ಕನ್ನಡ ವಾರ್ತೆಗಳು

ಮಹಿಳೆಯ ಸಂಶಯಾಸ್ಪದ ಸಾವು: ಮಾದಕ ವ್ಯಸನಿ ಪತಿಯ ಬಂಧನ

Pinterest LinkedIn Tumblr

konaje_lady_harsment

 (updated news )ಕೊಣಾಜೆ, ನ.28: ಮಾದಕ ವ್ಯಸನಿ ಪತಿಯ ಹಿಂಸೆ ತಾಳಲಾರದೆ ಪತ್ನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಡಿಪು,ಕೈರಂಗಳ ಗ್ರಾಮದ, ದರ್ಖಾಸ್ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಸಾವನ್ನಪ್ಪಿರುವ ಗೃಹಿಣಿ ಮುಡಿಪು ಸಮೀಪದ ದರ್ಖಾಸ್ ಎಂಬಲ್ಲಿಯ ತೌಸಿಯಾ ಜುಮಾ ಮಸೀದಿಯ ಬಳಿಯ ಗೌಸಿಯಾ ಕಾಂಪೌಡ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸಾಜಿದಾ (21)ಎನ್ನಲಾಗಿದೆ. ಈಕೆ ಹೂಹಾಕುವ ಕಲ್ಲು ಬಳಿಯ ಪುರುಷಕೋಡಿ ನಿವಾಸಿ ಅಹ್ಮದ್ ಎಂಬವರ ಪುತ್ರಿ.

ಕಳೆದ ಆರು ತಿಂಗಳುಗಳಿಂದ ಮೃತ ಸಾಜಿದಾ ತನ್ನ ಪತಿ ರಂಗಿಪೇಟೆ ಜುಮಾದಿಗುಡ್ಡೆಯ ಸಿದ್ದೀಕ್ ಎಂಬವರ ಪುತ್ರ ಅಝರುದ್ದೀನ್ (27) ಮತ್ತು ಮಕ್ಕಳಾದ ಮುಹಮ್ಮದ್ ಹಫೀಝ್, ಅನಸ್‌ರೊಂದಿಗೆ ಮುಡಿಪುನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತಿಯು ಕಳೆದ ಕೆಲವು ಸಮಯಗಳಿಂದ ಮಾದಕ ವ್ಯಸನಿಯಾಗಿದ್ದ ಎಂದು ಆರೋಪಿಸಲಾಗಿದೆ.

ಅಝರುದ್ದೀನ್ ಈ ಹಿಂದೆ ಮುಡಿಪುನಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ.ಕಳೆದ ಕೆಲವು ತಿಂಗಳಿಂದ ಕೆಲಸಕ್ಕೂ ಹೋಗದೆ ದಿನನಿತ್ಯ ಪತ್ನಿಗೆ ಮಾನಸಿಕ ಹಿಂಸೆಯೊಂದಿಗೆ ದೈಹಿಕ ಹಲ್ಲೆಯನ್ನೂ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಗುರುವಾರ ರಾತ್ರಿಯೂ ಈತ ಪತ್ನಿಗೆ ಹಿಂಸೆ ನೀಡಿದ್ದ ಎನ್ನಲಾಗಿದೆ.

ಶುಕ್ರವಾರ ಬೆಳಗ್ಗೆ 10:30ರ ವೇಳೆಗೆ ಸಾಜಿದಾ ತನ್ನ ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ತಾಯಿ ಮನೆಗೆ ಮಕ್ಕಳೊಂದಿಗೆ ತೆರಳಿ ತಾಯಿಯ ಬಳಿ ಗಂಡ ನಿತ್ಯ ನೀಡುತ್ತಿದ್ದ ಹಿಂಸೆಯ ಬಗ್ಗೆ ಹೇಳಿದ್ದಾರೆನ್ನಲಾಗಿದೆ. ಬಳಿಕ ತಾಯಿ ಮಗಳನ್ನು ಸಮಾಧಾನ ಪಡಿಸಿದ್ದರು. ಅಲ್ಲಿಂದ ಸಾಜಿದಾ ಗಂಡನ ಮನೆಗೆ ತೆರಳಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಆಕೆಯ ಪತಿ ಅಝರುದ್ದೀನ್ ಸಾಜಿದಾ ತಾಯಿಗೆ ಕರೆ ಮಾಡಿ ನಿಮ್ಮ ಮಗಳು ನೇಣು ಬಿಗಿದು ಆತ್ಮಹತ್ಯೆಗೈಯಲು ಪ್ರಯತ್ನಿಸಿದ್ದು, ತಾನು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದಾನೆ ಎಂದು ಹೇಳಲಾಗಿದೆ.

ಮೃತ ಷಾಜಿದಳಿಗೆ ಮಹಮ್ಮದ್ ಹಫೀಝ್ (3) ಅನಾಸ್ (1) ಎಂಬ ಇಬ್ಬರು ಮಕ್ಕಳಿದ್ದಾರೆ.

ಕೂಡಲೇ ಸಾಜಿದಾ ಪೋಷಕರು ದೇರಳಕಟ್ಟೆಯ ಆಸ್ಪತ್ರೆಗೆ ತೆರಳಿದಾಗ ಸಾಜಿದಾ ಸಾವನ್ನಪ್ಪಿದ್ದರು.

ಕೊಣಾಜೆ ಠಾಣಾ ಪೊಲೀಸರು ಆರೋಪಿ ಅಝರ್‌ನನ್ನು ಬಂದಿಸಿ ಸೆಕ್ಷನ್ 306 ಅನ್ವಯ ಆತ್ಮ ಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.

Write A Comment