ಕನ್ನಡ ವಾರ್ತೆಗಳು

ಎಸ್‌ಕೆ ಗೋಲ್ಡ್‌ ಸ್ಮಿತ್ ಸೊಸೈಟಿ ಕಳವು ಪ್ರಕರಣ : ಗ್ರಾಹಕರಲ್ಲಿ ಆತಂಕ – ಸಂಶಯ..?

Pinterest LinkedIn Tumblr

kinnigoli_bank_robry

ಮಂಗಳೂರು,ನ.24 : ಕಿನ್ನಿಗೋಳಿಯ ಎಸ್‌ಕೆ ಗೋಲ್ಡ್‌ ಸ್ಮಿತ್ ಇಂಡಸ್ಟ್ರಿಯಲ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಬ್ಯಾಂಕಿನಲ್ಲಿ ಶುಕ್ರವಾರ ನಡೆದ ಕಳವು ಪ್ರಕರಣದಿಂದ ಆತಂಕಗೊಂಡಿರುವ ಗ್ರಾಹಕರು ಬ್ಯಾಂಕಿಗೆ ಮುಗಿ ಬೀಳುತ್ತಿದ್ದಾರೆ. ಇದರಿಂದ ಬ್ಯಾಂಕಿನಲ್ಲಿ ನೂಕು ನುಗ್ಗಲು ಹೆಚ್ಚಾಗಿದೆ.

ಅಡವಿಟ್ಟಿದ್ದ ಚಿನ್ನದ ಬಗ್ಗೆ ಮಾಹಿತಿ ಪಡೆಯಲು ಸೋಮವಾರ ಬೆಳಗ್ಗಿನಿಂದಲೇ ಅನೇಕ ಮಹಿಳೆಯರು ಬ್ಯಾಂಕಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಬ್ಯಾಂಕಿನ ಸಿಬ್ಬಂದಿಗಳು ಆದಷ್ಟು ಗ್ರಾಹಕರನ್ನು ಮೂರ್ನಾಲ್ಕು ದಿನ ಬಿಟ್ಟು ಬನ್ನಿ, ಗಾಬರಿ ಪಡಬೇಡಿ ಎಂದು ಸಾಗ ಹಾಕಿದ್ದಾರೆ. ಐಕಳ ಪಟ್ಟೆ ಮೂಲದ ಆಭರಣ ಕಳಕೊಂಡ ಮಹಿಳೆಯೊಬ್ಬರು ಆಭರಣಕ್ಕೆ ಜೀವವಿಮೆ ಮಾಡಿಸಿದ್ದಾರೆ. ನಾಲ್ಕು ದಿನ ಬಿಟ್ಟು ಬನ್ನಿ ಕೇವಲ ಒಂದು ತಿಜೋರಿ ಮಾತ್ರ ಕಳ್ಳತನವಾಗಿದೆ. ಆಭರಣ ಕಳವಾಗಿದ್ದರೆ ನಿಮಗೆ ಹಣ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಆ ನಂಬಿಕೆಯಿಂದಲೇ ಹಿಂತಿರುಗುತ್ತಿದ್ದೇವೆ ಎಂದು ಕಣ್ಣೀರಿಡುತ್ತಲೇ ಗ್ರಾಹಕರು ಹಿಂತಿರುಗುತ್ತಿದ್ದಾರೆ.

