ಕನ್ನಡ ವಾರ್ತೆಗಳು

ಕಬಡ್ಡಿ ಆಟಗಾರನ ನಿಗೂಢ ಕೊಲೆ : ಆರೋಪಿಯ ಬಂಧನ.

Pinterest LinkedIn Tumblr

brother_murder_photo_m

ಕಾಸರಗೋಡು, ಡಿ.11: ಕಬಡ್ಡಿ ಆಟಗಾರ ನೀಲೇಶ್ವರದ ಸಂತೋಷ್ (37) ಎಂಬವರ ನಿಗೂಢ ಸಾವು ಕೊಲೆ ಎಂದು ಸಾಬೀತಾಗಿದ್ದು, ಈತನ ಚಿಕ್ಕಮ್ಮನ ಮಗನೇ ಈ ಕೃತ್ಯ ನಡೆಸಿದ್ದು, ಈತನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಕಾರ್ಯಾಂಗೋಡು ಚೆಟ್ಟಿಕಾನದ ಮನೋಜ್ (37) ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗಿದೆ.

ಡಿ.7ರಂದು ಸಂತೋಷ್ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಮನೆಯವರು ಶಂಕಿಸಿದ್ದರು. ಆದರೆ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಿಯಾರಂ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಸ್ಪಷ್ಟಗೊಂಡಿತ್ತು. ಇದರಂತೆ ಆಸ್ಪತ್ರೆಯ ಪೊಲೀಸ್ ಸರ್ಜನ್ ಗೋಪಾಲಕೃಷ್ಣ ಪಿಳ್ಳೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ನೀಲೇಶ್ವರ ಪೊಲೀಸರಿಗೆ ವರದಿಯನ್ನು ನೀಡಿದ್ದರು.

ಘಟನೆ ನಡೆದ ದಿನ ಸಂತೋಷ್ ಮಾತ್ರ ಮನೆಯಲ್ಲಿದ್ದರು. ಈ ಸಂದರ್ಭದಲ್ಲಿ ಮನೋಜ್ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಮನೋಜ್ ವಿವಾಹಿತನಾಗಿದ್ದರೂ ಪತ್ನಿಗೆ ವಿಚ್ಛೇದನೆ ನೀಡಿದ್ದನು. ಈತ ಸಂತೋಷ್‌ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನೆನ್ನಲಾಗಿದೆ. ಕೊಲೆಯ ಹಿಂದಿನ ದಿನ ಪಾನಮತ್ತನಾಗಿ ಮನೆಗೆ ಬಂದಿದ್ದ ಸಂತೋಷ್ ತಾಯಿಯ ಮೇಲೆ ಹಲ್ಲೆ ನಡೆಸಿದ್ದನು. ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .

ಸಂತೋಷ್‌ನ ಪತ್ನಿ ತಾಯಿ ಜೊತೆ ಆಸ್ಪತ್ರೆಯಲ್ಲಿ ನಿಂತಿದ್ದರು. ಡಿ.7ರಂದು ರಾತ್ರಿ ಸಂತೋಷ್ ಮತ್ತು ಆತನ ಸ್ನೇಹಿತ ಮನೆಯಲ್ಲಿ ಮದ್ಯ ಸೇವಿಸುತ್ತಿರುವುದನ್ನು ಗಮನಿಸಿದ ಮನೋಜ್, ಸ್ನೇಹಿತ ತೆರಳಿದ ಕೂಡಲೇ ಪಾನಮತ್ತನಾಗಿ ಬಿದ್ದಿದ್ದ ಸಂತೋಷ್‌ನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಹಗ್ಗವನ್ನು ಈತನೇ ತಂದಿದ್ದು, ಕೃತ್ಯದ ಬಳಿಕ ಇದನ್ನು ಕೊಂಡೊಯ್ದಿದ್ದಾನೆ.

ಮರುದಿನ ಮನೆಯವರು ಬಂದಾಗ ಮೃತಪಟ್ಟ ಸ್ಥಿತಿಯಲ್ಲಿ ಸಂತೋಷ್ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಯಾವುದೇ ಸಂಶಯ ಬಾರದಂತೆ ಈತ ಮರುದಿನ ನಡೆದ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದಾನೆ. ಪೊಲೀಸರು ಈತನ ಸ್ನೇಹಿತರ ಬಗ್ಗೆ ಮಾಹಿತಿ ಕಲೆ ಹಾಕಿ ಹಲವರನ್ನು ವಿಚಾರಣೆಗೊಳಪಡಿಸಿ ಸಾಂದರ್ಭಿಕ ಸಾಕ್ಷಗಳನ್ನು ಕಲೆ ಹಾಕಿದ್ದರು. ಕೊನೆಗೆ ಸಂಶಯದ ಮೇರೆಗೆ ಮನೋಜ್‌ನನ್ನು ವಶಕ್ಕೆ ತೆಗೆದು ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂತು. ಕೃತ್ಯಕ್ಕೆ ಸಂತೋಷ್‌ನ ಪತ್ನಿಯ ಪ್ರೇರಣೆ ಲಭಿಸಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Write A Comment