ಕನ್ನಡ ವಾರ್ತೆಗಳು

ಪುತ್ತೂರು ಕಾರಂತ ಬಾಲವನ: ಕಟ್ಟಡಗಳ ಸಂರಕ್ಷಣೆ – ತ್ವರಿತಗೊಳಿಸಲು ಕಾರ್ಯದರ್ಶಿಗಳ ಸೂಚನೆ.

Pinterest LinkedIn Tumblr

karanath_musem_photo

ಮಂಗಳೂರು, ನ.05: ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ ಸರಕಾರದಿಂದ ನೇಮಕ ಗೊಂಡಿರುವ ಉನ್ನತ ಮಟ್ಟದ ಸಮಿತಿ ಸಭೆಯು ಬುಧವಾರ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಗೌಡ, ಪುತ್ತೂರು ಡಾ. ಶಿವರಾಮ ಕಾರಂತ ಬಾಲವನ ಅಭಿವೃದ್ಧಿಗೆ 2015-16 ರ ರಾಜ್ಯ ಬಜೆಟ್‌ನಲ್ಲಿ ಒಂದು ಕೋಟಿ ರೂ. ಹಣ ಘೋಷಣೆಯಾಗಿ ಬಿಡುಗಡೆಯಾಗಿದೆ. ಈ ಹಿನ್ನೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿ ರಚಿಸಲಾಗಿದೆ ಎಂದರು.

ಪುತ್ತೂರು ಕಾರಂತ ಬಾಲವನದಲ್ಲಿ ಅಪಾಯದ ಸ್ಥಿತಿಯಲ್ಲಿರುವ ಕಟ್ಟಡವನ್ನು ಪುನಶ್ಚೇತನ ಮಾಡಲು ಈಗಾಗಲೇ ರೂ. 29.50 ಲಕ್ಷ ಯೋಜನೆಗೆ ಆಡಳಿತ ಮಂಜೂರಾತಿ ನೀಡಲಾಗಿದೆ. ಪಾರಂಪರಿಕ ಕಟ್ಟಡಗಳ ಪುನಶ್ಚೇತನದ ಅನುಭವ ಇರುವ ಇಂಟ್ಯಾಕ್ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದೆ.

ಬಾಲವನದಲ್ಲಿರುವ ಕಾರಂತರ ಕಟ್ಟಡಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುವುದು. 2ನೇ ಹಂತದಲ್ಲಿ ಕಲಾಗ್ಯಾಲರಿ ನವೀಕರಣ ಮತ್ತಿತರ ಕಾಮಗಾರಿಗಳನ್ನು ನಿರ್ವಹಿಸಲಾಗುವುದು ಎಂದು ಅವರು ಹೇಳಿದರು.
ಬಾಲವನದಲ್ಲಿ ಸಾಂಸ್ಕೃತಿಕ ಹಾಗೂ ಮಕ್ಕಳಿಗೆ ಹೊರತಾದ ಚಟುವಟಿಕೆಗಳನ್ನು ಆದಷ್ಟು ನಿಯಂತ್ರಿಸುವಂತೆ ಚನ್ನಪ್ಪ ಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ ರೈ ಮಾತನಾಡಿ, ಪುತ್ತೂರು ಕಾರಂತ ಬಾಲವನ ಸಾಂಸ್ಕೃತಿಕ ಕೇಂದ್ರವಾಗಬೇಕು. ಧ್ವನಿ-ದೃಶ್ಯ ಕಾರ್ಯಕ್ರಮ, ವಾರಾಂತ್ಯದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಬಾಲವನದ ಚಟುವಟಿಕೆಗಳು ಮತ್ತು ಕಾಮಗಾರಿಗಳು ಇಲ್ಲಿನ ಪಾರಂಪರಿಕತಗೆ ಧಕ್ಕೆಯಾಗಬಾರದು. ಸರಕಾರದಿಂದ ದೊರೆಯುವ ಅನುದಾನದಲ್ಲಿ ನಡೆಯುವ ಕೆಲಸಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಮಾತನಾಡಿ, ಪುತ್ತೂರು ಬಾಲವನ ಅಬೀವೃದ್ಧಿಗೆ ಯೋಜನೆ ರೂಪಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಪುತ್ತೂರು ಬಾಲವನದಲ್ಲಿಯೇ ಇಂದು ಸಭೆ ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸತೀಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಬಿ.ಜೆ. ಸುವರ್ಣ, ಕಾರಂತರ ಮಕ್ಕಳಾದ ಕ್ಷಮಾ ರಾವ್, ರೇಖಾ ರಾವ್ ಮತ್ತು ಉಪಸ್ಥಿತರಿದ್ದರು.

ಸಭೆಯ ನಂತರ ಸರಕಾರದ ಕಾರ್ಯದರ್ಶಿಗಳು ಬಾಲವನದ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

Write A Comment