ಮಂಗಳೂರು, ಆ.15 : ದ.ಕ. ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಿತ್ತು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ರಾಜ್ಯ ಸರ್ಕಾರ ಬಡವರು, ದೀನದಲಿತರ ಕಲ್ಯಾಣಕ್ಕಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ತಮ್ಮ ಸಂದೇಶದಲ್ಲಿ ಕರೆ ನೀಡಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವುದನ್ನು ಅರಿತು ಶಾಲಾಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ ಮೂಲಕ ಪೌಷ್ಠಿಕ ಹಾಲು, ಆಹಾರ ಕೊಡುತ್ತಿದೆ, ಈ ಮೂಲಕ ರಾಜ್ಯವನ್ನು ಹಸಿವುಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಪಣತೊಟ್ಟಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.
ಅನ್ನಭಾಗ್ಯ, ವಿದ್ಯಾಶ್ರೀ, ಮೈತ್ರಿ ಹೀಗೆ ಎಲ್ಲಾ ಜನವರ್ಗದ ಅಭ್ಯುದಯಕ್ಕಾಗಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರು, ಹಿಂದುಳಿದವರು, ಅಲ್ಪ ಸಂಖ್ಯಾತರು, ರೈತರು, ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಸಿಗಬೇಕೆನ್ನುವ ಸಂಕಲ್ಪ ಸರ್ಕಾರದ್ದು ಎಂದು ಹೇಳಿದರು.
ಶಿರಾಡಿ ಘಾಟಿ ಪ್ರದೇಶದಲ್ಲಿ ಸರ್ಕಾರ 13 ಕಿ.ಮೀ ರಸ್ತೆಯನ್ನು ಸುಮಾರು 69 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ. ಎರಡನೇ ಹಂತದಲ್ಲಿ 11.77 ಕಿ.ಮೀ ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ. ಪಡೀಲ್ ಅಳಪೆಯಲ್ಲಿ 5.89 ಎಕ್ರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸುಮಾರು 40 ಕೋಟಿ ರೂಪಾಯಿ ಮಂಜೂರು ಮಾಡಿದ್ದು ಅಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡಲಾಗುವುದು ಎಂದರಲ್ಲದೇ ಸುಳ್ಯ, ಪುತ್ತೂರಿನಲ್ಲೂ ಮಿನಿ ವಿಧಾನ ಸೌಧನಿರ್ಮಾಣ ಯೋಜನೆ ಅನುಷ್ಠಾನವಾಗಲಿದೆ ಎಂದರಲ್ಲದೇ ಬಂಟ್ವಾಳದಲ್ಲಿ ಮಿನಿ ವಿಧಾನಸೌಧಕೆ 5 ಕೋಟಿ ರೂಪಾಯಿ ಮಂಜೂರಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯ್ದಿನ್ ಬಾವ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕಸಾಪ ಜಿಲ್ಲಾಧ್ಯಕ್ಷ ಎಸ್ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಾಯ್ ಕ್ಯಾಸ್ಟಲಿನೋ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ದ.ಕ.ಜಿಲ್ಲಾ ಪಂಚಯಾತ್ ಸಿಇಒ ಶ್ರೀಮತಿ ವಿಧ್ಯಾ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ, ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್.ಮುರುಗನ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿದ ಇಲಾಖಾ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.