ಕನ್ನಡ ವಾರ್ತೆಗಳು

ಎತ್ತಿನ ಹೊಳೆ ನೀರಿನ ಬಗ್ಗೆ ಚಾರ್ಟರ್ಡ್‌ ಅಕೌಂಟೆಂಟ್‌‌ನಿಂದ ಪ್ರಾತ್ಯಕ್ಷಿಕೆ.

Pinterest LinkedIn Tumblr

ICAI_photo_wokshp_1

ಮಂಗಳೂರು,ಸೆ.14 : ‘ಕುಡಿಯುವ ನೀರಿನ ತೆಲುಗು ಗಂಗಾ ಯೋಜನೆಯ ವಿಫಲತೆಯನ್ನು ಕಂಡರೂ ರಾಜ್ಯ ಸರ್ಕಾರ ಎತ್ತಿನಹೊಳೆ ತಿರುವು ಯೋಜನೆಯನ್ನು ಕೈಗೆತ್ತಿಕೊಂಡು ತಪ್ಪು ಮಾಡುತ್ತಿದೆ. ಈ ಯೋಜನೆಯಿಂದ ಕೇವಲ 0.85 ಟಿಎಂಸಿ ನೀರು ಸಿಗುತ್ತದೆ ಎಂದು ಐಐಎಸ್‌ಸಿ ವಿಜ್ಞಾನಿಗಳೇ ಹೇಳಿರುವಾಗ 13,000 ಕೋಟಿ ಹಣವನ್ನು ಹೂಡುವುದೇ ವ್ಯರ್ಥ’ ಎಂದು ಚಾರ್ಟರ್ಡ್‌ ಅಕೌಂಟೆಂಟ್‌ ಗಿರಿಧರ್‌ ಕಾಮತ್‌ ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಸಂರಕ್ಷಣಾ ಸಂಚಯ, ಭಾರತೀಯ ಚಾರ್ಟೆಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ನಡೆದ ಎತ್ತಿನ ಹೊಳೆ ಎಷ್ಟಿದೆ ನೀರು? ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ನೀರಾವರಿ ನಿಗಮದ, ಐಐಎಸ್‌ಸಿ ವರದಿಗಳ ಕುರಿತು ಅವರು ಮಾತನಾಡಿದರು.

‘ತೆಲುಗು ಗಂಗಾ ಯೋಜನೆಯಿಂದ 15 ಟಿಎಂಸಿ ನೀರನ್ನು ಪಡೆಯಬಹುದು ಎಂದು ಸಮಗ್ರ ಯೋಜನಾ ವರದಿಯಲ್ಲಿ ಪ್ರತಿಪಾದಿಸಲಾಗಿತ್ತು. ನಂತರ ಅದನ್ನು 12 ಟಿಎಂಸಿಗೆ ಇಳಿಸಲಾಯಿತು. ಆದರೆ ವಾಸ್ತವದಲ್ಲಿ ಇಂದು 3.55 ಟಿಎಂಸಿ ನೀರನ್ನು ಮಾತ್ರ ಕೊಡುತ್ತಿದೆ. ಆದ್ದರಿಂದ ಈ ಯೋಜನೆಯ ವಿಫಲತೆಯಿಂದ ರಾಜ್ಯ ಸರ್ಕಾರ ಪಾಠ ಕಲಿಯಬೇಕು. ಎತ್ತಿನ ಹೊಳೆ ತಿರುವು ಯೋಜನೆಯಲ್ಲಿ ಸಿಗು ವುದೇ 0.85 ಟಿಎಂಸಿ ನೀರು ಎಂದು ಐಐಎಸ್‌ಸಿ ವರದಿ ಹೇಳುತ್ತಿರುವಾಗ ಉಳಿದ ನೀರನ್ನು ಎಲ್ಲಿಂದ ತೆಗೆದು ಕೊಂಡು ಹೋಗುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ, ಯೋಜನೆಯನ್ನು ಕೈಬಿಡಬೇಕು’ ಎಂದರು.

ICAI_photo_wokshp_2 ICAI_photo_wokshp_3 ICAI_photo_wokshp_4

‘ಕರ್ನಾಟಕ ನೀರಾವರಿ ನಿಗಮದ ವರು ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ಸರಾಸರಿ 6280 ಮಿ.ಮೀ ಮಳೆಯಾಗುತ್ತದೆ ಎಂದು ವರದಿಯಲ್ಲಿ ಹೇಳಿದೆ. ಆದರೆ, ನಾವು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಅಲ್ಲಿ ಅಷ್ಟೊಂದು ಮಳೆಯೇ ಬೀಳುವುದಿಲ್ಲ. ಯೋಜನಾ ವರದಿಗೂ ವಾಸ್ತವದಲ್ಲೂ 2,000 ಮಿ.ಮೀ ಮಳೆಯ ವ್ಯತ್ಯಾಸವಿದೆ. ಎತ್ತಿನಹೊಳೆಗೆ ಅಣೆಕಟ್ಟು ಕಟ್ಟಿದರೆ ನೇತ್ರಾವದಿ ನದಿಗೆ ಬರುವ ನೀರು ಕಡಿಮೆಯಾಗುತ್ತದೆ. ಸಮುದ್ರದ ನೀರು ನದಿಗೆ ಸೇರುತ್ತದೆ. ಇದರಿಂದ ನೇತ್ರಾ ವತಿ ನೀರು ಕುಡಿಯಲು ಸಾಧ್ಯವಾಗು ವುದಿಲ್ಲ. ಅದೇ ರೀತಿ ಅಂತರ್ಜಲಕ್ಕೂ ಪೆಟ್ಟಾಗುತ್ತದೆ. ಇದರಿಂದ ಮಂಗಳೂರು ಕುಡಿಯುವ ನೀರಿನ ಸಮಸ್ಯೆ ಎದುರಿ ಸುತ್ತಿರುವ ಚೆನ್ನೈನಂತೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದರು.

ಸಹ್ಯಾದ್ರಿ ಸಂರಕ್ಷಣಾ ಸಂಚಯದ ಸಂಚಾಲಕ ದಿನೇಶ್‌ ಹೊಳ್ಳ ಅವರು ಎತ್ತಿನಹೊಳೆಯಲ್ಲಿ ಆರಂಭಗೊಂಡಿರುವ ಕಾಮಗಾರಿಯ ಬಗ್ಗೆ ಮಾತನಾಡಿ, ‘ಚಿಕ್ಕಬಳ್ಳಾಪುರ – ಕೋಲಾರದ ಕೆರೆಗಳನ್ನು ಪುನಶ್ಚೇತನ ಮಾಡಿದರೆ ಎತ್ತಿನಹೊಳೆ ನೀರು ಬೇಡ. ಬಯಲುಸೀಮೆಯ ಭಾಗದ ನದಿಗಳು ಮರಳು ಮಾಫಿಯಾದಿಂದ ಬತ್ತಿವೆ. ಒತ್ತುವರಿಯಿಂದ ಕೆರೆಗಳು ಇಲ್ಲವಾಗಿವೆ. ಕೂಡಲೇ ಅಲ್ಲಿನ ಕೆರೆಗಳನ್ನು ತೆರವುಗೊಳಿಸಬೇಕು. ಇದರಿಂದ ಸಮಸ್ಯೆ ಬಗೆಹರಿಯಲಿದೆ’ ಎಂದು ವಿವರಿಸಿದರು.

Write A Comment