ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ ಎಗ್ಗಿಲ್ಲದೇ ನಡೀತಿದೆ ಗೋಕಳ್ಳತನ |ಕೊಟ್ಟಿಗೆಗೆ ನುಗ್ಗಿ ಕದಿತಾರೆ, ರಾತ್ರೋರಾತ್ರೀ ಹಿಂಸಾತ್ಮಕವಾಗಿ ಸಾಗಿಸ್ತಾರೆ

Pinterest LinkedIn Tumblr

ಕುಂದಾಪುರ: ಕಳೆದ 2-3 ತಿಂಗಳುಗಳಿಂದೀಚೆಗೆ ಕುಂದಾಪುರ ತಾಲೂಕಿನಾದ್ಯಂತ ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದ್ದು ಇದಕ್ಕೆ ಇಲಾಖೆ ಅತೀ ಶೀಘ್ರವೇ ಕಡಿವಾಣ ಹಾಕಬೇಕಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿ ಹಲವು ಮುಂಜಾಗೃತಾ ಕ್ರಮ ಕೈಗೊಂಡಿದೆಯಾದರೂ ನಿತ್ಯವೂ ಜಿಲ್ಲೆ ಸೇರಿದಂತೆ ಕುಂದಾಪುರ ತಾಲೂಕಿನ ವಿವಿದೆಡೆಯಲ್ಲಿ ಗೋಕಳ್ಳತನ ಹಾಗೂ ಅಕ್ರಮ ಸಾಗಾಟದಂತಹ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿರುವುದು ಜನರಲ್ಲಿ ಆತಂಕವನ್ನುಂಟುಮಾಡಿದೆ.

ಕೊಟ್ಟಿಗೆಗೆ ನುಗ್ಗಿ ಕದಿತಾರೆ?: ಕೆಲವಾರು ತಿಂಗಳುಗಳಿಂದ ಕುಂದಾಪುರ ತಾಲೂಕಿನ ಬೈಂದೂರು, ಗಂಗೊಳ್ಳಿ, ಕೊಲ್ಲೂರು, ಶಂಕರನಾರಾಯಣ, ಅಮಾಸೆಬೈಲು ಹಾಗೂ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೋಕಳ್ಳತನ ಹಾಗೂ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಕಡೆಗಳಲ್ಲಿ ದುಷ್ಕರ್ಮಿಗಳು ನೇರವಾಗಿ ಕೊಟ್ಟಿಗೆಗೆ ನುಗ್ಗಿ ಜಾನುವಾರು ಕಳವುಗೈಯುತ್ತಿರುವುದು ಕಂಡುಬರುತ್ತಿದೆ, ಅಲ್ಲದೇ ದನಗಳನ್ನು ಮೇವಿಗಾಗಿ ಬಿಟ್ಟಿರುವ ಹಾಡಿ ಮತ್ತು ಕಾಡು ಪ್ರದೇಶಗಳಳಲ್ಲಿಯೇ ಕಳವು ಮಾಡುತ್ತಿರುವ ಕೃತ್ಯಗಳು ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಬಯಲಾಗಿದೆ. ಅಲ್ಲದೇ ಹಾಡುಹಗಲೇ ಜಾನುವಾರು ಕಳವಿಗೂ ತಂತ್ರ ರೂಪಿಸಿ ಸಿಕ್ಕಿಬಿದ್ದ ಘಟನೆಗಳೂ ತಾಲೂಕಿನಲ್ಲಿ ನಡೆದಿರುವುದು ಗೋಕಳ್ಳರ ಬಗ್ಗೆ ಸಾಮಾನ್ಯ ಜನರು, ಕೃಷಿಕರು ಮತ್ತು ಜಾನುವಾರು ಸಾಕಣಿಕೆದಾರರಲ್ಲಿ ಭೀತಿಯನ್ನುಂಟುಮಾಡಿದೆ. ಕುಂದಾಪುರದ ಕೋಡಿ, ಕಂಡ್ಲೂರು, ಕೋಟ, ಗಂಗೊಳ್ಳಿ, ಹಕ್ಲಾಡಿ, ಬೈಂದೂರು ಸೇರಿದಂತೆ ಹಲವಡೆಗಳಲ್ಲಿ ಈ ದನಗಳ್ಳತತನ ಹಾಗೂ ಅಕ್ರಮ ಸಾಗಾಟದಂತಹ ಪ್ರಕರಣಗಳು ಇತ್ತೀಚಿನ ಕೆಲವು ತಿಂಗಳುಗಳಿಂದೀಚೆಗೆ ವ್ಯಾಪಕವಾಗಿ ನಡೆದಿದೆ.

