ಕನ್ನಡ ವಾರ್ತೆಗಳು

ದಿವಂಗತ ಕೆಲಿಂಜ ಸೀತಾರಾಮ ಆಳ್ವರ ‘ತುಳು ಕೆಲಿಂಜ ಬಾರತೊ’ ಕೃತಿ ಬಿಡುಗಡೆ.

Pinterest LinkedIn Tumblr

Tulu_kelanje_photo_1

ಮಂಗಳೂರು, ಸೆ.23: ಇತ್ತೀಚಿನ ವರ್ಷಗಳಲ್ಲಿ ತುಳು ಸಾಹಿತ್ಯದಲ್ಲಿ ಒಳ್ಳೆಯ ಕೃಷಿಯಾಗುತ್ತಿರುವುದು ಶ್ಲಾಘನೀಯ.ದಿ. ಕೆಲಿಂಜ ಆಳ್ವರು ತುಳುವಿನ ವ್ಯಾಸರು. ತುಳು ಕೆಲಿಂಜ ಬಾರತೊ ಪುಸ್ತಕದಲ್ಲಿ ಶಬ್ದ ಭಂಡಾರ ಚೆನ್ನಾಗಿದೆ. ಆಧ್ಯಾತ್ಮದ ಸೊಬಗು ಅಡಕವಾಗಿದೆ. ತುಳುವರು ಕ್ರೀಯಾಶೀಲರು, ತುಳು ಭಾಷಾ ಬೆಳೆಗೆ ಚಾಲನೆ ಸಿಕ್ಕಿದೆ. ಇದರ ಜತೆಯಲ್ಲೇ ಶೀಘ್ರದಲ್ಲೇ 8ನೆ ಪರಿಚ್ಛೇದಕ್ಕೆ ಸೇರ್ಪಡೆಯಾಗಲಿ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಉರ್ವಾಸ್ಟೋರ್‌ನ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ತುಳುಭವನದಲ್ಲಿ ಮಂಗಳವಾರ ದಿವಂಗತ ಕೆಲಿಂಜ ಸೀತಾರಾಮ ಆಳ್ವರ ‘ತುಳು ಕೆಲಿಂಜ ಬಾರತೊ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಈ ಸಂದರ್ಭ ಸ್ವಾಮೀಜಿ ಮಾ. ವಿಠಲ್ ಪುತ್ತೂರು ರಚಿಸಿದ ‘ತುಳು ಕಳಸಾಮೃತ’ ಮತ್ತು ಕುದ್ಕಾಡಿ ವಿಶ್ವನಾಥ್ ರೈಗಳ ‘ಸುಗಿಪು ಮದಿಪು’ ‘ಓಪರಿಮಾಲೆ ಗೀತಾಂಜಲಿ’ ಕೃತಿಗಳನ್ನು ಅವರು ಬಿಡುಗಡೆಗೊಳಿಸಿದರು.

Tulu_kelanje_photo_2 Tulu_kelanje_photo_3 Tulu_kelanje_photo_4

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿ ಮಾತನಾಡಿ, 8ನೆ ಪರಿಚ್ಛೇದಕ್ಕೆ ತುಳು ಸೇರ್ಪಡೆಯಾಗುವಲ್ಲಿ ತುಳುವರೆಲ್ಲರ ಸಂಘಟಿತ ಪ್ರಯತ್ನ ಆಗಬೇಕಿದೆ ಎಂದರು.

ತುಳುಕೂಟ ಬಂಟ್ವಾಳದ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ಜೀವನದಿ ನೇತ್ರಾವತಿ ಉಳಿಸಲು ಎತ್ತಿನಹೊಳೆ ಯೋಜನೆ ವಿರೋಧಿಸಿ ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ತುಳುವರೆಲ್ಲರೂ ಹೋರಾಟಕ್ಕಿಳಿಯುವ ಮೂಲಕ ಕಡಲತೆರೆ ಎದ್ದಂತಾಗಿದೆ. ತುಳು ಭಾಷೆ 8ನೆ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಈ ರೀತಿಯ ಜಾಗೃತಿ ಅಗತ್ಯ ಎಂದು ಹೇಳಿದರು.

ತುಳು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ತುಳು ಪಠ್ಯವನ್ನು ತೃತೀಯ ಭಾಷೆಯಾಗಿ ಈ ವರ್ಷ ಏಳು ಶಾಲೆಗಳಲ್ಲಿ 25 ಮಂದಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗಾಗಿ ಮಧ್ಯಾವಧಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಅಕಾಡಮಿ ವತಿಯಿಂದಲೇ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಹಿರಿಯ ಗಮಕ ಕಲಾವಿದ ಗಮಿ ವಿಶ್ವನಾಥ ಶೆಟ್ಟಿ, ಅಕಾಡೆಮಿ ಸದಸ್ಯರಾದ ವೇದಾವತಿ, ಮೋಹನ್ ಕೊಪ್ಪಲ ಕದ್ರಿ, ಜಯಶೀಲ ಉಪಸ್ಥಿತರಿದ್ದರು. ಸತ್ಯನಾರಾಯಣ ಭಟ್ ಪ್ರಾರ್ಥಿಸಿದರು.

ರಘು ಇಡ್ಕಿದು ಸ್ವಾಗತಿಸಿದರು. ಡಿ.ಎಂ. ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ರೂಪಕಲಾ ಆಳ್ವ ಧನ್ಯವಾದ ಅರ್ಪಿಸಿದರು.

Write A Comment