ಕನ್ನಡ ವಾರ್ತೆಗಳು

ಮೂಡಬಿದ್ರೆ : ಕೊಲೆ ಪ್ರಕರಣ ಖಂಡಿಸಿ ಸ್ವಯಂಪ್ರೇರಿತ ಬಂದ್‌ – ಸ್ಥಳದಲ್ಲಿ ಬಿಗುವಿನ ವಾತಾವರಣ, 144ನೇ ಸೆಕ್ಷನ್ ಜಾರಿ

Pinterest LinkedIn Tumblr

Mudabidre_Lati_charg_2

ಮೂಡಬಿದ್ರೆ ,ಅ.10 : ಹೂವಿನ ವ್ಯಾಪಾರಿ, ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರನ್ನು ದುಷ್ಕರ್ಮಿಗಳು ಶುಕ್ರವಾರ ಬೆಳಿಗ್ಗೆ ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಡೆದ ಬಂದ್ ಇಂದೂ ಕೂಡ ಮುಂದುವರೆದಿದೆ. ಪ್ರಕರಣವನ್ನು ಖಂಡಿಸಿ ಮೂಡುಬಿದಿರೆಯಲ್ಲಿ ಬಹುತೇಕರು ಸ್ವಯಂಪ್ರೇರಿತ ಬಂದ್‌ನಲ್ಲಿ ಪಾಲ್ಗೊಂಡಿದ್ದಾರೆ.

ನಿನ್ನೆ ಸಂಜೆ ನಡೆದ ಲಾಠಿಚಾರ್ಜ್ ನಂತರ ಮೂಡುಬಿದಿರೆಯಲ್ಲಿ ಪರಸ್ಥಿತಿ ಶಾಂತವಾಗಿದ್ದು, ಕೆಲವೆಡೆ ಎಂದಿನಂತೆ ಇಂದು ಬೆಳಗ್ಗೆ ವ್ಯಾಪಾರ ವ್ಯವಹಾರ ಆರಂಭಿಸುವ ಉತ್ಸಾಹದಲ್ಲಿ ವರ್ತಕರು ಅಂಗಡಿ ಬಾಗಿಲು ತೆರೆದಿದ್ದರು. ಆದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರೆನ್ನಲಾದ ಕೆಲವರು ಬಲವಂತವಾಗಿ ಅಂಗಡಿ, ಹೊಟೇಲುಗಳನ್ನು ತೆರೆಯಲು ಬಿಡದೇ, ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುವ ಮೂಲಕ ಬಂದ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತಾಲೂಕಿನ ಅಲಂಗಾರು, ಕೋಟೆಬಾಗಿಲು, ಶಿರ್ತಾಡಿ, ಕೊಣಾಜೆ, ನಾರಾವಿ, ಪೆರಾಡಿ, ಮಕ್ಕಿ, ಮಾಂಟ್ರಾಡಿ, ಹಂಡೇಲು, ತೋಡಾರುಗಳಲ್ಲೂ ಕೂಡಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಶುಕ್ರವಾರ ಬೆಳಿಗ್ಗೆ 7.20ರ ಸುಮಾರಿಗೆ ಕೊಲೆ ನಡೆದಿದ್ದು, ಆ ಬಳಿಕ ಮೂಡುಬಿದರೆಯಲ್ಲಿ ಬಂದ್ ಆಚರಿಸಲಾಗಿತ್ತು. ಶನಿವಾರ ಬಂದ್ ಬಗ್ಗೆ ಜನರಲ್ಲಿ ಶುಕ್ರವಾರವೇ ಗೊಂದಲಗಳಿದ್ದವು. ಶನಿವಾರ ಮುಂಜಾನೆಯಿಂದಲೇ ಬಸ್ ವಾಹನ ಸಂಚಾರ ವಿರಳವಾಗಿದ್ದವು. ಬಳಿಕ ಯುವಕರ ಕೆಲವು ತಂಡಗಳು, ಶಾಲಾ ಕಾಲೇಜು ವಾಹನಗಳನ್ನು ತಡೆದಿದ್ದು, ಕೆಲವು ಅಂಗಡಿಗಳನ್ನು ಮುಚ್ಚಿದ್ದರು. ಬಳಿಕ ಮೂಡುಬಿದಿರೆ ಪೇಟೆ ಸಂಪೂರ್ಣ ಬಂದಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲೂ ಬಂದ್ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, 144ನೇ ಸೆಕ್ಷನ್ ಜಾರಿಯಲ್ಲಿದೆ.

ಮೂಡುಬಿದಿರೆ ಟೌನ್ ಮಸೀದಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ವಾಟ್ಸಾಪ್ ಸಂದೇಶಗಳು ಜನರಲ್ಲಿ ಆತಂಕ ಮೂಡಿಸುತ್ತಿದ್ದು, ಅನಿರ್ಧಿಷ್ಠಾವಧಿಗೆ ವಾಟ್ಸಾಪನ್ನು ತಡೆಹಿಡಿಯುವ ಕಾರ್ಯ ಪೊಲೀಸ್ ಇಲಾಖೆಯಿಂದಾಗಬೇಕಿದೆ. ಔಷಧಿ ವ್ಯಾಪಾರ ಹಾಗೂ ವೈದ್ಯಕೀಯ ಸೇವೆ ಎಲ್ಲೆಡೆ ಲಭ್ಯವಾಗುತ್ತಿದ್ದು, ಬಂದ್ ಇಲ್ಲವೆಂದು ಭಾವಿಸಿ ಬಂದ ನಾಗರಿಕರು, ವಿದ್ಯಾರ್ಥಿಗಳು ಮತ್ತೆ ಅಲ್ಲಲ್ಲಿ ವಾಹನಗಳಿಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಇದಲ್ಲದೇ ಮೂಡುಬಿದಿರೆ ಪೇಟೆಯ ಹೊರಗೂ ಬಂದ್‍ನ ಬಿಸಿ ಇನ್ನೂ ಮುಂದುವರಿದೆ.

ಬಂದ್‍ಗೆ ಕರೆ ನೀಡಿಲ್ಲ – ವಿ.ಎಚ್.ಪಿ ಸ್ಪಷ್ಟಣೆ:

ಪ್ರಶಾಂತ್ ಪೂಜಾರಿ ಕೊಲೆ ಹಿನ್ನಲೆಯಲ್ಲಿ ಶುಕ್ರವಾರ ಹಾಗೂ ಶನಿವಾರ ಮೂಡುಬಿದಿರೆಯಲ್ಲಿ ಬಂದ್ ಆಚರಿಸಲಾಗಿದ್ದು, ನಮ್ಮ ಸಂಘಟನೆಯಿಂದ ಅಥವಾ ಪಕ್ಷದಿಂದ ಯಾವುದೇ ರೀತಿಗೆ ಬಂದ್‍ಗೆ ಕರೆ ನೀಡಿಲ್ಲ. ಘಟನೆಯನ್ನು ಖಂಡಿಸಿ ಮೂಡುಬಿದಿರೆ ಜನತೆ ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿದ್ದಾರೆ. ಪ್ರಶಾಂತ್ ಶವದ ಸಾರ್ವಜನಿಕ ದರ್ಶನ ಬಳಿಕ ನಡೆದ ಗೊಂದಲ ಹಾಗೂ ಹಾನಿಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಸ್ಪಷ್ಟಣೆ ನೀಡಿದ್ದಾರೆ ಎನ್ನಲಾಗಿದೆ.

Write A Comment