ಕುಂದಾಪುರ: ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರದ ಬಗ್ಗೆ ಜನ ರೋಸಿ ಹೋಗಿದ್ದಾರೆ, ಅಭಿವೃದ್ದಿ ಕಾರ್ಯಗಳು ಕ್ಷೀಣವಾಗಿದೆ. ರೈತರ ಹಾಗೂ ಬಡವರ ಸಂಕಷ್ಟಗಳನ್ನು ಕೇಳುಗರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ದ ಆರೋಪಗಳ ಪಟ್ಟಿಯನ್ನೆ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತುಘಲಕ್ ದರ್ಬಾರ್ ನಡೆಸುತ್ತಿರುವ ಈ ಅನಿಷ್ಠ ಸರ್ಕಾರದ ವಿರುದ್ದ ಜನಾಂದೋಲನವನ್ನು ನಡೆಸುವುದೆ ಏಕೈಕ ಮಾರ್ಗ ಎಂದರು.
ಕುಂದಾಪುರ ಕ್ಷೇತ್ರ ಬಿಜೆಪಿ ಸಮಿತಿ ನೇತ್ರತ್ವದಲ್ಲಿ ಕೋಟೇಶ್ವರ ಕುರುಕ್ಷೇತ್ರ ಮೈದಾನದಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿಯ ‘ರೈತ ಚೈತನ್ಯ ಯಾತ್ರೆ’ ಕಾರ್ಯಕ್ರಮದ ಸಭೆಯಲ್ಲಿ ಅವರು ಮಾತನಾಡಿದರು.
ಗಾಂಧಿ ಹಾಗೂ ವಲ್ಲಭಬಾಯಿ ಪಟೇಲ್‌ರು ಹುಟ್ಟಿದ ನಾಡಿನಲ್ಲಿ ಹುಟ್ಟಿ ವಿಶ್ವ ಮಾನ್ಯರಾದ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ. ಮೋದಿಯವರ ಬಗ್ಗೆ ಅವಹೇಳನೆಯಾಗಿ ಮಾತನಾಡಿದ ಅವರು ದೇಶದ ಜನರ ಕ್ಷಮೆ ಕೇಳಬೇಕು. ಬಿಜೆಪಿ ಆಡಳಿತದ ಅವಧಿಯಲ್ಲಿ ಸುವರ್ಣ ಗ್ರಾಮ ಹಾಗೂ ಇತರ ಯೋಜನೆಗಳ ಮೂಲಕ ಗ್ರಾಮ ಹಾಗೂ ಪಟ್ಟಣಗಳನ್ನು ಅಭಿವೃದ್ದಿಪಡಿಸುವ ಸಾಕಷ್ಟು ಕಾರ್ಯಕ್ರಮಗಳು ನಡೆದಿತ್ತು. ಇದನ್ನೆ ಮಾದರಿಯನ್ನಾಗಿರಿಸಿಕೊಂಡು ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಸರ್ಕಾರದ ಅನುದಾನದ ಜತೆಯಲ್ಲಿ ರಾಜ್ಯ ಸರ್ಕಾರ 1 ಕೋಟಿ ಅನುದಾನವನ್ನು ನೀಡಿದರೆ ಪಂಚಾಯಿತಿಗಳಲ್ಲಿ ನಿರೀಕ್ಷಿತ ಅಭಿವೃದ್ದಿ ಕಾಣಬಹುದು. 1.36 ಲಕ್ಷದ ಬಜೆಟ್ ನೀಡಿದ ಮುಖ್ಯಮಂತ್ರಿಗಳು ಇದರ ಸದುಪಯೋಗ ಎಷ್ಟು ಆಗಿದೆ ಎನ್ನುವುದನ್ನು ರಾಜ್ಯದ ಜನತೆಯು ಮುಂದಿಡಲಿ. 136 ತಾಲ್ಲೂಕುಗಳಲ್ಲಿ ಬರ ಇರುವಾಗ ಕೇವಲ ಸಾಲದ ಬಡ್ಡಿ ಮನ್ನಾ ಮಾಡಿದರೆ ರೈತ ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬಡ್ಡಿ ಮನ್ನಾಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಮರಳು ಮಾಫಿಯ ಬಗ್ಗೆ ಪ್ರಾಸ್ತಾಪ ಮಾಡಿದ ಬಿ.ಎಸ್.ವೈ, ಆಕ್ರಮ ದಂಧೆಗೆ ಕಾರಣವಾಗುತ್ತಿರುವ ಉಪ್ಪು ನೀರಿನ ಮರಳುಗಾರಿಕೆಯ ಬಗ್ಗೆ ವಿರೋಧ ಇರುವುದರಿಂದ ಕೂಡಲೇ ಸಿಹಿ ನೀರಿನ ಮರಳುಗಾರಿಕೆಗೆ ಕ್ರಮ ಕೈಗೊಳ್ಳಬೇಕು. ಆಕ್ರಮ ದಂಧೆಯ ಕಡಿವಾಣಕ್ಕೆ ಸ್ವಷ್ಟವಾದ ಮರಳು ನೀತಿ ಜಾರಿಗೆ ತರಬೇಕು. ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. 14 ನೇ ಹಣಕಾಸು ಆಯೋಗದ ತೀರ್ಮಾನದಿಂದ ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ ದೊರಕುವ 1.83566ಲಕ್ಷ ಕೋಟಿ ಹಣದ ಸದ್ವಿನಿಯೋಗದ ಕುರಿತು ಸರ್ಕಾರ ಎಚ್ಚರಿಕೆ ವಹಿಸಬೇಕು. ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ನಡೆದಿರುವ ಆಕ್ರಮಗಳ ಕುರಿತು ತನಿಖೆ ನಡೆಸಿ, ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಅರಣ್ಯ ಭೂಮಿ ಅತಿಕ್ರಮಣದದ ಸಮಸ್ಯೆ ಪರಿಹಾರಕ್ಕಾಗಿ ಕೂಡಲೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಒತ್ತಾಯಿಸಿದರು.
