ಮಂಗಳೂರು, ಆ.24 : ಮಾನವ ಹಕ್ಕುಗಳಲ್ಲಿ ಪ್ರಮುಖವಾದ ಬದುಕುವ ಹಕ್ಕು ಸಮರ್ಪಕವಾಗಿ ಅನುಷ್ಠಾನವಾದರೆ ಶೋಷಣೆ ನಿಲ್ಲುತ್ತದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ.ಹುನಗುಂದ ಹೇಳಿದರು. ನಗರದಲ್ಲಿ ಭಾನುವಾರ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಜಿಲ್ಲಾ ಸಮಿತಿ ಆಯೋಜನೆ ಮಾಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಡವರ ಬಗ್ಗೆ ಆಸ್ಪತ್ರೆಗಳು ಕಾಳಜಿ ತೋರಬೇಕು. ಸುಂದರ ಮಲೆಕುಡಿಯ ನಂಥವರ ಬಗ್ಗೆ ಗಮನ ಹರಿಸಬೇಕು. ಸಮಾಜದಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಜಿಲ್ಲಾ ಮಟ್ಟದ ಆಸ್ಪತ್ರೆಗಳು ಕೂಡ ಪೂರ್ಣಕಾಲಿಕ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ, ಎಕ್ಸ್‌ರೇ, ಲ್ಯಾಬ್ ಸೇರಿದಂತೆ ಆವಶ್ಯಕ ಸಲಕರಣೆ ಗಳ ನ್ನು ಹೊಂದಿರಬೇಕು. ಬಡವರು ಸೂಕ್ತ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಪ್ರತಿ ಜಿಲ್ಲಾ ಆಸ್ಪತ್ರೆ ಗಳು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಾಗಿ ಪರಿವರ್ತನೆ ಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ರಾಜ್ಯದ ಮಾನವ ಹಕ್ಕು ಆಯೋಗಕ್ಕೆ ಅತೀ ಹೆಚ್ಚು ಪೊಲೀಸ್ ದೌರ್ಜನ್ಯದ ದೂರುಗಳು ಬರುತ್ತಿವೆ. ಸರಕಾರಿ ಕೆಲಸದಲ್ಲಿರುವವರಿಗೆ ತಮ್ಮ ಕೆಲಸದ ಬಗ್ಗೆ ಅಭಿಮಾನವಿರಬೇಕು, ಆದರೆ ದುರಹಂಕಾರ ಇರಬಾರದು. ಈ ಗುಣವನ್ನು ತಮ್ಮಲ್ಲಿ ರೂಢಿಸಿಕೊಂಡರೆ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳ ಪ್ರಮಾಣ ಕಡಿಮೆಯಾಗಬಹುದು. ಅಧಿಕಾರಿಗಳು ತಮ್ಮ ಕೆಲಸದ ಜೊತೆ ತಮ್ಮಲ್ಲಿ ಕಷ್ಟ ಹೇಳಿಕೊಂಡು ಬರುವವರ ಬಗ್ಗೆ ಅನುಕಂಪವನ್ನು ಹೊಂದಿರ ಬೇಕು. ಇನ್ನೊಬ್ಬರ ನೋವು ನಲಿವು ತಿಳಿಯ ಬೇಕಾದರೆ ಈ ರೀತಿಯ ಮನೋಭಾವನೆ ಹೊಂದಿರಬೇಕು. ಅಂತಹ ಬದಲಾವಣೆ ಆದಾಗ ಕಷ್ಟದಲ್ಲಿರುವವರ ಅರ್ಧ ಸಮಸ್ಯೆಯನ್ನು ಕ್ಷಣಾರ್ಧದಲ್ಲಿಯೇ ಬಗೆಹರಿಸಿದಂತಹ ಭಾವನೆ ಅವರಲ್ಲಿ ಮೂಡುತ್ತದೆ ಎಂದರು.
ಈ ಸಂಧರ್ಭದಲ್ಲಿ ಸುಂದರ ಮಲೆಕುಡಿಯ ಅವರ ಚಿಕಿತ್ಸೆಗೆ ಸಂಬಂಧಪಟ್ಟ ವಿಷಯ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ 20 ಮಂದಿಯಿಂದ ದೂರುಗಳನ್ನು ಅವರು ಸ್ವೀಕರಿಸಿದರು.
ಸಮಾರಂಭದಲ್ಲಿ ಡಿಸಿಪಿ ಶಾಂತರಾಜು, ಮನಪಾ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಕೇಂದ್ರ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಜಯರಾಮ್ ಶೆಟ್ಟಿ, ಕಾರ್ಯನಿರ್ವಾಹಕ ನಿರ್ದೇಶಕ ವಿಜಯಪ್ರಸಾದ ಆಳ್ವ, ನ್ಯಾಯ ಮತ್ತು ದೂರು ಸಮಿತಿಯ ಅಧ್ಯಕ್ಷ ಹನೀಫ್ ಸಾಹೇಬ್, ಮಹಿಳಾ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪ್ರಭಾಕರ್, ಜಿಲ್ಲಾ ಕಚೇರಿ ಪ್ರಬಂಧಕ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.