ಮಂಗಳೂರು : ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ನೇತ್ರಾವತಿ ನದಿ ತಿರುವು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ, ಚಿಕ್ಕಬಳ್ಳಾಪುರದ ಹಾಲಿ ಸಂಸದ ವೀರಪ್ಪ ಮೊಯ್ಲಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಘೇರಾವ್ ಹಾಕಿದ ಘಟನೆ ಶನಿವಾರ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.
ಶಕ್ತಿನಗರದಲ್ಲಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ವೀರಪ್ಪ ಮೊಯ್ಲಿ ಅವರು ನಿರ್ಗಮಿಸುತ್ತಿದ್ದಾಗ ಎತ್ತಿನ ಹೊಳೆ ಅನುಷ್ಟಾನದ ವಿರೋದ್ಧ ನೇತ್ರತ್ವ ವಹಿಸಿರುವ ಸಹ್ಯಾದ್ರಿ ಸಂಚಾರ ಸಮಿತಿಯ ಪ್ರಮುಖರಾದ ದಿನೇಶ್ ಹೊಳ್ಳ ಅವರು ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ವೀರಪ್ಪ ಮೊಯ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿಗೆ ಪ್ರತಿಕ್ರಿಯೆ ನೀಡಿದ ಮೊಯ್ಲಿಯವರು, ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಈ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, ಬಳಿಕ ಕಾಂಗ್ರೆಸ್ ಸರಕಾರ ಬಂದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದೀಗ ಎತ್ತಿನಹೊಳೆ ಯೋಜನೆಯ ಕಾಮಗಾರಿ ಆರಂಭಗೊಂಡಿದ್ದು, ಈಗಿನ ಪರಿಸ್ಥಿತಿಯಲ್ಲಿ ಈ ಯೋಜನೆ ಬಗ್ಗೆ ತಾನು ಯಾವೂದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.
ರಾಜ್ಯದ ಜನತೆಗೆ ಶುದ್ಧವಾದ ಕುಡಿಯುವ ನೀರು ಕೊಡಬೇಕದದ್ದು ನಮ್ಮ ಕರ್ತವ್ಯ. ಯಾವೂದೇ ಪ್ರದೇಶದಿಂದಾಗಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆನ್ನುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ ಎನ್ನುವ ಮೂಲಕ ಎತ್ತಿನಹೊಳೆ ಯೋಜನೆಯನ್ನು ಸಮರ್ಥಿಸುವ ಹೇಳಿಕೆಯನ್ನು ಮೊಯ್ಲಿ ನೀಡಿದರು.
ಇವರ ಪ್ರತಿಕ್ರಿಯೆಯನ್ನು ಪ್ರತಿಭಟಿಸಿ ಎತ್ತಿನ ಹೊಳೆ ಅನುಷ್ಟಾನ ವಿರೋಧಿಸಿ ಹೋರಾಟ ನಡೆಸುತ್ತಿರುವ ಸಹ್ಯಾದ್ರಿ ಸಂಚಾರ ಸಮಿತಿ ಹೋರಾಟಗಾರರು ದಿಢೀರ್ ಪ್ರತಿಭಟನೆ ನಡೆಸಿತಲ್ಲದೇ ಕರಿಪತಾಕೆ ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದ್ದಾರೆ. ಇದೇ ವೇಳೆ ಪ್ರತಿಭಟನಕಾರರಲ್ಲಿ ಕೆಲವರು ಮೊಯ್ಲಿಯವರಿಗೆ ಚಪ್ಪಲಿಗಳನ್ನೂ ಪ್ರದರ್ಶಿಸಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಿ ವೀರಪ್ಪ ಮೊಯ್ಲಿ ಅವರು ತೆರಳಲು ಅನುವು ಮಾಡಿಕೊಟ್ಟರು. ಬಳಿಕ ಬಂಧಿಸಲ್ಪಟ್ಟ ದಿನೇಶ್ ಹೊಳ್ಳ ಮತ್ತವರ ತಂಡದವರನ್ನುಠಾಣೆಗೆ ಕರೆದೊಯ್ದರು.