ಹಿಂಸಾತ್ಮಕ ಸಾಗಾಟ: ಇನ್ನು ಮಾಂಸಕ್ಕಾಗಿ ಜಾನುವಾರುಗಳನ್ನು ಅಲ್ಲಲ್ಲಿ ಕದ್ದು ಅದನ್ನು ಗೋ ಕಳ್ಳರು ಸಾಗಿಸುವ ಪರಿ ನಿಜಕ್ಕೂ ಅಮಾನವೀಯವಾಗಿದೆ. ದನ-ಕರುಗಳನ್ನು ಕೈಕಾಲು ಕಟ್ಟಿ ಅವುಗಳನ್ನು ಹಿಂಸಾತ್ಮಕವಾಗಿ ಸಾಗಿಸುವ ಕಟುಕ ಪ್ರವೃತ್ತಿಯ ಇವರು ಇತ್ತೀಚಿನ ದಿನಗಳಲ್ಲಿ ಸಾಗಾಟಕ್ಕಾಗಿ ಓಮ್ನಿ ಕಾರನ್ನು ಹೆಚ್ಚಾಗಿ ಬಳಸುತ್ತಿರುವ ಬಗ್ಗೆ ಕೆಲವು ಮೂಲಗಳು ತಿಳಿಸಿದೆ. ಗೋವುಗಳ ಅಕ್ರಮ ಸಾಗಾಟದ ವೇಳೆ ಜನರಿಗೆ ಹಾಗೂ ಪೊಲೀಸರಿಗೆ ಅನುಮಾನ ಬಾರದಿರಲು ಓಮ್ನಿ ಕಾರನ್ನು ಗೋಕಳ್ಳರು ಬಳಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದಕ್ಕಾಗಿ ಕಾರಿನ ಹಿಭಾಗದ ಎಲ್ಲಾ ಸೀಟುಗಳನ್ನು ತೆಗೆದು ಜಾನುವಾರುಗಳನ್ನು ತುಂಬಲು ಬೇಕಾದ ಜಾಗದ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಒಂದು ಓಮ್ನಿ ಕಾರಿನಲ್ಲಿ ಐದಕ್ಕೂ ಅಧಿಕ ಜಾನುವಾರುಗಳನ್ನು ತುಂಬಿಸಿ ಹಿಂಸಾತ್ಮಕವಾಗಿ ಸಾಗಿಸುತ್ತಾರೆ. ಹೀಗೆ ಸಾಗಾಟದ ವೇಳೆ ಅದೆಷ್ಟೋ ಜಾನುವಾರುಗಳು ಗಾಯಗೊಂಡರೇ ಕೆಲವು ಜಾನುವಾರುಗಳು ಈ ಹಿಂಸೆಯಿಂದ ಸಾವನ್ನಪ್ಪಿದೆ.

Kndpr_Cow_Rescue (12) Kndpr_Cow_Rescue (11) Kndpr_Cow_Rescue (10) Kndpr_Cow_Rescue (15)

ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕ್ರಮ:
ಇತ್ತೀಚೆಗೆ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಅಕ್ರಮ ಗೋಸಾಗಾಟ ಹಾಗೂ ಗೋಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಚಿಸಲಾದ ವಿಶೇಷ ತಂಡಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದು, ರಾತ್ರಿ ವೇಳೆ ಕಡ್ಡಾಯವಾಗಿ ರೌಂಡ್ಸ್ ನಡೆಸುವಂತೆ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲೆಯ ಹಲವೆಡೆ ಈಗಾಲೇ ಚೆಕ್ ಪೋಸ್ಟ್ ತೆರೆಯುವುದು ಸೇರಿದಂತೆ ಮೊದಲಾದ ಮುಂಜಾಗೃತ ಕ್ರಮವನ್ನು ಪೊಲೀಸರು ಮಾಡಿದ್ದಾರೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಅಕ್ರಮ ಗೋ ಸಾಗಾಣಿಕೆಗಳಲ್ಲಿ ಭಾಗಿಯಾಗಿದ್ದವರ ಪೆರೇಡನ್ನು ನಡೆಸುತ್ತಿದ್ದು, ಪ್ರಸ್ತುತ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ವಾರಗಳ ಹಿಂದಷ್ಟೇ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದನ ಕಳ್ಳತನದ ಬಗ್ಗೆ ಈ ಹಿಂದೆ ಪ್ರಕರಣವಿರುವ ೧೩೭ ಜನರನ್ನು ಠಾಣೆಗೆ ಕರೆಯಿಸಿ ಪರೇಡ್ ನಡೆಸಲಾಗಿದ್ದು ಈ ವೇಳೆ ಗಂಗೊಳ್ಳಿ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯ ೨೫ಕ್ಕೂ ಅಧಿಕ ಜನರನ್ನು ಕರೆಯಿಸಿ ಅವರ ಬಳಿ ಸಂಪೂರ್ಣ ಮಾಹಿತಿ ಪಡೆದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಶೀಘ್ರ ಕಡಿವಾಣ ಹಾಕ್ತೇವೆ: ಎಸ್ಪಿ ಅಣ್ಣಾಮಲೈ
ಅಕ್ರಮ ಗೋ ಸಾಗಾಟ ಕೃತ್ಯವನ್ನು ತಡೆಯಲು ಆಯಕಟ್ಟಿನ ಸ್ಥಳಗಳಲ್ಲಿ ಈಗಾಗಲೇ ೨೦ಕ್ಕೂ ಅಧಿಕ ಚೆಕ್ ಪೋಸ್ಟ್ ರಚಿಸಿದ್ದು ಅಲ್ಲಿ ಕರ್ತವ್ಯದಲ್ಲಿರುವ ಪೊಲೀಸರಿಗೆ ಶಸ್ತ್ರಗಳನ್ನು ನೀಡಲಾಗಿದೆ. ಆರೋಪಿಗಳು ತಪ್ಪಿಸಿಕೊಳ್ಳುವ ಬರದಲ್ಲಿ ಪೊಲೀಸರ ಮೇಲೆಯೂ ಆಕ್ರಮಣಕ್ಕೆ ಮುಂದಾಗಿರುವ ಬಗ್ಗೆ ಈಗಾಗಲೇ ಮಾಹಿತಿಗಳು ಬಂದಿದೆ. ಒಂದೊಮ್ಮೆ ಜಾನುವಾರು ಸಾಗಾಟ ಮಾಡುವವರು ಪೊಲೀಸರ ಮೇಲೆಯೇ ಆಕ್ರಮಣಕ್ಕೆ ಮುಂದಾದರೇ ಆ ಸಂದರ್ಭ ಆತ್ಮರಕ್ಷಣೆಗಾಗಿ ಸೂಕ್ತ ಕ್ರಮವನ್ನೇ ಕೈಗೊಳ್ಳುತ್ತೇವೆ ಎಂದ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಪತ್ರಿಕೆಗೆ ತಿಳಿಸಿದ್ದಾರೆ.

ಕಡಿವಾಣ ಬೀಳಬೇಕಿದೆ: ಪೊಲೀಸರು ಜಾನುವಾರು ಸಾಗಾಟದ ತಡೆಗೆ ಸೂಕ್ತ ಮುಂಜಾಗೃತ ಕ್ರಮವನ್ನು ಕೈಗೊಂಡ ಬಳಿಕವೂ ಗೋಕಳ್ಳರ ಕೃತ್ಯಗಳು ತಾಲೂಕಿನಾದ್ಯಂತ ಎಗ್ಗಿಲ್ಲದೇ ಸಾಗುತ್ತಿದೆ. ಇದರಿಂದ ಹೈನುಗಾರರು ಸೇರಿದಂತೆ ಸಾನಾನ್ಯ ಜನರನ್ನು ನಿದ್ದೆಗೆಡಿಸಿದೆ. ಹಲವೆಡೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಗೋಕಳ್ಳತನ ಮತ್ತು ಸಾಗಾಟದಂತಹ ಪ್ರಕರಣವನ್ನು ತಡೆಯುತ್ತಿದ್ದರೂ ಕೂಡ ಗ್ರಾಮೀಣ ಭಾಗಗಳಲ್ಲಿ ಕದ್ದುಮುಚ್ಚಿ ಈ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿ ಈ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ.

ವರದಿ- ಯೋಗೀಶ್ ಕುಂಭಾಸಿ

Write A Comment