ಮಂಗಳೂರು, ಸೆ. 5: ಮಂಗಳೂರು ನಗರ ವ್ಯಾಪ್ತಿಯಲ್ಲಿ ಕನ್ನ ಕಳವು ಹಾಗೂ ವಾಹನ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿಮಾಡಿ ಆತನ ವಶದಿಂದ ಕಳವುಗೈದ 2 ಹೊಂಡಾ ಅಕ್ಟಿವಾ ಸ್ಕೂಟರ್ ನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಕಂಕನಾಡಿಯ ಬಾಲಿಕಾಶ್ರಮ ರಸ್ತೆಯ ಎಲಿಸನ್ ಹೈಟ್ಸ್ ಅಪಾರ್ಟ್‌ಮೆಂಟ್ನ ನಿವಾಸಿ ಮುನೀರ್ ಅಹ್ಮದ್ ಯಾನೆ ಗೂಡ್ಸ್ ಮುನೀರ್ ಎಂದು ಗುರುತಿಸಲಾಗಿದೆ. ಈತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆ ಸಮಯದಲ್ಲಿ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ 50ಕ್ಕೂ ಅಧಿಕ ಕಳವು ಪ್ರಕರಣಗಳು ದಾಖಲಾಗಿವೆ.
ಶುಕ್ರವಾರ ಸಿಸಿಬಿ ಪೊಲೀಸ್ ನಿರೀಕ್ಷಕ ವೆಲೆಂಟೈನ್ ಡಿ ಸೋಜಾ ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಆ್ಯಕ್ಟಿವಾ ಹೊಂಡಾದಲ್ಲಿ ತಿರುಗಾಡುತ್ತಿದ್ದಾಗ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನ ಬಳಿಯಿದ್ದ ಆಕ್ಟಿವಾ ಹೊಂಡಾ ದ್ವಿಚಕ್ರ ವಾಹನವು ಕಳವು ಮಾಡಿದ್ದೆಂದು ತಪ್ಪೊಪ್ಪಿಕೊಂಡಿದ್ದಾನೆ. ಈ ವಾಹನವು ಜೂನ್ ತಿಂಗಳಲ್ಲಿ ಮಂಗಳೂರು ಅಝೀಝುದ್ದೀನ್ ರಸ್ತೆಯಲ್ಲಿ ಪಾರ್ಕ್ ಮಾಡಿದ್ದನ್ನು ಕಳವು ಮಾಡಿದ್ದ. ಸದ್ರಿ ವಾಹನಕ್ಕೆ ನಕಲಿ ನಂಬರ್ ಪ್ಲೇಟ್‌ನ್ನು ಅಳವಡಿಸಿ ತಿರುಗಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮುನೀರ್ ಅಹಮ್ಮದ್ ಈ ಹಿಂದೆ ಸುಮಾರು 50 ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮಂಗಳೂರು ನಗರದಲ್ಲಿ ಸುಮಾರು 45 ಕಳವು, ಮತೀಯ ಗಲಭೆ ಹಾಗೂ ವಾಹನ ಕಳವು ಪ್ರಕರಣಗಳು ದಾಖಲಾಗಿರುವುದಲ್ಲದೇ ಕೇರಳದ ತಲಶ್ಶೇರಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೇ ಈತನು ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ಮುಗಿದು ಶಿಕ್ಷೆಯ ಅದೇಶ ಪ್ರಕಟವಾಗುತ್ತಿದ್ದ ಸಮಯ ನ್ಯಾಯಾಲಯದ ಕೊಠಡಿಯ ಆವರಣದಿಂದ ಓಡಿ ಪರಾರಿಯಾಗಿದ್ದನು. ಈತನು 1980 ನೇ ಇಸವಿಯಲ್ಲಿ ಕಳ್ಳತನ ಮಾಡಲು ಪ್ರಾರಂಭಿಸಿದ್ದು, ಇದೇ ಕೃತ್ಯವನ್ನು ಈಗಲೂ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ದ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯಲ್ಲಿಯೇ ಒಟ್ಟು 22 ಪ್ರಕರಣ ದಾಖಲಾಗಿರುತ್ತದೆ. ಇತ್ತೀಚೆಗೆ ಎರಡು ತಿಂಗಳ ಹಿಂದೆ ಈತನ ತಮ್ಮ ಅಬ್ದುಲ್ ರಹೀಂ @ ಗೂಡ್ಸ್ ರಹೀಂ @ ಕಂಡಿ ರಹೀಂ ಎಂಬಾತನನ್ನು ಈ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿ ಆತನಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಇನ್ನೋರ್ವ ತಮ್ಮ ಫಾರೂಕ್ ಎಂಬಾತನನ್ನು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸರು ದಸ್ತಗಿರಿ ಮಾಡಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಈತನು ಹಲವು ವ್ಯಕ್ತಿಗಳಿಂದ ಹಣವನ್ನು ಸಾಲವಾಗಿ ಪಡೆದು ನಂತರ ಸಾಲ ನೀಡಿದ ಹಣವನ್ನು ವಾಪಾಸು ಕೇಳಿದಾಗ ತನ್ನ ಹೆಂಡತಿಯ ಮೂಲಕ ಪೊಲೀಸ್ ಠಾಣೆಗಳಲ್ಲಿ ಸುಳ್ಳು ದೂರನ್ನು ನೀಡುವುದಾಗಿರುತ್ತದೆ. ಈತನು ಹಾಗೂ ಈತನ ಮನೆಯವರು ಕಳವು ಹಾಗೂ ಸಮಾಜಘಾತುಕ ಕೃತ್ಯದಲ್ಲಿ ಭಾಗಿಯಾಗಿದ್ದು, ಇವರನ್ನು ದಸ್ತಗಿರಿ ಮಾಡಿದಾಗ ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಬೇನಾಮಿ ವ್ಯಕ್ತಿಗಳಿಂದ ಪೊಲೀಸ್ ಇಲಾಖೆಯ ವಿರುದ್ಧ ಸುಳ್ಳು ಆಪಾದನೆ ಮಾಡುತ್ತಿರುವುದಾಗಿದೆ.
ಆರೋಪಿ ಮುನೀರ್‌ನಿಂದ ವಶಪಡಿಸಿಕೊಂಡ 2 ಹೊಂಡಾ ಆ್ಯಕ್ಟಿವಾ ವಾಹನವನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮಿಷನರ್ ಎಸ್.ಮುರುಗನ್‌ರ ಆದೇಶದಂತೆ ಡಿಸಿಪಿ ಕೆ.ಎಂ. ಶಾಂತರಾಜು ಹಾಗೂ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್‌ರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.