ಕನ್ನಡ ವಾರ್ತೆಗಳು

ಮೈಸೂರು ರಾಜಕುಟುಂಬ ಈಶ್ವರಮಂಗಲ ಪಂಚಮುಖೀ ಶ್ರೀ ಆಂಜನೇಯ ಕ್ಷೇತ್ರಕ್ಕೆ ಭೇಟಿ : ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜಮಾತೆ

Pinterest LinkedIn Tumblr

Mysore_devi_Puttur_1

ಪುತ್ತೂರು, ಆ.30 : ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿರುವ ಪಂಚಮುಖೀ ಆಂಜನೇಯ ಕ್ಷೇತ್ರಕ್ಕೆ ಶನಿವಾರ ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಸಹಿತಾ ಮೈಸೂರು ರಾಜಕುಟುಂಬ ಭೇಟಿ ನೀಡಿದ್ದಾರೆ. ಈ ಸಂದರ್ಭ ರಾಜಮಾತೆ ಪ್ರಮೋದಾ ದೇವಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ನಮ್ಮ ರಾಜ್ಯದಲ್ಲೇ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದ್ದು, ಉತ್ತಮ ಸಾಕ್ಷರತೆ ಹೊಂದಿದೆ. ಇದನ್ನು ನಾನು ಹಿಂದಿನಿಂದಲೇ ಗಮನಿಸಿದ್ದು, ತುಂಬಾ ಖುಷಿ ಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಶ್ವರ ಮಂಗಳ ಪಂಚಮುಖೀ ಆಂಜನೇಯ ಕ್ಷೇತ್ರಕ್ಕೆ ಮೊದಲ ಬಾರಿ ಆಗಮಿಸಿದ್ದೇನೆ. ಇಲ್ಲಿ ದೇವರ ದರ್ಶನ ನೆಮ್ಮದಿ ಕೊಟ್ಟಿದೆ. ಆಂಜನೇಯ ಕರೆಸಿಕೊಂಡರೆ ಮತ್ತೆ ಮತ್ತೆ ಬರುತ್ತೇನೆ ಎಂದವರು ನುಡಿದರು. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೊದಲ ಬಾರಿಯ ಭೇಟಿ ರೋಮಾಂಚನ ನೀಡಿದೆ. ಮತ್ತೆ ಮತ್ತೆ ಇಲ್ಲಿಗೆ ಬರಬೇಕೆಂಬ ಆಸೆಯಾಗುತ್ತಿದೆ ಎಂದರು.

ಮೈಸೂರು ಮಹಾರಾಜರಾಗಿ ಪಟ್ಟವೇರಿದ ಬಳಿಕ ಇದೇ ಮೊದಲ ಬಾರಿಗೆ ರಾಜಮಾತೆಯೊಂದಿಗೆ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿದ ಮಹಾರಾಜರು ಬೆಳಗ್ಗೆ 11 ಗಂಟೆ ಸುಮಾರಿಗೆ ಮೈಸೂರಿನಿಂದ ಬಂದು ಕಾವು ಮೂಲಕ ಈಶ್ವರ ಮಂಗಳ ತಲುಪಿದರು.

Mysore_devi_Puttur_2 Mysore_devi_Puttur_3 Mysore_devi_Puttur_4 Mysore_devi_Puttur_5 Mysore_devi_Puttur_6 Mysore_devi_Puttur_7 Mysore_devi_Puttur_8

ರಾಜವಂಶಸ್ಥರ ಭವ್ಯ ಮೆರವಣಿಗೆ :

ರಾಜವಂಶಸ್ಥರನ್ನು ಈಶ್ವರಮಂಗಳ ಪೇಟೆಯಿಂದ ಅಲಂಕೃತ ತೆರೆದ ವಾಹನದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯಲ್ಲಿ ಹನುಮಗಿರಿಗೆ ಕರೆದೊಯ್ಯಲಾಯಿತು.

ರಾಜಮಾತೆಯೊಂದಿಗೆ ಆಂಜನೇಯ ದರ್ಶನ ಮಾಡಿ ಪೂಜೆ ಸಲ್ಲಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಈ ಸಂದರ್ಭ ನವರತ್ನ ಖಚಿತವಾದ ಗದೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಕ್ಷೇತ್ರದ ವತಿಯಿಂದ ರಾಜರಿಗೆ ಸ್ವರ್ಣಲೇಪಿತ ಆಂಜನೇಯ ವಿಗ್ರಹವನ್ನು ನೀಡಿ, ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕ್ಷೇತ್ರದ ವರಾಹ ಮಂಟಪ ನಿರ್ಮಾಣಕ್ಕೆ ಅರಸರು ಭೂಮಿ ಪೂಜೆ ನೆರವೇರಿಸಿದರು. ವಾಲ್ಮೀಕಿ ವಿಹಾರ ಎಂಬ ಹೆಸರಿನ ಮಕ್ಕಳ ಆಶ್ರಮದ ವಿಸ್ತರಿತ ಕಟ್ಟಡ ಮತ್ತು ಶ್ರೀ ಕ್ಷೇತ್ರದ ನಿರಂತರ ಅನ್ನದಾನ ಕಾರ್ಯಕ್ರಮಕ್ಕೆ ರಾಜಮಾತೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಚಿಂತಕ ಸಂತೋಷ್ ಜಿ. ಅವರು ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ಶಾಸಕಿ ಶಕುಂತಳಾ ಶೆಟ್ಟಿ ವಹಿಸಿದ್ದರು. ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಸಿ.ಎಸ್. ಅಶ್ವತ್ಥ ನಾರಾಯಣ, ಬ್ರಹ್ಮಶ್ರೀ ರವೀಶ ತಂತ್ರಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಂಕರಿ ಭಂಡಾರಿ, ಉಪಾಧ್ಯಕ್ಷ ಶ್ರೀರಾಮ ಪಕ್ಕಳ, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ, ಧರ್ಮಶ್ರೀ ಪ್ರತಿಷ್ಠಾನದ ಮಹಾ ಪೋಷಕ ಕೊನೆತೋಟ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ ಸ್ವಾಗತಿಸಿದರು. ಶಿವರಾಮ ವಂದಿಸಿದರು. ನ್ಯಾಯವಾದಿ ಮಹೇಶ್ ಕಜೆ ಕಾಯಕ್ರಮ ನಿರೂಪಿಸಿದರು.

Write A Comment