ಕನ್ನಡ ವಾರ್ತೆಗಳು

ಉಡುಪಿಯಲ್ಲಿ ಮಾನವ ಹಕ್ಕುಗಳ ದಿನಾಚರಣೆ; ‘ಮಾನವೀಯತೆ ಮಾನವ ಹಕ್ಕು ಸಂರಕ್ಷಣೆಗೆ ಪೂರಕ’-ಸಿ. ಜಿ. ಹುನಗುಂದ

Pinterest LinkedIn Tumblr

ಉಡುಪಿ: ಮಾನವೀಯ ನಡವಳಿಕೆಯಿಂದ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯ. ನಮ್ಮ ಸಂಸ್ಕೃತಿಯಲ್ಲಿ ಮಾನವೀಯ ಹಕ್ಕುಗಳ ಪರಿಕಲ್ಪನೆ ಹಾಸುಹೊಕ್ಕಾಗಿದೆ. ೧೨ನೇ ಶತಮಾನದಿಂದಲೇ ಮಾನವೀಯತೆಯ ಪಾಠವನ್ನು ಹೇಳಿದ ನಾಡು ನಮ್ಮದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸದಸ್ಯ ಸಿ. ಜಿ. ಹುನಗುಂದ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Human Rights Day_celebration_Udupi

ಬದುಕು, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗಳೇ ಮಾನವ ಹಕ್ಕುಗಳ ಮೂಲ ಆಶಯವಾಗಿದೆ. ಸಂವಿಧಾನದ ಮೂರನೇ ಪರಿಚ್ಛೇದದಲ್ಲಿ ನಿರೂಪಿಸಲಾದ ಮೂಲಭೂತ ಹಕ್ಕುಗಳ ಅನುಷ್ಠಾನ ಸರ್ಕಾರದಿಂದ, ಅಧಿಕಾರಿಗಳಿಂದ ಸಾಧ್ಯವಾಗಬೇಕೆಂದರು.

ಮಾನವ ಹಕ್ಕು ಅನುಷ್ಠಾನದ ಹೊಣೆ ನ್ಯಾಯಾಂಗದ್ದಾಗಿದ್ದು, ಈ ನಿಟ್ಟಿನಲ್ಲಿ ನ್ಯಾಯಾಂಗವು ಕಾರ್ಯೋನ್ಮುಖವಾಗಿದೆ. ಶೋಷಣೆಗೊಳಗಾದವರ ಹಕ್ಕುಗಳ ಸಂರಕ್ಷಣೆ ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಗತ್ಯ ಎಂದರು. ಪ್ರತಿಯೋರ್ವರ ಅಂತರ್ಗತ ಭಾವನೆಗಳನ್ನು ಗೌರವಿಸಿದಾಗ; ತನ್ನಂತೆ ಪರರ ಬಗೆದೊಡೆ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ಹುನಗುಂದ ಹೇಳಿದರು.

ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರ ಅಧ್ಯಕ್ಷ ಶಿವಶಂಕರ ಬಿ. ಅಮರಣ್ಣನವರ್,ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಸಭೆಯನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಸಿ‌ಇ‌ಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಉಡುಪಿ ವಕೀಲರ ಸಂಘ ಅಧ್ಯಕ್ಷ ದಯಾನಂದ ಕೆ. ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ ಸ್ವಾಗತಿಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ ವಂದಿಸಿದರು. ಬೋರ್ಡ್ ಹೈಸ್ಕೂಲ್ ಉಪನ್ಯಾಸಕಿ ಸುಮಾ ಕಾರ್ಯಕ್ರಮ ನಿರೂಪಿಸಿದರು

Write A Comment