರಿ ಸಚಿವರು ಎಂದು ತಮ್ಮ ಹುದ್ದೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಳಿಕ ಹಿರಿಯ ಮುಖಂಡ ಮಾಜಿ ಶಾಸಕ ಬಸವರಾಜ್, ಕೋಟ ಬ್ಲಾಕ್ ಅಧ್ಯಕ್ಷ ಶಂಕರ ಕುಂದರ್, ಕೊಳ್ಕೆಬೈಲು ಕಿಶನ್ ಹೆಗ್ಡೆ, ಕುಂದಾಪುರ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಕಾರ್ಯಕರ್ತರನ್ನು ಸಂತೈಸುವ ಯತ್ನ ಮಾಡಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ದಿನೇಶ್ ಪುತ್ರನ್, ಜಿಲ್ಲಾ ಸೇವಾದಳ ಅಧ್ಯಕ್ಷ ಅಶೋಕ, ಜಿಲ್ಲಾ ಕಾಂಗ್ರೆಸ್ ಮಹೇಶ್, ತಾಲೂಕು ಪಂಚಾಯಿತಿ ಸದಸ್ಯೆ ರೋಶನಿ ವಲಿವರಾ, ಹಿಂದುಳಿದ ವರ್ಗದ ಅಧ್ಯಕ್ಷ ಗಣೇಶ್ ನೆಲ್ಲಿಬೆಟ್ಟು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಗೌಸ್, ಅನಂತ್ ಶೆಣೈ, ಬಾಲಕೃಷ್ಣ ಪ್ರಜಾರಿ ಉಪಸ್ಥಿತರಿದ್ದರು. ಬ್ಲಾಕ್ ಕಾರ್ಯದರ್ಶಿ ಗೋಪಾಲ ಬಂಗೇರ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿ ವಂದಿಸಿದರು.