ಮಂಗಳೂರು,ಅ.2: ಭಾರತ ಸೇವಾದಳ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಶುಕ್ರವಾರ ನಗರದ ಪುರಭವನದ ಬಳಿಯ ಗಾಂಧಿ ಪಾರ್ಕ್ ನಲ್ಲಿ ಆಚರಿಸಿತು.ಕಾರ್ಯಕ್ರಮವನ್ನು ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.
ಬೆಳಿಗ್ಗೆ ಜ್ಯೋತಿ ಬಲ್ಮಠ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು., ನಂತರ ಜ್ಯೋತಿಯಿಂದ ಪುರಭವನದವರೆಗೆ ಭಾರತ ಸೇವಾದಲದ ಶಾಲಾ ಮಕ್ಕಳು ಸಮವಸ್ತ್ರಧಾರಿಗಳಾಗಿ ದೇಶಭಕ್ತರ ವಿವಿಧ ವೇಷಧರಿಸಿದ ಮಕ್ಕಳೊಂದಿಗೆ ಭಾರತ ಮಾತೆಯ ಪ್ರಭಾತ ಫೇರಿ ಮೆರವಣಿಗೆಯಲ್ಲಿ ಸಾಗಿ ಪುರಭವನದ ಮುಂಭಾಗದ ಮಹಾತ್ಮಗಾಂಧಿ ಪ್ರತಿಮೆ ಬಳಿ ಸಭೆ ಸೇರಿದರು.
ಈ ಸಂದರ್ಭದಲ್ಲಿ ಭಾರತ ಸೇವಾದಳದ ಶಿಸ್ತುಬದ್ಧ ಮಕ್ಕಳಿಂದ ಗೌರವ ಸಲಾಮ್, ಸೇವಾದಳದ ಬಂಧುಗಳಿಂದ ಮಹಾತ್ಮಗಾಂಧೀಜಿಗೆ ಪರಮ ಪ್ರಿಯವಾದ ಸರ್ವಧರ್ಮೀಯ ಪ್ರಾರ್ಥನೆ, ಭಜನೆ ಮತ್ತು ಸೇವಾದಳದ ಮಕ್ಕಳಿಂದ ದೇಶ ಭಕ್ತಿಗೀತೆ, ಮಕ್ಕಳಿಂದ ದೇಶ ಭಕ್ತ ನಾಯಕರುಗಳ ಛದ್ಮವೇಷ ಸ್ಪರ್ಧೆ, ಬಹುಮಾನ ವಿತರಣೆ, ಮೊದಲಾದ ಗಾಂಧಿ ಜಯಂತಿಯ ಸಂದೇಶ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಗಿಡಿಗೆರೆ ರಾಮಕ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಮುರುಗನ್, ಎಸ್ಪಿ ಶರಣಪ್ಪ, ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ವಾರ್ತಾಧಿಕಾರಿ ಖಾದರ್ ಶಾ, ಬಶೀರ್ ಮತ್ತಿತ್ತರರು ಉಪಸ್ಥಿತರಿದ್ದರು.
ಭಾರತ ಸೇವಾದಳ- ‘ಸೇವೆಗಾಗಿ ಬಾಳು’
‘ಸೇವೆಗಾಗಿ ಬಾಳು’ ಎನ್ನುವ ಮಹಾತ್ಮಗಾಂಧಿಯ ಆದರ್ಶವನ್ನು ಹೊಂದಿಕೊಂಡು ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಮಕ್ಕಳಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಮಕ್ಕಳಿಗೆ ಬೋಧಿಸಿಕೊಂಡು ಕಾಲಕಾಲಕ್ಕೆ ಭಾವೀಜನಾಂಗವಾದ ಮಕ್ಕಳನ್ನು ರಾಷ್ಟ್ರದ , ಪರಿಸರದ ವಿದ್ಯಮಾನಗಳಲ್ಲಿ ಪ್ರೇರೇಪಿಸಿ ಭಾಗವಹಿಸುವಂತೆ ಹಾಗೂ ಅವರಿಗೆ ರಾಷ್ಟ್ರದ ಮಹೋನ್ನತವಾದ ಸಾಂಸ್ಕೃತಿಕ ಹಿನ್ನೆಲೆಯನ್ನು ಬೋಧಿಸುತ್ತಿರುವಂತಹ ಸಂಸ್ಥೆಯೇ ಭಾರತ ಸೇವಾದಳ.

















