ಮಂಗಳೂರು: ಸಿರಿ ಗ್ರಾಮೋದ್ಯೋಗದ ವತಿಯಿಂದ ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗದ ಮಳಿಗೆಯು ಶನಿವಾರ ಶುಭಾರಂಭಗೊಂಡಿತ್ತು. ಶಾಸಕ ಜೆ.ಆರ್. ಲೋಬೊ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಲೋಬೋ ಅವರು, ಶ್ರೀ ಧರ್ಮಸ್ಥಳ ಕ್ಷೇತ್ರ ಧಾರ್ಮಿಕ ರಂಗದೊಂದಿಗೆ ಸಾಮಾಜಿಕ ರಂಗದಲ್ಲಿಯೂ ಹೆಸರು ಮಾಡಿದೆ. ಸಿರಿ ಗ್ರಾಮೋದ್ಯೋಗ ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಸೃಷ್ಟಿಸುವುದರೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಪ್ರೋತ್ಸಾಹಿಸುತ್ತಿದೆ. ಸಿರಿ ಸಂಸ್ಥೆ ಹುಟ್ಟು ಹಾಕುವುದರ ಮೂಲಕ ಗ್ರಾಮೀಣ ಭಾಗದ ಜನತೆಗೆ ಉತ್ತಮ ಜೀವನ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಅಟೋ ಮ್ಯಾಟ್ರಿಕ್ಸ್‌ನ ಎಂಡಿ ಡಿ. ರಾಜೇಂದ್ರಕುಮಾರ್, ಮೋತಿಶ್ಯಾಂ ಕಾಂಪ್ಲೆಕ್ಸ್ ಪ್ರೈವೇಟ್ ಸಂಸ್ಥೆಯ ಎಂಡಿ ಎಸ್.ಎಂ. ಅರ್ಶಾದ್, ನಟಿ ಸೋನಲ್ ಮುಂತಾದವರು ಅತಿಥಿಗಳಾಗಿದ್ದರು.
ಸಿರಿ ಸಂಸ್ಥೆ ನಿರ್ದೇಶಕಿ ಮನೋರಮಾ ಸ್ವಾಗತಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ವಂದಿಸಿದರು.





