ಕನ್ನಡ ವಾರ್ತೆಗಳು

ಮಾಹಿತಿ ಹಕ್ಕು ಖಾಯಿದೆ ದುರುಪಯೋಗ : ಕಿರುಕುಳ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ : ಎಸ್ಪಿ ಶರಣಪ್ಪ.

Pinterest LinkedIn Tumblr

Sc_St_meet_1

ಮಂಗಳೂರು, ಸೆ.14  : ಮಾಹಿತಿ ಹಕ್ಕು ಕಾಯ್ದೆ ನಮ್ಮ ಹಕ್ಕು. ಆದರೆ, ಕಾಯ್ದೆಯಡಿ ಅರ್ಜಿ ಹಾಕಿ ಮಾಹಿತಿ ಪಡೆದು ಬಳಿಕ ಅದನ್ನಿಟ್ಟುಕೊಂಡು ಕಿರುಕುಳ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ. ಎಚ್ಚರಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ದಲಿತ ಕುಂದುಕೊರತೆಗಳ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಭೆಯಲ್ಲಿ ವ್ಯಕ್ತವಾದ ದೂರೊಂದಕ್ಕೆ ಸ್ಪಂದಿಸಿ ಈ ಎಚ್ಚರಿಕೆ ನೀಡಿದರು.

ದ.ಕ. ಜಿಲ್ಲಾ ಮೊಗೇರ ಸಂಘದ ಸಂಘಟನಾ ಕಾರ್ಯದರ್ಶಿ ಸೀತಾರಾಮು ಮಾತನಾಡಿ, ಆನಂದ ಬೆಳ್ಳಾರೆ ಎಂಬವರು ನಕಲಿ ಜಾತಿ ಪ್ರಮಾಣ ಪತ್ರದ ಹೆಸರಿನಲ್ಲಿ ಮೊಗೇರ ಸಮುದಾಯದ ಕೆಲ ಮಹಿಳೆಯರಿಗೆ ಪತ್ರ ಬರೆದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು. ‘‘ನನಗೆ ಯಾರೆಂದೇ ತಿಳಿಯದ ಆನಂದ ಬೆಳ್ಳಾರೆ ಎಂಬವರು ಮಾಹಿತಿ ಹಕ್ಕಿನಡಿ ನನ್ನ ಬಗ್ಗೆ ಮಾಹಿತಿ ಪಡೆದು ನಾನು ನಕಲಿ ಜಾತಿ ಸರ್ಟಿಫಿಕೇಟ್ ಮೂಲಕ ನೌಕರಿ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ನನಗೆ ಪತ್ರ ಬರೆದು ಕಿರುಕುಳ ನೀಡಿದ್ದಾರೆ. ಮೊಗೇರ ಸಮುದಾಯಕ್ಕೆ ಸೇರಿದ ನಾನು ವಾಸ್ತವವಾಗಿ ಸ್ನಾತಕೋತ್ತರ ಪದವಿ ಬಳಿಕ ಎನ್‌ಇಟಿ ಪರೀಕ್ಷೆ ಬರೆದು ಜನರಲ್ ಮೆರಿಟ್ ಸೀಟ್‌ನಲ್ಲಿ ಉಪನ್ಯಾಸಕಿಯಾಗಿ ಸೇವೆಗೆ ಸೇರಿದ್ದೇನೆ. ಪ್ರಸ್ತುತ ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ’’ ಎಂದು ಕವಿತಾ ಎಂಬವರು ದೂರಿದರು.

Sc_St_meet_3 Sc_St_meet_2

ದಲಿತ ಸಂಘಟನೆಯ ಹೆಸರು ಹೇಳಿ ದಲಿತರಿಗೆ ದಲಿತರಿಂದಲೇ ಹಿಂಸೆ ನೀಡಲಾಗುತ್ತಿದೆ ಎಂದು ಕವಿತಾರ ಸಹೋದರ ಶೈನ್ ಕುಮಾರ್ ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ದಲಿತ ಸಂಘರ್ಷ ಸಮಿತಿಯ ಮುಖಂಡ ಗಿರೀಶ್ ಕುಮಾರ್ ಮಾತನಾಡಿ, ಪಾಲಿಟೆಕ್ನಿಕ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಕೆಲಸ ಪಡೆದಿರುವವರ ಮಾಹಿತಿಯನ್ನು ಆನಂದ ಬೆಳ್ಳಾರೆ ಪಡೆದಿದ್ದಾರೆ. ಆ ಸಂಬಂಧ ಕವಿತಾರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಆದರೆ ಆನಂದ ಬೆಳ್ಳಾರೆಯವರೇ ಕವಿತಾರಿಗೆ ಪತ್ರ ಬರೆದಿದ್ದಾರೆಯೇ ಎಂಬ ಬಗ್ಗೆ ತನಿಖೆ ಆಗಬೇಕು. ಪತ್ರದ ಮೂಲ ಪ್ರತಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

ಆನಂದ ಬೆಳ್ಳಾರೆ ತಪ್ಪು ಮಾಡಿದ್ದಲ್ಲಿ ಅವರಿಗೂ ಶಿಕ್ಷೆಯಾಗಲಿ ಎಂದರು. ಈ ನಡುವೆ ಕೆಲ ನಿಮಿಷಗಳ ಕಾಲ ಗಿರೀಶ್ ಕುಮಾರ್ ಹಾಗೂ ಕವಿತಾ ಕುಟುಂಬಸ್ಥರ ನಡುವೆ ಸಭೆಯಲ್ಲಿ ವಾಗ್ವಾದ ನಡೆಯಿತು. ಅದನ್ನು ನಿಯಂತ್ರಿಸಿ ಪ್ರತಿಕ್ರಿಯಿಸಿದ ಜಿಲ್ಲಾ ಎಸ್ಪಿ ಡಾ.ಶರಣಪ್ಪ, ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ನಾಗರಿಕ ಹಕ್ಕು ಅನುಷ್ಠಾನ ಸೆಲ್‌ಗೆ ದೂರು ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಹೌದೆಂದು ಗಿರೀಶ್‌ಕುಮಾರ್ ಉತ್ತರಿಸಿದಾಗ, ಹಾಗಿದ್ದಲ್ಲಿ ಆ ವಿಷಯ ಅಲ್ಲೇ ಇತ್ಯರ್ಥ ಆಗುವುದು. ಆದರೆ, ಮಾಹಿತಿ ಹಕ್ಕಿನಿಂದ ಮಾಹಿತಿ ಪಡೆದು ಅದರಿಂದ ಇನ್ನೊಬ್ಬರಿಗೆ ಕಿರುಕುಳ, ತೊಂದರೆ ನೀಡುವುದು ತೀರಾ ಕೆಟ್ಟ ಸಂಗತಿ. ಈ ರೀತಿ ಬೆದರಿಕೆ, ಹಣ ಪಡೆಯುವುದು, ಕಿರುಕುಳ ನೀಡುವಂತಹ ದೂರು ಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಉಪಸ್ಥಿತರಿದ್ದರು.

Write A Comment