ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಹಮ್ಮಿಕೊಂಡಿರುವ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವದ ಉದ್ಘಾಟನಾ ಸಮಾರಂಭ ಗುರುವಾರ ಬಹಳ ವಿಜೃಂಭಣೆ ಹಾಗೂ ಸಡಗರ ಸಂಭ್ರಮ, ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.
ಬೆಳಿಗ್ಗೆ 9.15 ಕ್ಕೆ ಧ್ವಜಾರೋಹಣ, 9.30ಕ್ಕೆ ಉದ್ಘಾಟನೆ,9.40ಕ್ಕೆ ತೆನೆಹಬ್ಬ-ತೆನೆ ವಿತರಣೆ, 9.45ಕ್ಕೆ ಶ್ರೀ ದೇವರ ಮೂರ್ತಿ ಪ್ರತಿಷ್ಠೆ, 10.30ರಿಂದ ಭಜನಾ ಸೇವೆ, ಮಧಾಹ್ನ 12.00 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಿತು.
ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಎನ್.ಶ್ರೀಧರ ಶೆಟ್ಟಿ ಹಾಗೂ ಶ್ರೀಮತಿ ಪದ್ಮನಯನ ಎಸ್.ಶೆಟ್ಟಿ ದಂಪತಿಗಳು ಶ್ರೀ ಗಣೇಶೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಡಾ.ಎನ್.ಶ್ರೀಧರ ಶೆಟ್ಟಿ ಹೇಳಿದರು.
ಬ್ರಿಗೇಡಿಯರ್ ಚಂದ್ರಶೇಖರ್ ಹಾಗೂ ಶ್ರೀಮತಿ ನಚ್ಚ ಭಾರತಿ ಶೆಟ್ಟಿ ದಂಪತಿಗಳು ಧ್ವಜಾರೋಹಣ ನೆರವೇರಿಸಿದರು. ಶಿಸ್ತುಬದ್ಧ ಜೀವನ ಶೈಲಿಗೆ ಇಂತಹ ಉತ್ಸವಗಳು ಪ್ರೇರಣೆಯಾಗಲಿ ಎಂದು ಬ್ರಿ.ಚಂದ್ರಶೇಖರ ಶೆಟ್ಟಿ ಶುಭಾ ಹಾರೈಸಿದರು.
ಮಂಗಳೂರು ವಿವಿಯ ನಿವೃತ್ತ ಪರೀಕ್ಷಾಂಗ ಕುಲಸಚಿವ ಐ.ಚಿಕ್ಕಪ್ಪ ರೈ ಹಾಗೂ ಶ್ರೀಮತಿ ಶಂಕರಿ.ಸಿ.ರೈ ದಂಪತಿಗಳು ಹಿರಿಯ ವಕೀಲ ಸೀತಾರಾಮ್ ಶೆಟ್ಟಿಯವರಿಗೆ ಸಾಂಕೇತಿಕವಾಗಿ ತೆನೆ ವಿತರಿಸುವ ಮೂಲಕ ತೆನೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಐ.ಸಿ.ರೈ ಅವರು, ಕಳೆದ 12 ವರ್ಷಗಳಿಂದ ವ್ಯವಸ್ಥಿತವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ಆಯೋಜಿಸುತ್ತಿರುವ ಸಂಘಟಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹರಿದಾಸ ಶರತ್‌ಶೆಟ್ಟಿ ಪಡು ಅವರು ಪ್ರಸ್ತುತ ಪಡಿಸಿದ `ಶೂರನಿಗೊಲಿದ ಶನೀಶ್ವರ’ ಕಥಾ ಕೀರ್ತನೆಯ ಧ್ವನಿಸುರುಳಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ನಚ್ಚ ಭಾರತಿ ಸಿ.ಶೆಟ್ಟಿ, ಪದ್ಮನಯನ ಎಸ್.ಶೆಟ್ಟಿ ಹಾಗು ಶಂಕರ ಸಿ. ರೈ ಅತಿಥಿಗಳಾಗಿದ್ದರು. ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿ.ಎ.ಶಾಂತರಾಮ ಶೆಟ್ಟಿ ಪ್ರತಿಷ್ಠಾನದ ಟ್ರಸ್ಟಿ ರವಿರಾಜ ಶೆಟ್ಟಿ ನಿಟ್ಟೆಗುತ್ತು, ಸಮಿತಿಯ ಕಾಯದರ್ಶಿ ದಿವಾಕರ ಸಾಮಾನಿ ಚೇಳಾರುಗುತ್ತು, ಮಾತೃಸಂಘದ ಕೋಶಾಧಿಕಾರಿ ಕೆ.ಮನಮೋಹನ ಶೆಟ್ಟಿ, ಪ್ರತಿಭಾನ್ವೇಷಣೆ ಸಮಿತಿಯ ಸಂಚಾಲಕಿ ಡಾ.ಆಶಾ ಜ್ಯೋತಿ ರೈ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು, ಸ್ವಾಗತಿಸಿದರು.
