ಚಿತ್ರ / ವರದಿ : ಸತೀಶ್ ಕಾಪಿಕಾಡ್
ಮಂಗಳೂರು,ಸೆ.08: ಕರಾವಳಿ ಕಾಲೇಜುಗಳ ಸಮೂಹದ ಆಶ್ರಯದಲ್ಲಿ “ಓಣಂ ಆಚರಣೆ”ಯು ಸೋಮವಾರ ನಗರದ ಕೊಟ್ಟಾರ ಚೌಕಿ ಬಳಿ ಇರುವ ಕರಾವಳಿ ಕಾಲೇಜು ಆವರಣದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಅವರು ದೀಪ ಪ್ರಜ್ವನಗೊಳಿಸಿ, ಬತ್ತದ ತೆನೆ ಅರಳಿಸುವ ಮೂಲಕ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಘಾಟಿಸಿದರು, ಎಲ್ಲಾ ಉತ್ಸವಗಳ ಹಿಂದಿರುವ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಶ್ರೇಷ್ಠ ಕೆಲಸ ನಮ್ಮಿಂದಾಗಬೇಕು. ಆ ಮೂಲಕ ವಿಶ್ವಕ್ಕೇ ಭಾರತ ಮಾದರಿಯಾಗಬೇಕು ಎಂದು ಹೇಳಿದರು. ಭಾರತ ಬಹುವಿಧದ ಸಂಸ್ಕೃತಿ, ಭಾಷೆಯನ್ನು ಹೊಂದಿರುವ ದೇಶ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸಂಸ್ಕೃತಿ, ಪರಂಪರೆಯನ್ನು ಒಳಗೊಂಡಿರುವ ನಾಡಿದು. ಆ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ನಳಿನ್ ಕುಮಾರ್ ತಿಳಿಸಿದರು.
ಶ್ಲಾಘನೆ :
ಭಾರತ ಜಗತ್ತಿನ ದೇವರ ಕೋಣೆ. ಭಾರತದ ದೇವರ ಕೋಣೆ ಕೇರಳ. ಕೇರಳದ ಸಂಸ್ಕೃತಿಯನ್ನು ತಿಳಿಯುವ ಕೆಲಸ ಕರಾವಳಿ ಕಾಲೇಜಿನಲ್ಲಿ ನಡೆಯುತ್ತಿರುವು ದು ಶ್ಲಾಘನೀಯ. ಜೊತೆಗೆ ಆಯುರ್ವೇದ, ಜೋತಿಷಶಾಸ್ತ್ರ, ಯೋಗಕ್ಕೆ ಕೇರಳದ ಕೊಡುಗೆ ಅದ್ವಿತೀಯ ಎಂದರು.
ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್. ಎಜುಕೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅವರು ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದರು. ನಿಸರ್ಗದಲ್ಲಿ ದೇವರನ್ನು ಕಂಡವರು ನಾವು. ಕೇರಳದಲ್ಲಿ ಪ್ರಖ್ಯಾತವಾಗಿರುವ ಓಣಂ ಹಬ್ಬವನ್ನು ಆಚರಿಸುವ ಮೂಲಕ ಭಾರತೀಯತೆಯನ್ನು ಎತ್ತಿ ಹಿಡಿಯುವ ಕೆಲಸ ನಮ್ಮ ಕಾಲೇಜಿನ ಮೂಲಕ ಆಗುತ್ತಿದೆ ಎಂದು ಗಣೇಶ್ ರಾವ್ ಹೇಳಿದರು.
ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಲತಾ ಜಿ. ರಾವ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಅನೀಶಾ ಖತೀಜಾ, ಅಭಿಲಾಷ್ ಮುಖ್ಯ ಅತಿಥಿಗಳಾಗಿದ್ದರು. ಕರಾವಳಿ ಕಾಲೇಜು ಸಮೂಹದ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಡಾ| ನಾರಾಯಣ ಸ್ವಾಮಿ, ಡಾ| ಆರ್.ಕೆ. ಭಟ್, ಪ್ರೊ| ಮೋಹನ್ ನಾಯಕ್, ಪ್ರೊ| ವಿನ್ಸೆಂಟ್ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಪದ್ಮಶ್ರೀ ಸ್ವಾಗತಿಸಿದರು. ಶ್ರುತಿ ವಂದಿಸಿದರು. ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.
ಓಣಂ ಸಂಭ್ರಮಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಬೆಳಗ್ಗೆ ಆತ್ತ ಪೂಕಳಂ (ಹೂವಿನ ರಂಗೋಲಿ) ಅಂತರ್ ಕಾಲೇಜು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಸಂಜೆ ನಗರದ ಉರ್ವಸ್ಟೋರ್ ನಿಂದ ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್ ಮೂಲಕ ಆಕರ್ಷಕ ಕೇರಳ ಶೈಲಿಯ ಮೋಹಿನಿ ಆಟ್ಟಂ, ತಿರುವಾದಿರ, ಕಥಕ್ಕಳಿ, ಕೇರಳ ಸಾಂಪ್ರಾದಾಯಿಕ ವೇಷ – ಭೂಷಣ ಹಾಗೂ ಆಮಂತ್ರಿತ ಗಣ್ಯರೊಂದಿಗೆ ಮೆರೆವಣಿಗೆ ನಡೆಯಿತು.
ಬಳಿಕ ಕೇರಳೀಯ ಶೈಲಿಯ ಕಲರೀಪೈಟ್ (ಕತ್ತಿ ವರಸೆ), ಕೇರಳಿಯ ಚೆಂದೆವಾದನ, ಮೋಹಿನಿ, ಆಟ್ಟಂ, ತಿರುವಾದಿರ (ಓಣಂ ನ್ಯತ್ಯ), ಅತ್ತ ಪೂಕಳಂ, (ಕೇರಳೀಯ ಶೈಲಿಯ ಹೂವಿನ ರಂಗೋಲಿ), ಪುಲಿಕಲಿ(ಹುಲಿವೇಷ), ಮಾವೇಲಿ (ಮಹಾಬಲಿ), ಒಪ್ಪಣ (ಕೇರಳ ಮುಸ್ಲಿಂ ಮಹಿಳೆಯರ ಸಾಂಪ್ರಾದಾಯಿಕ ನೃತ್ಯ), ಓಣಂ ಪಾಟ್ (ಓಣಂ ಸಾಂಪ್ರಾದಾಯಿಕ ಹಾಡು ), ನಾಡನ್ ಪಾಟ್( ಓಣಂ ಜಾನಪದ ಹಾಡುಗಳು), ನಾಡನ್ ಕಲಾ ( ಓಣಂ ಜಾನಪದ ನೃತ್ಯ) ಮುಂತಾದ ವಿಶೇಷ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು.



























