kinnigoli_bank_robry_2

ಬ್ಯಾಂಕಿನ ದ್ವಾರದಲ್ಲಿ, ಹಾಗೂ ಬ್ಯಾಂಕಿನ ಒಳಗಡೆ ಪೋಸ್ಟರ್ ಒಂದನ್ನು ಬ್ಯಾಂಕಿನ ಆಡಳಿತ ಮಂಡಳಿ ಅಂಟಿಸಿದ್ದು ಕಳವಾದದನ್ನು ಆಕಸ್ಮಿಕ ಘಟನೆ ಎಂದು ಬಿಂಬಿಸಲಾಗಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಉತ್ತಮ ಸ್ಥಿತಿಯಲ್ಲಿದ್ದ ಬ್ಯಾಂಕಿನ ಆಡಳಿತ ಮಂಡಳಿಗೆ ಬ್ಯಾಂಕಿಗೆ ಒಂದು ಕಾವಲುಗಾರರನ್ನು ನೇಮಿಸಲು ಯಾಕೆ ಆಗಿಲ್ಲ? ಎಂಬುದು ಇಲ್ಲಿನ ಜನರ ಪ್ರಶ್ನೆಯಾಗಿದೆ. ಕಳವಿನಲ್ಲಿ ಸಿಬ್ಬಂದಿ ಕೂಡ ಭಾಗಿಯಾಗಿರುವರೇ ಎಂಬ ಅನುಮಾನ ಕೂಡ ಇಲ್ಲಿ ಮೂಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ 20 ವರ್ಷಗಳ ಹಿಂದೆ ಮೂಲ್ಕಿ ಪಂಚಮಹಲ್ ರಸ್ತೆಯಲ್ಲಿ ಸೊಸೈಟಿಗೆ ಕನ್ನ ಹಾಕಿದ್ದ ಕಳ್ಳರು ಕೋಟಿಗಟ್ಟಲೆ ಕಳ್ಳತನ ಮಾಡಲಾಗಿತ್ತು. ಆದರೆ ಪ್ರಕರಣ ರಾಜಕೀಯ ಲಾಬಿಯಿಂದ ಮುಚ್ಚಿಹೋಗಿತ್ತು ಎಂದು ನೆನಪಿಸಿರುವ ಸ್ಥಳೀಯರು ಆಗ ಅಲ್ಲಿ ಇದ್ದ ಸಿಬ್ಬಂದಿ ಈಗ ಇದೇ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಸಂಶಯಾತ್ಮಕವಾಗಿಯೇ ಆರೋಪಿಸಿದ್ದಾರೆ.

ಕಳ್ಳತನದ ಬಗ್ಗೆ ಪರಿಶೀಲಿಸಿದ ಪೋಲೀಸರು ಸುಮಾರು 4ಕೋಟಿ 63ಲಕ್ಷ ನಗ ನಗದು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಿಸಿದ್ದರು. ಆದರೆ ಪೋಲೀಸರ ಪ್ರಕಾರ ಇನ್ನೂ ಹೆಚ್ಚು ಕಳವಾದ ಸಾಧ್ಯತೆಗಳಿವೆ. ಬ್ಯಾಂಕಿನಲ್ಲಿ ಕಂಪ್ಯೂಟರ್ ವ್ಯವಸ್ಥೆ ಇಲ್ಲದಿರುವುದು ಹಾಗೂ ಪುಸ್ತಕ ನೋಡಿ ಲೆಕ್ಕ ಹೇಳಬೇಕಾದ ಪರಿಸ್ಥಿತಿ ಉಂಟಾಗಿರುವುದರಿಂದ ಗ್ರಾಹಕರನ್ನು ಇನ್ನಷ್ಟು ಆತಂಕಕೀಡು ಮಾಡಿದೆ.

ಘಟನೆ ವಿವರ :

ಶುಕ್ರವಾರ ತಡರಾತ್ರಿ ಕಿನ್ನಿಗೋಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್‌ಕೆ ಗೋಲ್ಡ್ ಸ್ಮಿತ್ ಸಹಕಾರಿ ಬ್ಯಾಂಕ್‌ಗೆ ನುಗ್ಗಿರುವ ಕಳ್ಳರು ಸುಮಾರು 5 ಕೋಟಿ ಮೌಲ್ಯದ ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಬ್ಯಾಂಕಿನ ಮುಂಬಾಗಿಲ ಶಟರ್ ಮುರಿದು ಒಳನುಗ್ಗಿರುವ ಕಳ್ಳರು, ಸೈರನ್ ಸಂಪರ್ಕ ಸ್ಥಗಿತಗೊಳಿಸಿ ಹಣವನ್ನು ದೋಚಿದ್ದಾರೆ. ಮಾತ್ರವಲ್ಲದೇ ಪರಾರಿಯಾಗುವ ಸಂದರ್ಭ ಬ್ಯಾಂಕ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯ ಕ್ಯಾಮರಾಗಳನ್ನು ಹಾಗೂ ಅದರ ಹಾರ್ಡ್ ಡಿಸ್ಕ್ ಅನ್ನು ತೆಗೆದುಕೊಂಡು ಹೋಗಿದ್ದಾರೆ.

ಬ್ಯಾಂಕ್‌ನ ಲಾಕರ್‌ನಲ್ಲಿದ್ದ ಸುಮಾರು 25 ಲಕ್ಷ ನಗದು ಸೇರಿದಂತೆ 5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಲಾಗಿದೆ ಎನ್ನಲಾಗಿದ್ದು, ಮುಲ್ಕಿ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ, ಪರಿಶೀಲನೆಯಲ್ಲಿ ತೊಡಗಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಬ್ಯಾಂಕ್‌ನ ಅಕ್ಕಪಕ್ಕದ ಕಟ್ಟಡ ಮತ್ತು ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Write A Comment