ಕಸ್ತೂರಿರಂಗನ್ ವರದಿಯ ಜಾರಿಯಿಂದ ರಾಜ್ಯದ 10 ಜಿಲ್ಲೆಗಳ 1573 ಗ್ರಾಮಗಳಿಗೆ ತೊಂದರೆಯಾಗುವುದರಿಂದ ಕೇರಳ ರಾಜ್ಯದ ಮಾದರಿಯಲ್ಲಿಯೇ ವರದಿಯನ್ನು ಸಿದ್ದಪಡಿಸಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿದ್ದರೂ, ಇನ್ನೂ ಪರಿಣಾಮಕಾರಿ ಕೆಲಸಗಳು ನಡೆದಿಲ್ಲ. ಅಡಕೆ ಬೆಳೆಗಾರರ ಸಂಕಷ್ಟವನ್ನು ನಿವಾರಣೆ ಮಾಡಲು ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಮದು ಹಾಗೂ ರಫ್ತು ನೀತಿಯನ್ನು ಪುನರ್ ಪರಿಶೀಲಿಸುವಂತೆ ಕೋರಲಾಗಿದೆ. ಎತ್ತಿನಹೊಳೆ ಯೋಜನೆಯ ಬಗ್ಗೆ ಗೊಂದಲವಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ. ಚರ್ಚೆಯ ಬಳಿಕ ಪಕ್ಷ ತನ್ನ ತೀರ್ಮಾನ ಪ್ರಕಟಿಸಲಿದೆ. ಕಳಸ ಬಂಡೂರಿ ಸಮಸ್ಯೆಯ ಕುರಿತು ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಕೇಂದ್ರದ ಮುಖಂಡರು ಸಿದ್ದವಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಸಮಸ್ಯೆಯ ಪರಿಹಾರಕ್ಕೆ ಸಕಾರಾತ್ಮಕ ಸ್ಪಂದನ ನೀಡಲಿ ಎಂದು ಅವರು ಸಲಹೆ ನೀಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಜೆ, ಮಾಜಿ ಸಚಿವರುಗಳಾದ ಬಿ.ರಾಮುಲು, ವಿಜಯಶಂಕರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್‌ಕುಮಾರ, ಮಾಜಿ ಶಾಸಕರುಗಳಾದ ರಘುಪತಿ ಭಟ್, ಸುನೀಲ್‌ಕುಮಾರ, ಲಾಲಾಜಿ ಮೆಂಡನ್, ಮೋನಪ್ಪ ಭಂಡಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೊಡ್ಗಿ, ಬೆಳ್ವೆ ವಸಂತ ಕುಮಾರ್ ಶೆಟ್ಟಿ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ರಾಜೇಶ ಕಾವೇರಿ, ಜಿ.ಪಂ. ಸದಸ್ಯ ಗಣಪತಿ ಶ್ರೀಯಾನ್, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ, ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ತಾ.ಪಂ. ಸದಸ್ಯ ಮಂಜು ಬಿಲ್ಲವ, ಪಕ್ಷದ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ವಿಜಯ ಶಂಕರ್, ಎ.ಆರ್. ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ ಕಾರ್ಣಿಕ್, ಕುಮಾರ ಸ್ವಾಮಿ, ಶ್ಯಾಮಲಾ ಕುಂದರ್, ಕಿಶೋರ್ ಕುಮಾರ್ ಕುಂದಾಪುರ, ರವೀಂದ್ರ ದೊಡ್ಮನೆ, ಸುಲೋಚನಾ ಭಟ್, ಗುರುರಾಜ್ ಉಪಸ್ಥಿತರಿದ್ದರು.
ರಾಜೇಶ ಕಾವೇರಿ ಸ್ವಾಗತಿಸಿದರು. ಕುತ್ಯಾರು ನವೀನ ಶೆಟ್ಟಿ ಹಾಗೂ ಮಾಲತಿ ಸತೀಶ ಕಾರ್ಯಕ್ರಮ ನಿರೂಪಿಸಿದರು, ಜಿ.ಪಂ. ಸದಸ್ಯ ಗಣಪತಿ ಶ್ರಿಯಾನ್ ವಂದಿಸಿದರು.
















