ಉಡುಪಿ: ದೇವಳ ನಗರಿ, ಪೊಡವಿಗೊಡೆಯನ ನಾಡು ಎಂದೇ ಖ್ಯಾತಿಯಾದ ಉಡುಪಿ ನಗರದ ತುಂಬೆಲ್ಲಾ ಈಗ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಡಗರ, ಸಂಭ್ರಮ. ಶ್ರೀ ಕೃಷ್ಣನ ಆರಾಧನೆ ನಡೆಯುವಲ್ಲೆಲ್ಲಾ ವಿಶೇಷ ಕಾರ್ಯಕ್ರಮಗಳೊಂದಿಗೆ ನಡೆಯುವ ಶ್ರೀ ಕೃಷ್ಣ ಜಯಂತಿ ಹಾಗೂ ವಿಟ್ಲಪಿಂಡಿ ಕಾರ್ಯಕ್ರಮಗಳಿಗೆ ಉಡುಪಿ ಸಜ್ಜಾಗಿದೆ.
ವಿಟ್ಲಪಿಂಡಿಯ ಲೀಲೋತ್ಸವ, ಬಣ್ಣಗಳ ಓಕುಳಿಯಾಟಕ್ಕಾಗಿ ಈಗಾಗಲೇ ನಾಡಿನ ನಾನಾ ಭಾಗಗಳಿಂದ ಜನತೆ ಉಡುಪಿಯಲ್ಲಿ ಸೇರತೊಡಗಿದ್ದಾರೆ. ಉಡುಪಿ ನಗರ ಶ್ರೀಕೃಷ್ಣನ ಹುಟ್ಟಿನ ಹಬ್ಬಾಚರಣೆಗೆ ಸಿಂಗಾರವಾಗಿದೆ.
ಸೆ.5 ರಂದು ರಾತ್ರಿ 12.13ಕ್ಕೆ ಸರಿಯಾಗಿ ಪರ್ಯಾಯ ಶ್ರೀಗಳು ಶ್ರೀಕೃಷ್ಣನಿಗೆ ಅರ್ಘ್ಯಪ್ರದಾನ ಮಾಡಲಿದ್ದಾರೆ. ಸೆ.6 ಮಧ್ಯಾಹ್ನ 3 ಗಂಟೆಯಿಂದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ನಡೆಯಲಿದೆ. ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಅಷ್ಟ ದಿನದ ಕಾರ್ಯಕ್ರಮ (ಎಂಟು ದಿನದ ಕಾರ್ಯಕ್ರಮ)ಸೆ.1 ರ ಮಂಗಳವಾರ ಆರಂಭಗೊಂಡಿದ್ದು ನಿರಂತರವಾಗಿ ವಿವಿಧ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿವೆ.