ಮುಂಬಯಿ, ಸೆ.28: ಬೃಹನ್ಮುಂಬಯಿಯ ಜಮೀನು ವಿಕಾಸ ಯೋಜನಾ ಕ್ಷೇತ್ರದ ಸುಪ್ರಸಿದ್ಧ ತುಳು-ಕನ್ನಡಿಗರ ಸಂಸ್ಥೆ ಎಂದೆಣಿಸಿದ ರಿಲಾಯೇಬಲ್ ಸ್ಪೇಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ, ಆಡಳಿತ ನಿರ್ದೇಶಕ ರಫಾಯಲ್ ಎ.ಸಿಕ್ವೇರಾ (58) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಕಳೆದ ಶನಿವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಅಲ್ಲಿನ ಮಡಂತ್ಯಾರ್ ಮೂಲತಃ ರಫಾಯಲ್ ಸಿಕ್ವೇರಾ ಮುಂಬಯಿ, ಉಪನಗರ ನವಿ ಮುಂಬಯಿ, ಮಂಗಳೂರು ನಗರಗಳಲ್ಲಿ ನಿರೀಶ್ವರವಾದ ಪ್ರಾಚೀನ ಪ್ರತಿಮಾಶಾಸ್ತ್ರ ವಿನ್ಯಾಸದ (ಐಕಾನಿಕ್ ಸ್ಟ್ರಕ್ಚರ್) ವರ್ತಮಾನ ತಂತ್ರಜ್ಞಾನದ (ಇನ್‌ಫರ್‌ಮೇಶನ್ ಟೆಕ್ನಾಲಜಿ) ಏಕಮಹಡಿ ಕಟ್ಟಡ ನಿರ್ಮಾಣಕ್ಕೆ ಹೆಸರುವಾಸಿ ಆಗಿದ್ದರು. ನವಿಮುಂಬಯಿ ಐರೋಲಿ ಪೂರ್ವದ ಥಾಣೆ-ಬೇಲಾಪುರ್ ರಸ್ತೆಯಲ್ಲಿನ ರಿಲಾಯೇಬಲ್ ಟೆಕ್‌ಪಾರ್ಕ್ ಇವರ ಬೃಹತ್ ಯೋಜನೆ ಆಗಿತ್ತು.
ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಸಂಸ್ಥೆಯ 2011 ರ ಸಾಲಿನ ವಾರ್ಷಿಕ ಎಲೇಕ್ಟ್ರೋಪ್‌ನ್ಯೂಮೆಟಿಕ್ಸ್ ಸಂಸ್ಥೆಯ ಪ್ರಾಯೋಜಕತ್ವದ ಉತ್ಕೃಷ್ಟ ಸಾಧನಾ ಉದ್ಯಮ ಕ್ಷೇತ್ರದ ಪ್ರತಿಷ್ಠಿತ ಪುರಸ್ಕಾರ, ಫೆಡರೇಶನ್ ಆಫ್ ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ಬೆಂಗಳೂರು 2013 ರ ಸಾಲಿನ ಪ್ರಶಸ್ತಿ, ಕಥೋಲಿಕ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಮಂಗಳೂರು ಇದರ 2014 ರ ಸಾಲಿನ ರಚನಾ ಪುರಸ್ಕಾರಕ್ಕೂ ರಫಾಯಲ್ ಸಿಕ್ವೇರಾ ಪಾತ್ರರಾಗಿದ್ದು ಕಳೆದ ಅನೇಕ ವರ್ಷಗಳಿಂದ ಮಹಾನಗರದಲ್ಲಿ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದರು.
ಮೃತರು ಮುಂಬಯಿ ಪೊವಾಯಿ ಅಲ್ಲಿನ ಇವಿಟಾ ಹಿರಾನಂದನಿ ಗಾರ್ಡನ್ ನಿವಾಸದಲ್ಲಿ ವಾಸವಾಗಿದ್ದು, ಪತ್ನಿ ಶ್ರೀಮತಿ ಕ್ಲೋಟಿಲ್ಡಾ ಆರ್.ಸಿಕ್ವೇರಾ, ಪುತ್ರಿ ಶ್ರೀಮತಿ ಕೋಲೆಟ್ (ಡಿಲಿಮಾ) ಸಿಕ್ವೇರಾ, ಅಳಿಯ ನಿರ್ದೇಶಕ ಆರೊನ್ ಡಿ’ಲಿಮಾ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಸೋಮವಾರ (ತಾ. 27.೦9.2015) ಸಂಜೆ 3.30 ಗಂಟೆಗೆ ಸ್ವನಿವಾಸದಿಂದ ಹೊರಟು ಸಂಜೆ 4.೦೦ ಗಂಟೆಗೆ ಪೊವಾಯಿ ಹೋಲಿ ಟ್ರಿನಿಟಿ ಇಗರ್ಜಿಯಲ್ಲಿ ನೆರವೆರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ರಫಾಯಲ್ ಸಿಕ್ವೇರಾ ನಿಧನಕ್ಕೆ ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ನ ಸಂಸ್ಥ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಕಾರ್ಯಾಧ್ಯಕ್ಷ ಹೆನ್ರಿ ಲೋಬೋ, ನಿರ್ದೇಶಕರುಗಳಾದ ಆಲ್ಬರ್ಟ್ ಡಬ್ಲ್ಯೂ. ಡಿ’ಸೋಜಾ, ಆಂಟನಿ ಸಿಕ್ವೇರಾ, ಜಾನ್ ಡಿ’ಸಿಲ್ವಾ, ಫೆಡರೇಶನ್ ಆಫ್ ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ಬೆಂಗಳೂರು ಇದರ ವಲೇರಿಯನ್ ಆರ್.ಫೆರ್ನಾಂಡಿಸ್ ಮತ್ತು ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವರದಿ : ರೋನ್ಸ್ ಬಂಟ್ವಾಳ
