* ಆಟೋ ರಿಕ್ಷಾ ಗುರುತಿಗೆ ಕುಂದಾಪುರ ಟ್ರಾಫಿಕ್ ಪೊಲೀಸರ ಯೋಜನೆ
* ಪೊಲೀಸರ ನೂತನ ಕ್ರಮಕ್ಕೆ ರಿಕ್ಷಾ ಚಾಲಕರ ಮೆಚ್ಚುಗೆ
ಕುಂದಾಪುರ: ಆಟೋ ರಿಕ್ಷಾಗಳಿಗೆ ಸಂಬಂಧಿಸಿದಂತೆ ಯಾವುದೇ ಅಪಘಾತ-ಅಪರಾಧಗಳಾದ ಸಂದರ್ಭದಲ್ಲಿ ಹಾಗೂ ಯಾವುದೇ ಸಮಸ್ಯೆಗಳಾದ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಅದೇ ಆಟೋ ರಿಕ್ಷಾವನ್ನು ಗುರುತಿಸುವ ಸಲುವಾಗಿ ಕುಂದಾಪುರ ಟ್ರಾಫಿಕ್ ಪೊಲೀಸರು ಹೊಸ ಯೋಜನೆಯೊಂದನ್ನು ಮಾಡಿದ್ದಾರೆ.
ರಿಕ್ಷಾದ ರಿಜಿಸ್ಟ್ರೇಷನ್ ನಂಬರ್ ಗುರುತಿಸುವುದು ಎಲ್ಲರಿಗೂ ಕಷ್ಟಸಾಧ್ಯ. ಹೀಗಾಗಿಯೇ ತಾಲೂಕಿನ ಕುಂದಾಪುರ ಟ್ರಾಫಿಕ್ ಪೊಲೀಸರು ತಮ್ಮ ವ್ಯಾಪ್ತಿಯ ಎಲ್ಲಾ ಅಟೋ ರಿಕ್ಷಾಗಳಿಗೆ ಒಂದೊಂದು ನಂಬರ್ ನೀಡಿದ್ದಾರೆ. ಕುಂದಾಪುರ ನಗರ ಹಾಗೂ ಕುಂದಾಪುರದ ಗ್ರಾಮೀಣ ಭಾಗ ಎಂದು ಎರಡು ಪ್ರತ್ಯೇಕ ವಿಭಾಗಗಳಲ್ಲಿ ಈ ನಂಬರ್ ಇರುವ ಸ್ಟಿಕ್ಕರ್ ನೀಡುತ್ತಿದ್ದು ಇದನ್ನು ಆಟೋ ರಿಕ್ಷಾಗಳಿಗೆ ಹಚ್ಚಲಾಗುತ್ತದೆ. ನಗರ ಹಾಗೂ ತಾಲೂಕಿನ 30 ಗ್ರಾಮಗಳ ಆಟೋ ಸ್ಟಾಂದಿನ ಆಟೊ ರಿಕ್ಷಾಗಳು ಈ ಕುಂದಾಪುರ ಟ್ರಾಫಿಕ್ ಪೊಲೀಸರು ನೀಡುವ ಸ್ಟಿಕ್ಕರ್ ಹಚ್ಚಿಕೊಳ್ಳಬೇಕು.
ಕುಂದಾಪುರ ನಗರದ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 14 ಆಟೋ ರಿಕ್ಷಾ ಸ್ಟಾಂಡುಗಳಿದ್ದು ಅಲ್ಲಿನ ಎಲ್ಲಾ ರಿಕ್ಷಾಗಳಿಗೂ ಬಿಳಿ ಸ್ಟಿಕ್ಕರ್ ಹಾಗೂ ಕೆಂಪಕ್ಷರದಲ್ಲಿ ನಂಬರ್ ಬರೆಯಲಾದ ರೇಡಿಯಂವುಳ್ಳ ಸ್ಟಿಕ್ಕರ್ ನೀಡಲಾಗುತ್ತದೆ. ಗ್ರಾಮೀಣ ಭಾಗದ ರಿಕ್ಷಾಗಳಿಗೆ ನೀಲಿಬಣ್ಣದ ಸ್ಟಿಕರ್ ನೀಡಲಾಗುತ್ತಿದೆ. ಎರಡು ಸ್ಟಿಕ್ಕರಿನಲ್ಲಿ ಕನ್ನಡದಲ್ಲಿ ‘ಕೆ.ಎನ್.ಡಿ.’ ಎಂದು ಬರೆಯಲಾಗಿದ್ದು ಕುಂದಾಪುರದ ಟ್ರಾಫಿಕ್ ಠಾಣೆ ಸರಹದ್ದಿಗೆ ಒಳಪಡುವ ರಿಕ್ಷಾ ಎಂದು ಗುರುತಿಸಲು ಸುಲಭವಾಗುವಂತಿದೆ. ಒಟ್ಟು ಠಾಣಾ ವ್ಯಾಪ್ತಿಯಲ್ಲಿ 450 ಆಟೋ ರಿಕ್ಷಾಗಳಿದ್ದು ಅವೆಲ್ಲದಕ್ಕೂ ಈ ಸ್ಟಿಕ್ಕರ್ ನೀಡಲಾಗುತ್ತದೆ.
ಒಂದರಿಂದ ಆರಂಭಗೊಂಡು 450 ರಿಕ್ಷಾಗಳಿಗೆ ನಂಬರ್ ನೀಡುತ್ತಿದ್ದು ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ. ಯಾವುದೇ ಸಮಸ್ಯೆಗಳಾದಾಗ ರಿಕ್ಷಾದ ಎದುರು ಭಾಗದಲ್ಲಿರುವ ಸ್ಟಿಕರ್ ಬಣ್ಣ ಹಾಗೂ ನಂಬರ್ ಹೇಳಿದ್ರೇ ಸಾಕು ಆ ರಿಕ್ಷಾ ಮಾಲೀಕ ಅಥವಾ ಚಾಲಕನ ಸಂಪೂರ್ಣ ವಿವರ ಪೊಲೀಸರ್ ಬಳಿ ಇರುತ್ತೆ. ಇದರಿಂದ ಆ ರಿಕ್ಷಾವನ್ನು ಸುಲಭವಾಗಿ ಪತ್ತೆಹಚ್ಚಿ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿರಪರಾಧಿ ಆಟೊ ಚಾಲಕರು ಠಾಣೆಗೆ ಅಲೆಯುವ ಸಮಸ್ಯೆಯೂ ಇರೋದಿಲ್ಲ ಅಂತಾರೇ ಪೊಲೀಸರು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಸಂಚಾರಿ ಠಾಣೆಯ ಎಸ್ಸೈ ದೇವೇಂದ್ರ ಉಪಸ್ಥಿತಿಯಲ್ಲಿ ನಗರ ವ್ಯಾಪ್ತಿಯ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯ ನಡೆದಿದೆ.
ಇನ್ನು ಸಮಸ್ಯೆಗಳಾದಾಗ ಅಮಾಯಕ ರಿಕ್ಷಾ ಚಾಲಕರ ಮೇಲೆ ಸಂಶಯಪಡುವ ವ್ಯವಸ್ಥೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಂದಾಪುರ ಪೊಲೀಸರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ- ಯೋಗೀಶ್ ಕುಂಭಾಸಿ