ಸತೀಶ್ ಕೊಡಿಯಾಲ್‌ಬೈಲ್ ಹಾಗೂ ಶರತ್ ಶೆಟ್ಟಿ ಪಡು ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಜೊತೆಕಾರ್ಯದರ್ಶಿ ಮೀನಾ ಆರ್.ಶೆಟ್ಟಿ ವಂದಿಸಿದರು. ಮಾ.ವಿದ್ವತ್ ಶೆಟ್ಟಿ ಅವರಿಂದ ಪುಷ್ಪಾಂಜಲಿ ನೃತ್ಯ ಜರಗಿತು.
ಸಪ್ಟೆಂಬರ್ 17ರಿಂದ19ರ ವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು :
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ವತಿಯಿಂದ ಸಾರ್ವಜಕ ಶ್ರೀ ಗಣೇಶೋತ್ಸವ ಆಚರಣೆ ಸಪ್ಟೆಂಬರ್ 17 ರಿಂದ 19ರ ವರೆಗೆ ಶ್ರದ್ಧಾಭಕ್ತಿ, ವಿಜೃಂಭಣೆಯೊಂದಿಗೆ ನಡೆಯಲಿದ್ದು, ದಿನಾಂಕ 17 ರಿಂದ 19 ರವರೆಗೆ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ವತಿಯಿಂದ ‘ಓಂಕಾರನಗರ’ದ ವೇದಿಕೆಯಲ್ಲಿ ಶ್ರೀ ಗಣೇಶೋತ್ಸವ ದಶಮ ಸಂಭ್ರಮದ ಅಂಗವಾಗಿ ಪ್ರತಿಭಾನ್ವೇಷಣೆ ಸಮಿತಿಯಿಂದ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.
ದಿನಾಂಕ 19 .19.2015 ನೇ ಶವಾರ ಬೆಳಿಗ್ಗೆ 8.00ಕ್ಕೆ ಪ್ರಾತಃಕಾಲದ ಪೂಜೆಯಾಗಿ 8.30 ಕ್ಕೆ ಅಷ್ತೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ ಪ್ರಾರಂಭವಾಗಿ 11.00 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ ಪ್ರಸಾದ ವಿತರಣೆ, 12.30 ಕ್ಕೆ “ಮಹಾ ಅನ್ನಸಂತರ್ಪಣೆ” ಜರಗಲಿರುವುದು. ಮಧ್ಯಾಹ್ನ 3.30 ಗಂಟೆಗೆ ವಿಸರ್ಜನಾ ಪೂಜೆ ನಡೆದು ದೀಪ ಪ್ರಜ್ವಲನದೊಂದಿಗೆ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಜನಾ ಸೇವಾ ಕಾರ್ಯಕ್ರಮದ ಉದ್ಘಾಟನೆಯು ಜರಗಲಿರುವುದು. ಮಧ್ಯಾಹ್ನ 3.30 ಕ್ಕೆ ಶೊಭಾಯಾತ್ರೆಯು ಪ್ರಾರಂಭವಾಗಿ ಶ್ರೀ ಮಹಾಮ್ಮಾಯಿ ಕೆರೆಯಲ್ಲಿ ಶ್ರೀ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು.
ತಾಲೂಕು ಬಂಟರ ಸಂಘ ಮಂಗಳೂರು ಮತ್ತು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ ಇವರ ಪ್ರಾಯೋಜಕತ್ವದಲ್ಲಿ, ಬಂಟರ ಯಾನೆ ನಾಡವರ ಮಾತೃಸಂಘವು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ ಹಾಗೂ ಇತರ ಸಂಘ ಸಂಸ್ಥೆಗಳ ಹಾಗೂ ಎಲ್ಲಾ ಜಾತಿ ಮತ ಬಾಂಧವರ ಸಹಕಾರದಿಂದ, ಶ್ರೀ ಗಣೇಶೋತ್ಸವ, ತೆನೆಹಬ್ಬ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗವನ್ನು ಶ್ರದ್ಧಾಭಕ್ತಿ, ವಿಜೃಂಭಣೆಯೊಂದಿಗೆ ಕಳೆದ 11 ವರ್ಷಗಳಿಂದ ಅಚರಿಸುತ್ತಾ ಬಂದಿದೆ.




















































